ಕನ್ನಡಪ್ರಭ ವಾರ್ತೆ ಬೆಂಗಳೂರು
ವಿದೇಶದಿಂದ ಖಾದ್ಯ ತಿನಿಸು ಪೊಟ್ಟಣಗಳಲ್ಲಿ ಅಡಗಿಸಿ ಸಾಗಿಸಿದ್ದ 2.32 ಕೋಟಿ ರು.ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ವಿದೇಶದಿಂದ ಖಾದ್ಯ ತಿನ್ನಿಸು ಬಾಕ್ಸ್‌ಗಳಲ್ಲಿ ಡ್ರಗ್ಸ್ ಸಾಗಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಚಾಮರಾಜಪೇಟೆ ಅಂತಾರಾಷ್ಟ್ರೀಯ ಅಂಚೆ ಕಚೇರಿ ಮೇಲೆ ಸಿಸಿಬಿ ಡಿಸಿಪಿ ರಾಜಾ ಇಮಾಮ್ ಖಾಸೀಂ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ನೇತೃತ್ವದ ದಾಳಿ ನಡೆಸಿದೆ. ಈ ವೇಳೆ 2.32 ಕೋಟಿ ರು. ಮೌಲ್ಯದ 3.3 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.ವಿದೇಶದಿಂದ ಯಾರೂ ಡ್ರಗ್ಸ್ ತರಿಸಿಕೊಂಡಿದ್ದರು ಎಂಬುದು ಪತ್ತೆಯಾಗಿಲ್ಲ. ಕೆಲವು ನಕಲಿ ವಿಳಾಸ ನೀಡಿ ಡ್ರಗ್ಸ್ ಖರೀದಿಸಿದ್ದಾರೆ. ಈ ಹಿಂದೆ ಸಹ ಕೆಲವರು ಇದೇ ರೀತಿ ಕೃತ್ಯ ಎಸಗಿದ್ದರು. ಹಾಗಾಗಿ ಆ ಹಳೆಯ ಆರೋಪಿಗಳಿಗೂ ಈ ಪ್ರಕರಣಕ್ಕೂ ಸಂಬಂಧವಿರುವ ಬಗ್ಗೆ ಸಹ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ಹೇಳಿದ್ದಾರೆ.
ಕೇರಳ ಮೂಲದ ಮತ್ತಿಬ್ಬರು ಸೆರೆಜೆ.ಬಿ.ನಗರ ಠಾಣೆ ಪೊಲೀಸರ ಮತ್ತೊಂದು ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಇಬ್ಬರು ಪೆಡ್ಲರ್‌ಗಳು ಸಿಕ್ಕಿಬಿದ್ದಿದ್ದಾರೆ. ಮಂಜೇಶ್ವರದ ಜುನೈದ್ ಹಾಗೂ ಮಲ್ಲಪುರಂ ಜಿಲ್ಲೆಯ ಮೊಹಮ್ಮದ್ ನಬಿ ಬಂಧಿತರಾಗಿದ್ದು, ಆರೋಪಿಗಳಿಂದ 8 ಲಕ್ಷ ರು ಮೌಲ್ಯದ 27 ಗ್ರೈಂ ಎಂಡಿಎಂಎ ಹಾಗೂ 1.270 ಕೆಜಿ ಗಾಂಜಾ ಹಾಗೂ ಕಾರು ಜಪ್ತಿ ಮಾಡಲಾಗಿದೆ. ನಗರದಲ್ಲಿ ಕಾರು ಚಾಲಕನಾಗಿ ಜುನೈದ್ ಕೆಲಸ ಮಾಡುತ್ತಿದ್ದ. ಹಣದಾಸೆಗೆ ತನ್ನ ಗೆಳೆಯ ನಬಿ ಜತೆ ಸೇರಿ ಆತ ಡ್ರಗ್ಸ್ ದಂಧೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
