ಕನ್ನಡಪ್ರಭ ವಾರ್ತೆ, ತರೀಕೆರೆ

19ನೇ ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಎಲ್ಲ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಸಹಕಾರದಿಂದ ಅರ್ಥಪೂರ್ಣವಾಗಿ ಆಚರಿಸಿ ಯಶಸ್ವಿಗೊಳಿಸಲು ಉಪ ವಿಭಾಗಾಧಿಕಾರಿ ಎನ್. ವಿ. ನಟೇಶ್ ವಿನಂತಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಾ. 17 ರಂದು ಪಟ್ಟಣದಲ್ಲಿ ನಡೆಯಲಿರುವ 19ನೇ ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಹ್ವಾನ ಪತ್ರಿಕೆ ಬಿಡುಗಡೆ ನೆರವೇರಿಸಿ ಮಾತನಾಡಿ ಈಗಾಗಲೇ ಸಮ್ಮೇಳನದ ಪೂರ್ವ ಸಿದ್ಧತೆಗಳು ಭರದಿಂದ ಸಾಗಿದೆ. ಕಾರ್ಯಕ್ರಮದ ಸಂಪೂರ್ಣ ಯಶಸ್ವಿಗೆ ಎಲ್ಲರೂ ಕೈಜೋಡಿಸುವಂತೆ ಅವರು ಕೋರಿದರು.

ಕನ್ನಡಶ್ರೀ ಬಿ.ಎಸ್. ಭಗವಾನ್ ಮಾತನಾಡಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಪಾರ ಅನುಭವ ಪಡೆದು ಉನ್ನತ ದ್ಯೇಯ ವನ್ನು ಹೊಂದಿರುವ ಡಾ. ಎ. ಎಸ್ ಶಂಕರನಾರಾಯಣ ಅವರು ಶ್ರೇಷ್ಠ ವ್ಯಕ್ತಿತ್ವ ಉಳ್ಳವರಾಗಿ ಇವರ ಸರ್ವಾದ್ಯಕ್ಷತೆಯಲ್ಲಿ ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ಮೂಡಿ ಬರಲಿ ಎಂದು ತಿಳಿಸಿದರು.

ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್. ಪ್ರಕಾಶ್ ವರ್ಮ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕನ್ನಡ ಭವನ ನಿರ್ಮಾಣಕ್ಕೆ ಸಂಪೂರ್ಣ ಸಹಾಯ ಮತ್ತು ಸಹಕಾರ ನೀಡುವುದಾಗಿ ತಿಳಿಸಿದರು.ತಾ.ಪಂ. ಇಓ ದೇವೇಂದ್ರಪ್ಪ, ಸಿ. ಆರ್ ಆನಂತಪ್ಪ, ಡಾ. ಮರುಳ ಸಿದ್ಧಯ್ಯ ಪಟೇಲ್ ಕೆ. ಎಸ್. ಶಿವಣ್ಣ, ಟಿ. ಸಿ. ದರ್ಶನ್, ಸುನೀತಾ ಕಿರಣ್, ಶಂಕ್ರಪ್ಪ, ವಿಶ್ವನಾಥಚಾರ್, ಹೆಚ್. ಸಿ. ಗೋಪಾಲಕೃಷ್ಣ, ಡಿ. ಮಂಜುನಾಥ್, ಶೇಖರಪ್ಪ ಮತ್ತಿತರರು ಭಾಗವಹಿಸಿದ್ದರು.ಇದೇ 17ರಂದು ಪಟ್ಟಣದ ಸಪ್ತಗಿರಿ ಕನ್‌ ವೆನ್‌ಷನ್ ಹಾಲ್ ನಲ್ಲಿ ಹಮ್ಮಿಕೊಂಡಿರುವ ಸಮ್ಮೇಳನಕ್ಕೆ ಸಕಲ ಸಿದ್ಧತೆ ನಡೆದಿದೆ.ಸಮ್ಮೇಳನಕ್ಕೆ ಕಳೆ ಕಟ್ಟುವಂತೆ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಲಾಗಿದೆ.


ಸಮ್ಮೇಳನಾಧ್ಯಕ್ಷ ಡಾ.ಎ.ಎಸ್.ಶಂಕರನಾರಾಯಣ ಪರಿಚಯ: ಕರ್ನಾಟಕದ ಬಾನುಲಿ ಪ್ರಸಾರಕರಲ್ಲಿ ಪ್ರಮುಖರಾದ ಡಾ.ಎ.ಎಸ್.ಶಂಕರನಾರಾಯಣ ಇದೇ 17 ರಂದು ನಡೆಯುವ 19ನೇ ತರೀಕೆರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಇವರದು ಈ ಕ್ಷೇತ್ರದಲ್ಲಿ ಸುಮಾರು 40 ವರ್ಷಗಳ ಅಪಾರ ಅನುಭವ. ಮೂಲತಃ ತರೀಕೆರೆಯವರಾದ ಅವರು ಬಾನೂಲಿ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಹೆಜ್ಜೆ ಮೂಡಿಸಿದವರು.ಅಮೃತಾಪುರ ಶ್ರೀನಿವಾಸ್.ರಾವ್ ಮತ್ತು ಸುಶೀಲಮ್ಮ ಅವರ ಪುತ್ರ. ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾ ಭ್ಯಾಸವನ್ನು ತರೀಕೆರೆ ಸರ್ಕಾರಿ ಶಾಲೆಯಲ್ಲಿ ಪೂರೈಸಿದ ಡಾ.ಶಂಕರನಾರಾಯಣರು ಶಿವಮೊಗ್ಗದಲ್ಲಿ ಬಿ.ಕಾಂ, ಕಾನೂನು ಪದವಿ ಗಳಿಸಿ ನಂತರ ಕನ್ನಡ ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮ ಡಿಪ್ಲೊಮ ಹಾಗೂ ಭಾರತೀಯ ಕಂಪೆನಿ ಕಾರ್ಯದರ್ಶಿ ಸಂಸ್ಥೆ ಪೆ಼ಲೋ ಪಡೆದವರು.ಡಾ.ಕೇಶವಶರ್ಮ ಅವರ ಮಾರ್ಗದರ್ಶನದಲ್ಲಿ ಕನ್ನಡ ಬಾನುಲಿ ಭಾಷಣಗಳು - ಒಂದು ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಕುವೆಂಪು ವಿವಿಯಿಂದ ಪಿ ಎಚ್‌.ಡಿ ಪದವಿ ಗಳಿಸಿದ್ದಾರೆ. "ಸ್ವಾಗತ ", "ಆಕಾಶದೀಪ " ಕೃತಿ ಸೇರಿದಂತೆ ಅನೇಕ ಕಥೆ, ಕವನ, ಲೇಖನ, ವಿಮರ್ಶೆ ಪ್ರಕಟಿಸಿದ್ದಾರೆ. ಸಾಹಿತ್ಯಕ- ವೈಚಾರಿಕ ಗೋಷ್ಠಿಗಳಲ್ಲಿ ವಿದ್ವತ್ಪೂರ್ಣ ಪ್ರಬಂಧ ಮಂಡಿಸಿದ ಕೀರ್ತಿ ಇವರದು.1989 ರಲ್ಲಿ ಭದ್ರಾವತಿ ಬಾನುಲಿ ಕೇಂದ್ರಕ್ಕೆ ಪ್ರಸಾರ ನಿರ್ವಾಹಕರಾಗಿ ಸೇರಿ ಯುವವಾಣಿ ವಿಭಾಗದ ಮೂಲಕ ಅನೇಕ ಪ್ರತಿಭೆ ಗಳನ್ನು ಅಸಂಖ್ಯಾತ ಶೋತೃಗಳಿಗೆ ಪರಿಚಯಿಸಿದ್ದರು. ಜಿಲ್ಲೆಯ ಅನೇಕ ಪ್ರತಿಭಾನ್ವಿತ ಕವಿ, ಕವಯತ್ರಿಯರು ಹಾಗೂ ಲೇಖಕರನ್ನು ಗುರುತಿಸಿ, ಪ್ರೋತ್ಸಾಹಿಸಿದ್ದರು. ಭದ್ರಾವತಿ ಆಕಾಶವಾಣಿ ಕೇಂದ್ರ ಮನೆ ಮಾತಾಗಲು ಸಹ ಶ್ರಮಿಸಿದ್ದಾರೆ.ಹೊಸ ಪ್ರಯೋಗ: ಜಿಲ್ಲಾ ಸಾಕ್ಷರತಾ ಆಂದೋಲನದ ವೇಳೆ ಹಳ್ಳಿಗಳಿಗೆ ಹೋಗಿ ಧ್ವನಿಮುದ್ರಣ ಮಾಡಿ ಪ್ರಸಾರ ಮಾಡಿ ಹೊಸತನದ ಭಾಷ್ಯ ಬರೆದರು. ಕುವೆಂಪು ವಿವಿ ವಿದ್ಯಾರ್ಥಿಗಳಿಗೆ ಕವಿಗೋಷ್ಠಿ, ಆಶುಭಾಷಣ, ಚರ್ಚಾಸ್ಪರ್ಧೆ ನಡೆಸಿದ್ದಲ್ಲದೆ ಚಿಕ್ಕಮಗಳೂರು-ಶಿವಮೊಗ್ಗ ಜಿಲ್ಲೆ ವಿವಿಧ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲೆ ಕಾರ್ಯಕ್ರಮಗಳನ್ನು ಧ್ವನಿ ಮುದ್ರಿಸಿದ್ದರಿಂದ ಅನೇಕ ಮಕ್ಕಳು ಯುವಜನರಿಗೆ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಿದ್ದರು. ನಾಟಕ, ರೂಪಕ, ನೇರ ಪೋ಼ನ್‌ ಇನ್‌ ಕಾರ್ಯಕ್ರಮ ಸೇರಿದಂತೆ ಅನೇಕ ಪ್ರಕಾರ ಬಾನುಲಿಯಲ್ಲಿ ಬಿತ್ತರಿಸುವ ಹೊಸ ಪ್ರಯೋಗಳಿಗೆ ದಾರಿ ಮಾಡಿದರು.ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ವಿಭಾಗದ ಮುಖ್ಯಸ್ಥರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಸಜ್ಜನ ಹಾಗೂ ಪ್ರತಿಭಾಸಂಪನ್ನ. ಡಾ.ಎ.ಎಸ್.ಶಂಕರನಾರಾಯಣ ಅವರನ್ನು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಅವರ ಕಾರ್ಯತತ್ಪರತೆಗೆ ನೀಡಿರುವ ಮನ್ನಣೆ.ಫೋಟೋ ಇದೆಃ12ಕೆಟಿಆರ್.ಕೆ.10ಃ ಡಾ.ಎ.ಎಸ್.ಶಂಕರನಾರಾಯಣ

-

15ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ತಾ.ಕನ್ನಡ ಸಾಹಿತ್ಯ ಪರಿಷತ್ತಿನಿಂದ 19ನೇ ತಾ.ಕನ್ನಡ ಸಾಹಿತ್ಯ ಸಮ್ಮೇಳನದ ಅಹ್ವಾನ ಪತ್ರಿಕೆಯನ್ನು

ಉಪ ವಿಭಾಗಾಧಿಕಾರಿ ಎನ್.ವಿ.ನಟೇಶ್ ಬಿಡುಗಡೆ ಮಾಡಿದರು. ತಾ.ಕಸಾಪ ಅಧ್ಯಕ್ಷ ರವಿದಳವಾಯಿ, ಕನ್ನಡಶ್ರೀ ಬಿ.ಎಸ್.ಭಗವಾನ್ ಮತ್ತಿತರರು ಇದ್ದರು.