ತಾಲೂಕಿನಲ್ಲಿ ಕೆಲವರು ಸರ್ಕಾರದ ಜಾಗಗಳನ್ನು ಸುಳ್ಳು ದಾಖಲೆಗಳನ್ನು ಸೃಷ್ಠಿಸಿಕೊಂಡು ಕಬಳಿಸಿಕೊಳ್ಳುತ್ತಿದ್ದಾರೆ. ಅವರ ಬಗ್ಗೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಸರ್ಕಾರದ ಜಾಗಗಳನ್ನು ಉಳಿಸಿಕೊಂಡರೆ, ಸಾರ್ವಜನಿಕರ ಹಾಗೂ ಇಲಾಖೆಯ ಕಚೇರಿಗಳಿಗೆ ಉಪಯೋಗಕ್ಕೆ ಬರುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕಿನಲ್ಲಿ 187 ಸಾಗುವಳಿ ಚೀಟಿಗಳನ್ನು ವಿತರಿಸದೆ ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ. ತಕ್ಷಣ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡುವಂತೆ ಶಾಸಕ ಕೆ.ಎನ್.ರಾಜಣ್ಣ ತಹಸೀಲ್ದಾರ್ ಗೆ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಬಗರ್ ಹುಕ್ಕುಂ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಹಲವು ವರ್ಷಗಳಿಂದ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ 187 ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿರುವುದು ಸರಿಯಲ್ಲ. ಅರ್ಜಿಗಳ ಪರಿಶೀಲನೆ ನಡೆಸಿ ಅರ್ಹರಿಗೆ ಸಾಗುವಳಿ ಚೀಟಿ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಾಗುವಳಿ ಮಾಡುತ್ತಿರುವ ರೈತರು ತಮ್ಮ ಜಮೀನಿನ ಹಕ್ಕುಪತ್ರ ಪಡೆಯಲು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಅರ್ಜಿಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ನಿಯಮಾನುಸಾರ ಅರ್ಹ ಫಲಾನುಭವಿಗಳನ್ನು ಗುರುತಿಸಿ ವಿಲೇವಾರಿ ಮಾಡಬೇಕು. ಅನಗತ್ಯ ವಿಳಂಬ ಮಾಡದೆ ಬಾಕಿ ಅರ್ಜಿಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಂದಾಯ ಹಾಗೂ ಗ್ರಾಮಲೆಕ್ಕಿಗ ಲಾಗಿನ್ ನಲ್ಲಿರುವ ಸಾಗುವಳಿ ಚೀಟಿ ಪ್ರಕರಣಗಳು ಡಿ.10 ರೊಳಗಾಗಿ ಸರ್ವೇ ಇಲಾಖೆಯ ಲಾಗಿನ್ ಗೆ ಪುಷ್ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ತಾಲೂಕಿನಲ್ಲಿ 2357 ಸಾಗುವಳಿ ಚೀಟಿ ಈ ಹಿಂದೆ ನೀಡಿದ್ದು, ಆ ದಾಖಲಾತಿಗಳು ಕಳೆದು ಹೋಗಿವೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದಾಗ, ಆ ರೈತರ ಬಳಿ ಇರುವ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ, ಅವರಿಂದ ಸೂಕ್ತ ದಾಖಲೆಗಳನ್ನು ಡಿ.20ರೊಳಗಾಗಿ ಪಡೆಯಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಬಗರ್ ಹುಕ್ಕುಂ‌ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆಯೋದು , ಹೋಗುವುದೇ ಆಗೋಯ್ತು , ರೈತರ ಪರ ಕೆಲಸಗಳು ಆಗುತ್ತಿಲ್ಲ ಎಂದು ತಿಳಿಸಿ, ಮುಂದಿನ ಸಭೆಗೆ ಉನ್ನತ ಮಟ್ಟದ ಅಧಿಕಾರಿಗಳನ್ನು ಕರೆದುಕೊಂಡು ಬರುವುದಾಗಿ ಶಾಸಕರು ತಿಳಿಸಿದರು.

ತಾಲೂಕಿನಲ್ಲಿ ಮಜರೆ ಗ್ರಾಮಗಳನ್ನು ಗುರುತಿಸಿರುವ ಕಡೆ ರುದ್ರಭೂಮಿಗಳಿಗೂ ಜಾಗವನ್ನು ಮೀಸಲಿಡಬೇಕು ಎಂದು ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು.

ತಾಲೂಕಿನಲ್ಲಿ ಕೆಲವರು ಸರ್ಕಾರದ ಜಾಗಗಳನ್ನು ಸುಳ್ಳು ದಾಖಲೆಗಳನ್ನು ಸೃಷ್ಠಿಸಿಕೊಂಡು ಕಬಳಿಸಿಕೊಳ್ಳುತ್ತಿದ್ದಾರೆ. ಅವರ ಬಗ್ಗೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಸರ್ಕಾರದ ಜಾಗಗಳನ್ನು ಉಳಿಸಿಕೊಂಡರೆ, ಸಾರ್ವಜನಿಕರ ಹಾಗೂ ಇಲಾಖೆಯ ಕಚೇರಿಗಳಿಗೆ ಉಪಯೋಗಕ್ಕೆ ಬರುತ್ತದೆ ಎಂದರು.

ಉಪವಿಭಾಗಾಧಿಕಾರಿ ಗೊಟೂರು ಶಿವಪ್ಪ ಮಾತನಾಡಿ, ಕಂದಾಯ ಹಾಗೂ ಗ್ರಾಮ ಲೆಕ್ಕಿಗರುಗಳಿಗೆ ಯಾವ ರೀತಿ ಕೆಲಸ ಮಾಡುತ್ತಿದ್ದೀರಾ ಎಂದು ಒಬ್ಬೊಬ್ಬರಿಗೆ ಗನ್ ಮ್ಯಾನ್ ಗಳನ್ನು ಇಡಬೇಕಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಹಸೀಲ್ದಾರ್ ನಂದಿನಿ , ತಾಪಂ ಇಒ ಉತ್ತಮ್ , ಬಗರ್ ಹುಕ್ಕುಂ ಸಮಿತಿ ಸದಸ್ಯರಾದ ಎಂ.ಎಸ್.ಮಲ್ಲಿಕಾರ್ಜುನಯ್ಯ , ಸೊಸೈಟಿ ರಾಮಣ್ಣ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.