೨.೫ ಲಕ್ಷ ಟನ್ ಕಬ್ಬು ನುರಿಸುವುದು ನಿಶ್ಚಿತ: ಡಾ.ಎಚ್.ಎಲ್ ನಾಗರಾಜು

| Published : Sep 17 2024, 12:46 AM IST

ಸಾರಾಂಶ

ಅದೇ ರೀತಿ ಕೊಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯವರು ಹಲ್ಲೇಗೆರೆ ಗ್ರಾಮದಲ್ಲಿ ಕ್ಷೇತ್ರ ಸಹಾಯಕರ ಕಚೇರಿಗೆ ಬೀಗ ಹಾಕಿದ್ದಾರೆ. ಈ ಎರಡು ಕಾರ್ಖಾನೆಗಳು ಮೈಷುಗರ್ ವ್ಯಾಪ್ತಿ ಪ್ರದೇಶದ ಕಬ್ಬನ್ನು ಅನಧಿಕೃತವಾಗಿ ಪರಭಾರೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಕಟಾವು ಕೆಲಸ ಬಿರುಸಾಗಿ ನಡೆಯುತ್ತಿದ್ದು, ಪ್ರತಿದಿನ ಸುಮಾರು ೩೦೦೦ ಟನ್ ನಷ್ಟು ಕಬ್ಬು ಪೂರೈಕೆಯಾಗುತ್ತಿದೆ. ನಿಗದಿತ ಗುರಿಯಂತೆ ಈ ಸಾಲಿನಲ್ಲಿ ೨.೫ ಲಕ್ಷ ಟನ್ ಕಬ್ಬು ಅರೆಯಲಾಗುವುದು ಎಂದು ಮೈಷುಗರ್ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಎಚ್. ಎಲ್. ನಾಗರಾಜು ತಿಳಿಸಿದ್ದಾರೆ.

ಮೈಷುರ್ ಕಂಪನಿಯ ವ್ಯಾಪ್ತಿಯ ಪ್ರದೇಶದಲ್ಲಿ ಅಕ್ಕ- ಪಕ್ಕದ ಕಾರ್ಖಾನೆಯಾದ ಕೆ.ಎಂ.ದೊಡ್ಡಿಯ ಚಾಂಷುಗರ್ ಕಾರ್ಖಾನೆಯವರು ತಮ್ಮ ವ್ಯಾಪ್ತಿಯ ಕುರುಬನಪುರ ಗ್ರಾಮದ ರೈತ ಸಿದ್ದೇಗೌಡರ ಕಬ್ಬು ೧೫ ತಿಂಗಳು ತುಂಬಿದರೂ ಕಟಾವು ಮಾಡದೇ ಮೈಷುಗರ್ ವ್ಯಾಪ್ತಿಯ ಕಬ್ಬನ್ನು ಕಟಾವು ಮಾಡಲು ಬಂದಿದ್ದಾರೆ. ಅದೇ ರೀತಿ ಕೊಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯವರು ಹಲ್ಲೇಗೆರೆ ಗ್ರಾಮದಲ್ಲಿ ಕ್ಷೇತ್ರ ಸಹಾಯಕರ ಕಚೇರಿಗೆ ಬೀಗ ಹಾಕಿದ್ದಾರೆ. ಈ ಎರಡು ಕಾರ್ಖಾನೆಗಳು ಮೈಷುಗರ್ ವ್ಯಾಪ್ತಿ ಪ್ರದೇಶದ ಕಬ್ಬನ್ನು ಅನಧಿಕೃತವಾಗಿ ಪರಭಾರೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಕಾರ್ಖಾನೆ ಈವರೆಗೆ ೭೪೬೦೫ ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, ೩೮೩೧೮ ಕ್ವಿಂಟಲ್ ಸಕ್ಕರೆ ಹಾಗೂ ೪೧೪೦ ಮೆಟ್ರಿಕ್ ಟನ್ ಕಾಕಂಬಿ ಉತ್ಪಾದನೆ ಮಾಡಲಾಗಿದೆ. ೨೨೩ ಕಬ್ಬು ಕಟಾವು ಗ್ಯಾಂಗ್ ಮೇಸ್ತ್ರಿಗಳ ಸಂಖ್ಯೆ ಇದ್ದು, ಕಬ್ಬು ಕಟಾವು ಮೇಸ್ತ್ರಿಗಳಿಗೆ ೨,೬೧,೧೨,೨೦೦ ರು. ಪಾವತಿಸಲಾಗಿದೆ. ಕಬ್ಬು ಸಾಗಣಿಕೆಗೆ ೯೧,೬೨,೮೩೯ ವೆಚ್ಚವಾಗಿದ್ದು, ಕಬ್ಬು ಸರಬರಾಜು ಮಾಡಿರುವ ೫೩೧ ರೈತರಿಗೆ ಒಟ್ಟು ೩೫೭೭೫.೫೧೧ ಮೆಟ್ರಿಕ್ ಟನ್ ಕಬ್ಬಿಗೆ ೯,೧೪,೪೫,೧೯೭ ರು. ಹಣ ಪಾವತಿಸಿರುವುದಾಗಿ ಹೇಳಿದ್ದಾರೆ.

ಸೆಪ್ಟೆಂಬರ್ ೧೫ರ ಅಂತ್ಯಕ್ಕೆ ಕಾರ್ಖಾನೆಯಲ್ಲಿ ಒಟ್ಟು ೬೦,೩೦,೦೦೦ ಯೂನಿಟ್ ವಿದ್ಯುತ್ ಉತ್ಪಾದಿಸಿ , ೨೮,೫೨,೬೪೦ ಯೂನಿಟ್ ನ್ನು ಒಂದು ಯುನಿಟ್‌ಗೆ ೬.೦೭ ಪೈಸೆಯಂತೆ ರಪ್ತು ಮಾಡಲಾಗಿದೆ. .ಕಾರ್ಖಾನೆಗೆ ಆದಾಯ ತೆರಿಗೆ ಇಲಾಖೆಯಿಂದ ಹಿಂಬಾಕಿ ೬.೫೦ ಕೋಟಿ ಬರಬೇಕಿದೆ ಎಂದಿದ್ದಾರೆ.

ಕಬ್ಬು ಕಟಾವು ಮೇಸ್ತಿಗಳಿಂದ ೨,೧೨,೯೯,೮೬೫ ಮುಂಗಡ ಹಣ ವಸೂಲಿ ಮಾಡಲಾಗಿದ್ದು, ಇನ್ನುಳಿದ ಮುಂಗಡ ಹಣ ೧,೧೫,೭೫,೧೩೫ ಮೊತ್ತಕ್ಕೆ ಸಂಪೂರ್ಣ ಭದ್ರತೆ ಪಡೆದುಕೊಳ್ಳಲಾಗಿದೆ. ೨೨೩ ಕಬ್ಬು ಕಟಾವು ಮಾಡುವ ಗ್ಯಾಂಗ್‌ಗಳು ಮುಂಗಡ ಹಣವಿಲ್ಲದೇ ಪ್ರತಿ ದಿನ ೩೦೦೦ ಮೆಟ್ರಿಕ್ ಟನ್ ಕಬ್ಬು ಕಟಾವು ಮಾಡುತ್ತಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.