ತ್ವರಿತ ಕೆಲಸಕ್ಕಾಗಿ 2.0 ತಂತ್ರಾಂಶ ಜಾರಿ

| Published : Nov 12 2025, 02:30 AM IST

ತ್ವರಿತ ಕೆಲಸಕ್ಕಾಗಿ 2.0 ತಂತ್ರಾಂಶ ಜಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಕೆಲಸದಲ್ಲಿ ದಕ್ಷತೆ, ನಿಷ್ಪಕ್ಷಪಾತ ಹಾಗೂ ತ್ವರಿತವಾಗಿ ಕೆಲಸ ಮಾಡಲು ಎಚ್‌ಆರ್‌ಎಂಎಸ್ 2.0 ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ ಹೇಳಿದರು.

ಹಾವೇರಿ: ಸರ್ಕಾರಿ ಕೆಲಸದಲ್ಲಿ ದಕ್ಷತೆ, ನಿಷ್ಪಕ್ಷಪಾತ ಹಾಗೂ ತ್ವರಿತವಾಗಿ ಕೆಲಸ ಮಾಡಲು ಎಚ್‌ಆರ್‌ಎಂಎಸ್ 2.0 ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎಲ್. ನಾಗರಾಜ ಹೇಳಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಆಡಳಿತ, ಜಿಪಂ, ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ-2, ಆರ್ಥಿಕ ಇಲಾಖೆ ಬೆಂಗಳೂರು, ಜಿಲ್ಲಾ ಖಜಾನೆ ಹಾವೇರಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಜಿಲ್ಲಾ ಶಾಖೆ ಹಾವೇರಿ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಚ್‌ಆರ್‌ಎಂಎಸ್ 2.0 ತಂತ್ರಾಂಶ, ಇಎಸ್‌ಆರ್ ಹಾಗೂ ಕೆಎಎಸ್‌ಎಸ್ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ನುರಿತ ತಾಂತ್ರಿಕ ನೋಡಲ್ ಅಧಿಕಾರಿಗಳಿಂದ ಜಿಲ್ಲೆಯ ಎಲ್ಲ ನೌಕರರಿಗೂ ಎಚ್‌ಆರ್‌ಎಂಎಸ್ 2.0 ಮತ್ತು ಆರೋಗ್ಯ ಸಂಜೀವಿನಿ ನೋಂದಾಯಿಸಿಕೊಳ್ಳುವುದರ ಕುರಿತು ತರಬೇತಿ ನೀಡುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ಕಚೇರಿ ಸಿಬ್ಬಂದಿಗಳಿಗೆ ನಿಗದಿತ ಅವಧಿಯೊಳಗೆ ವೇತನ ಹಾಗೂ ಇನ್ನಿತ್ತರ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ಕಡೆಗೆ ಗಮನ ಹರಿಸಬೇಕು ಮತ್ತು ಈ ಕಾರ್ಯಗಾರದ ಅನುಕೂಲತೆಗಳನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ. ಪುನೀತ ಮಾತನಾಡಿ, ಈಗಾಗಲೇ ವಿವಿಧ ಇಲಾಖೆಗಳಿಗೆ ಎಚ್‌ಆರ್‌ಎಂಎಸ್ 2.0 ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದು, ಅದರ ಮೂಲಕ ಸಿಬ್ಬಂದಿಗಳ ವೇತನ ಸೆಳೆಯಲಾಗುತ್ತದೆ. ಮುಂದೆ ಪೂರ್ಣ ಪ್ರಮಾಣದಲ್ಲಿ ಇದು ಜಾರಿಯಾಗಿ ಇನ್ನಿತರ ಸೌಲಭ್ಯಗಳು ಕೂಡ ಇದರ ಅಡಿಯಲ್ಲಿ ಬರುವುದರಿಂದ ಈ ಕಾರ್ಯಾಗಾರವು ನಮ್ಮೆಲ್ಲರಿಗೂ ತುಂಬಾನೇ ಅನುಕೂಲವಾಗಲಿದೆ ಎಂದರು.ಜಿಲ್ಲಾ ಖಜಾನೆ ಉಪ ನಿರ್ದೇಶಕ ಸುರೇಶ ಜಿ. ಮಾತನಾಡಿ, ಎಚ್‌ಆರ್‌ಎಂಎಸ್ 2.0, ಅರೋಗ್ಯ ಸಂಜೀವಿನಿ, ಇಎಸ್‌ಎಸ್ ನೋಂದಣಿ ಕುರಿತು ಇಂದು ಮಹತ್ವದ ಕಾರ್ಯಾಗಾರ ಹಮ್ಮಿಕೊಂಡಿದೆ. ಜಿಲ್ಲಾ ಖಜಾನೆಯಿಂದಲೇ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿತ್ತು. ಆದರೆ ಕಾರಣಾಂತರದಿಂದ ಶೀಘ್ರವಾಗಿ ಈಡೇರಿಸಲು ಸಾಧ್ಯ ಆಗಿರಲಿಲ್ಲ. ಇಂದು ಸೂಕ್ತ ಸಮಯದಲ್ಲಿ ಜಿಲ್ಲಾ ನೌಕರರ ಸಂಘವು ಈ ಕಾರ್ಯಾಗಾರ ಆಯೋಜಿಸಿರುವುದು ತುಂಬಾನೇ ಉಪಯುಕ್ತವಾಗಲಿದೆ. ಈಗಾಗಲೇ ಎಚ್‌ಆರ್‌ಎಂಎಸ್ 2.0 ತಂತ್ರಾಂಶವು 75 ಇಲಾಖೆಗಳಲ್ಲಿ ಜಾರಿಯಲ್ಲಿದ್ದು, ವೇತನ ಸಂಬಂಧಿತ ಬಿಲ್ಲುಗಳನ್ನು ಸೃಜಿಸಲಾಗುತ್ತಿದೆ ಪ್ರಾರಂಭದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಲಾಗಿತ್ತು. ಈಗ ಕಾಲ ಕ್ರಮೇಣ ಸರಿಯಾಗಿದೆ. ಆದರೂ ಕೆಲವು ಸಮಸ್ಯೆಗಳು ಹಾಗೆ ಉಳಿದಿವೆ. ಇಂದಿನ ಈ ಕಾರ್ಯಾಗಾರವು ಆ ಸಮಸ್ಯೆಗಳಿಗೆ ಪರಿಹಾರ ಒದಗಿಸಲಿದೆ ಹಾಗೂ ಆರೋಗ್ಯ ಸಂಜೀವಿನಿ ಯೋಜನೆಯ ನೋಂದಣಿಯ ಪ್ರಕ್ರಿಯೆ ಪ್ರಾರಂಭವಾಗಿದೆ ಅದನ್ನು ಯಾವ ಹಂತದಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಹೇಗೆ ನೋಂದಾಯಿಸಿಕೊಳ್ಳಬೇಕು ಎಂದು ಇವತ್ತಿನ ಕಾರ್ಯಾಗಾರದಲ್ಲಿ ತಿಳಿಸಲಾಗುವುದು ಎಂದರು.ಕಾರ್ಯಾಗಾರದಲ್ಲಿ ಯೋಜನಾಧಿಕಾರಿ ನಿರ್ಮಲಾ ಬಿ. ಹಾಗೂ ತಾಂತ್ರಿಕ ತರಬೇತುದಾರರಾದ ಸುಮಂತ್ ಅವರು ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕ್ಕಾಧಿಕಾರಿ ವಸಂತಕುಮಾರ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

ಸರ್ಕಾರ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ತಂದಿರುವ ಪ್ರಯುಕ್ತ ನೌಕರರಿಗೆ ಅದರ ನೊಂದಣಿ ಹಾಗೂ ಎಚ್‌ಆರ್‌ಎಂಎಸ್ 2.0 ದಲ್ಲಿನ ನ್ಯೂನತೆಗಳು ಸಾಕಷ್ಟು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲೆಯ ನೌಕರರಿಗೆ ಅದರಿಂದ ಆದ ತೊಂದರೆಯನ್ನು ಸರಿಪಡಿಸಲು ಒಂದು ಕಾರ್ಯಾಗಾರದ ಅವಶ್ಯಕತೆ ಇದೆ ಎಂಬುವುದನ್ನು ಮನಗಂಡು ಇಂದು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಜಿಲ್ಲೆಯ ಪ್ರತಿ ನೌಕರರಿಗೂ ತರಬೇತಿ ಆಯೋಜಿಸಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಜಿಲ್ಲಾ ನೌಕರರ ಸಂಘವು ಜಿಲ್ಲೆಯ ನೌಕರರ ಹಿತ ಕಾಯುವ ಕೆಲಸ ಮಾಡುತ್ತಿದೆ ನೌಕರರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಎಂದು ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ಹೇಳಿದರು.