ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲೆಯಲ್ಲಿ ಮಳೆ-ಬೆಳೆ, ಜಲಾಶಯಗಳ ಸ್ಥಿತಿಗತಿ ಅವಲೋಕಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಕನ್ನಂಬಾಡಿ ಕಟ್ಟೆ 105 ಅಡಿ ಭರ್ತಿಯಾಗಿದ್ದು, ಇನ್ನೂ 19 ಅಡಿ ನೀರು ತುಂಬಲು ಬಾಕಿ ಇದೆ. ಆ ನಿಟ್ಟಿನಲ್ಲಿ ಕಾವೇರಿ ಮಾತೆ ಕೃಪೆ ತೋರಿದಲ್ಲಿ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲವಾಗಲಿದೆ ಎಂದು ಸಚಿವ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದ್ದಾರೆ.ಕೊಡಗಿನ ಭಾಗಮಂಡಲ ಭಗಂಡೇಶ್ವರ ದೇವಾಲಯ ಹಾಗೂ ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿ ಪವಿತ್ರ ಕ್ಷೇತ್ರಕ್ಕೆ ಗುರುವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರು, ಭಗಂಡೇಶ್ವರ ದೇವಾಲಯದಲ್ಲಿ ಹೆಚ್ಚಿನ ಮಳೆ ಬೆಳೆಯಾಗಿ ನಾಡಿಗೆ ಸಮೃದ್ಧಿ ತರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು.ಶ್ರೀ ಮಹಾಗಣಪತಿ, ಶ್ರೀ ಮಹಾವಿಷ್ಣು, ಶ್ರೀ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ತಲಕಾವೇರಿಗೆ ತೆರಳಿ ಶ್ರೀ ಮಹಾ ಗಣಪತಿಗೆ ಪೂಜೆ ಸಲ್ಲಿಸಿ ನಂತರ ತಲಕಾವೇರಿಯಲ್ಲಿ ತಾಯಿ ಕಾವೇರಿ ಮಾತೆಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿ ಕುಂಕುಮಾರ್ಚನೆ ನೆರವೇರಿಸಿದರು.
ಈ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಕಾವೇರಿ ಕಣಿವೆ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಇಡೀ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೆ ಕುಡಿಯುವ ನೀರು ಮತ್ತು ಬೆಳೆಗೆ ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಕಾವೇರಿ ಕಣಿವೆ ಪ್ರದೇಶದಲ್ಲಿ ಹೆಚ್ಚಿನ ಮಳೆ ಆಗುವಂತಾಗಲಿ ಎಂದು ತಾಯಿ ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಲಾಗಿದೆ ಎಂದರು.ಬಳಿಕ ಮಂಗಳೂರು ರಸ್ತೆಯ ಮದೆನಾಡು ಬಳಿಯ ಕರ್ತೋಜಿ ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ತಲಕಾವೇರಿ ಭಾಗಮಂಡಲ ದೇವಾಲಯದ ತಕ್ಕಮುಖ್ಯಸ್ಥರಾದ ಕೋಡಿ ಮೋಟಯ್ಯ, ಪ್ರಮುಖರಾದ ಕೆ.ಪಿ.ಚಂದ್ರಕಲಾ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ತಹಸೀಲ್ದಾರ್ ಶ್ರೀಧರ, ದೇವಾಲಯದ ಇಒ ಚಂದ್ರಶೇಖರ್ ಇತರರು ಇದ್ದರು.
ಇದಕ್ಕೂ ಮೊದಲು ನಗರದ ಪ್ರಸಿದ್ಧ ದೇವಾಲಯ ಓಂಕಾರೇಶ್ವರ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಸಚಿವರು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಪ್ರಮುಖರಾದ ಪ್ರಕಾಶ್ ಆಚಾರ್ಯ ಇತರರು ಇದ್ದರು.
ಗೋಶಾಲೆಗೆ ಸಚಿವರ ಭೇಟಿ: ನಗರದ ಕೆ.ನಿಡುಗಣೆ ಗ್ರಾಮದ ಸರ್ಕಾರಿ ಗೋಶಾಲೆಗೆ ಸಚಿವ ಪಿ.ಎಂ.ನರೇಂದ್ರಸ್ವಾಮಿ ಭೇಟಿ ನೀಡಿ ಮಾಹಿತಿ ಪಡೆದರು. ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಲಿಂಗರಾಜ ದೊಡ್ಡಮನಿ ಅವರು ಮಾಹಿತಿ ನೀಡಿದರು. ಮಡಿಕೇರಿ ಸರ್ಕಾರಿ ಗೋಶಾಲೆಗೆ 8 ಎಕರೆ ಜಾಗ ಮಂಜೂರಾಗಿದ್ದು, ಇದರಲ್ಲಿ 2 ಎಕರೆ ಜಾಗಕ್ಕೆ ಮಾತ್ರ ಬೇಲಿ ನಿರ್ಮಿಸಲಾಗಿದೆ. ಹೆಚ್ಚುವರಿ ಜಾನುವಾರು ಕೊಠಡಿ ನಿರ್ಮಾಣಕ್ಕಾಗಿ ಮತ್ತು ಹೆಚ್ಚುವರಿ ಮೇವು ದಾಸ್ತಾನು ಕೊಠಡಿ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ತಹಸೀಲ್ದಾರ್ ಶ್ರೀಧರ, ಇತರರು ಇದ್ದರು.
