ಮೈಷುಗರ್‌ನಲ್ಲಿ 2.01 ಲಕ್ಷ ಟನ್ ಕಬ್ಬು ನುರಿಸಲಾಗಿದೆ: ಅಧ್ಯಕ್ಷ ಸಿ.ಡಿ.ಗಂಗಾಧರ್

| Published : Nov 26 2024, 12:49 AM IST

ಮೈಷುಗರ್‌ನಲ್ಲಿ 2.01 ಲಕ್ಷ ಟನ್ ಕಬ್ಬು ನುರಿಸಲಾಗಿದೆ: ಅಧ್ಯಕ್ಷ ಸಿ.ಡಿ.ಗಂಗಾಧರ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ಮೈಷುಗರ್ ಕಾರ್ಖಾನೆಯ ವಿದ್ಯುತ್ ಘಟಕದಲ್ಲಿ 1,54,93,000 ಯೂನಿಟ್ ವಿದ್ಯುತ್ ತಯಾರಿಸಿ, 71,12,800 ಯೂನಿಟ್ ವಿದ್ಯುತ್ತನ್ನು ಮಾರಾಟ ಮಾಡಿ 4.33 ಕೋಟಿ ರು. ಲಾಭ ಗಳಿಸಲಾಗಿದೆ. ಇದರಿಂದ ಕಾರ್ಖಾನೆ ವಿದ್ಯುತ್ ಬಿಲ್ 10 ಕೋಟಿ ರು. ಉಳಿತಾಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಾರ್ಖಾನೆಯು ಒಪ್ಪಿಗೆ ಮಾಡಿಕೊಂಡಿದ್ದ 2.05 ಲಕ್ಷ ಟನ್ ಕಬ್ಬಿನ ಪೈಕಿ 2.01 ಲಕ್ಷ ಟನ್ ಕಬ್ಬನ್ನು ನ.24ರ ಭಾನುವಾರ ರಾತ್ರಿವರೆಗೂ ನುರಿಸುವ ಮೂಲಕ 2024-25ನೇ ಸಾಲಿನಲ್ಲಿ ಯಶಸ್ವಿಯಾಗಿ ಕಾರ್ಖಾನೆಯನ್ನು ಮುನ್ನಡೆಸಿದ್ದೇವೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಆಗಸ್ಟ್ 5ರಂದು ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಿ ಒಪ್ಪಂದದಂತೆ ಕಾರ್ಖಾನೆ ವ್ಯಾಪ್ತಿಯ ಎಲ್ಲ ಕಬ್ಬನ್ನು ನುರಿಸುವ ಮೂಲಕ ದಶಕದ ನಂತರ ಕಾರ್ಖಾನೆಯನ್ನು ಲಾಭದತ್ತ ಕೊಂಡೊಯ್ಯಲಾಗಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಸಹ ವಿದ್ಯುತ್ ಘಟಕದಲ್ಲಿ 1,54,93,000 ಯೂನಿಟ್ ವಿದ್ಯುತ್ ತಯಾರಿಸಿ, 71,12,800 ಯೂನಿಟ್ ವಿದ್ಯುತ್ತನ್ನು ಮಾರಾಟ ಮಾಡಿ 4.33 ಕೋಟಿ ರು. ಲಾಭ ಗಳಿಸಲಾಗಿದೆ. ಇದರಿಂದ ಕಾರ್ಖಾನೆ ವಿದ್ಯುತ್ ಬಿಲ್ 10 ಕೋಟಿ ರು. ಉಳಿತಾಯವಾಗಿದೆ ಎಂದು ವಿವರಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 2023-24ನೇ ಸಾಲಿನಲ್ಲಿ ಮೈಷುಗರ್ ಸಕ್ಕರೆ ಕಾರ್ಖಾನೆಗೆ ನೀಡಿದ ಆರ್ಥಿಕ ನೆರವು ಸದುಪಯೋಗ ಪಡಿಸಿಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರ ನೇತೃತ್ವದಲ್ಲಿ ಕಾರ್ಖಾನೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ ಎಂದರು.

2005-06ರಿಂದ ಈವರೆಗೆ ಮೈಷುಗರ್ ಕಾರ್ಖಾನೆಗೆ ಸುಮಾರು 650 ಕೋಟಿ ರು. ಸರ್ಕಾರ ನೆರವು ನೀಡಿದೆ. ಇದೇ ಮೊದಲ ಬಾರಿಗೆ ಈ ಸಾಲಿನಲ್ಲಿ ಸರ್ಕಾರದ ಆರ್ಥಿಕ ನೆರವು ಪಡೆಯದೇ ಕಬ್ಬನ್ನು ನುರಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಉತ್ಪಾದನೆಯಾದ 1,30,000 ಕ್ವಿಂಟಲ್ ಸಕ್ಕರೆ ಮಾರಾಟ ಮಾಡಿ, 45 ಕೋಟಿ ರು., 12,200 ಮೊಲಾಸಸ್ ಮಾರಾಟದಿಂದ 15.36 ಕೋಟಿ ರು. ಬಂದಿದೆ. ಸರ್ಕಾರ ಮತ್ತಿತರೆ ಯಾವುದೇ ಮೂಲಗಳಿಂದ ಆರ್ಥಿಕ ನೆರವು ಪಡೆಯದೇ ಪ್ರಸಕ್ತ ಸಾಲಿನಲ್ಲಿ ರೈತರಿಗೆ ಕಬ್ಬಿನ ಹಣ ಪಾವತಿ ಮಾಡಲಾಗಿದೆ ಎಂದರು.

ಜಿಲ್ಲೆಯ ಇತರೆ ಕಾರ್ಖಾನೆಗಳಿಗೆ ಮೈಷುಗರ್ ಮಾದರಿಯಾಗಿದೆ. ಇದೀಗ ಖಾಸಗಿ ಕಾರ್ಖಾನೆಗಳು ಸಹ ರೈತರಿಗೆ ಕಬ್ಬಿನ ಹಣವನ್ನು ಹಂತ ಹಂತವಾಗಿ ನೀಡುವುದನ್ನು ಬಿಟ್ಟು ಒಮ್ಮೆಲೆ ಹಣ ಪಾವತಿ ಮಾಡಲು ಮುಂದಾಗಿವೆ ಎಂದರು.

ಸಕ್ಕರೆ ಮಾರಾಟ ಮಾಡಿ ಆರ್ಥಿಕವಾಗಿ ಪ್ರಬಲ:

ಪ್ರಥಮ ಬಾರಿಗೆ ಮೈಷುಗರ್‌ನಲ್ಲಿ ಸಕ್ಕರೆ ದಾಸ್ತಾನಿದ್ದು, ಒಂದು ಲಕ್ಷ ಕ್ವಿಂಟಲ್ ಪರ್‍ಯಾಯವಾಗಿ ಚೀಫ್ ಡೈರೆಕ್ಟರ್, ನವ ದೆಹಲಿಯವರಿಗೆ ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿ 90,290 ಕ್ವಿಂಟಲ್ ಸಕ್ಕರೆ ಮಾರಾಟ ಮಾಡಲು ಅನುಮತಿ ಪಡೆದು ಕಾರ್ಖಾನೆ ಆರ್ಥಿಕ ಪರಿಸ್ಥಿತಿ ಸುಧಾರಿಸಲಾಗಿದೆ. ಕಾಕಂಬಿಯನ್ನು ದಾಖಲೆಯ ಬೆಲೆ 12,850 ರು.ಗೆ ಮಾರಾಟ ಮಾಡಲಾಗಿದ್ದು, ಆರ್ಥಿಕವಾಗಿ ಪ್ರಬಲವಾಗಿದ್ದೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಜಿಲ್ಲೆಯ ಖಾಸಗಿ ಕಾರ್ಖಾನೆಗಳಿಗೆ ಹೋಲಿಸಿದಲ್ಲಿ ಕಬ್ಬಿನ ತೂಕ ಮತ್ತು ಕಬ್ಬು ಕಟಾವು ಮಾಡುವ ಕಾರ್ಮಿಕರಿಗೆ, ರೈತರಿಗೆ ಕಬ್ಬಿನ ಬಟವಾಡೆಯಲ್ಲಿ ಮಾದರಿಯಾಗಿದ್ದೇವೆ. ಇದೇ ಮೊದಲ ಬಾರಿಗೆ ಯಾವುದೇ ಮೂಲದಿಂದ ಆರ್ಥಿಕ ನೆರವು ಪಡೆಯದೆ 2 ಲಕ್ಷ ಟನ್ ಕಬ್ಬನ್ನು ನುರಿಸಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರುದ್ರಪ್ಪ, ಗ್ರಾಮಾಂತರ ಅಧ್ಯಕ್ಷ ಅಪ್ಪಾಜಿಗೌಡ, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಸಾತನೂರು ಕೃಷ್ಣ, ರೈತ ಮೋರ್ಚಾ ಅಧ್ಯಕ್ಷ ದೇಶಹಳ್ಳಿ ಮೋಹನ್‌ಕುಮಾರ್, ಜಿಲ್ಲಾ ವಕ್ತಾರ ಸಿ.ಎಂ. ದ್ಯಾವಪ್ಪ, ಸುಂಡಹಳ್ಳಿ ಮಂಜುನಾಥ್, ಶ್ರೀಧರ್ ಇದ್ದರು.