ಸಾರಾಂಶ
ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಲಾಗುವುದು ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 2.50 ಕೋಟಿ ರು. ಗಳ ವೆಚ್ಚದಲ್ಲಿ ಅಭಿವೃದ್ಧಿಗೊಂಡ ಕಿನ್ನಿಮೂಲ್ಕಿ ಸ್ವಾಗತ ಗೋಪುರದಿಂದ ಬ್ರಹ್ಮಗಿರಿ ಜಂಕ್ಷನ್ ರಸ್ತೆ, ವಿವೇಕಾನಂದ ರಸ್ತೆ ಹಾಗೂ 10 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾದ ಶ್ರೀ ವ್ಯಾಘ್ರ ಚಾಮುಂಡಿ ಗಡುವಾಡು ಕ್ಷೇತ್ರದ ಮೇಲ್ಛಾವಣಿಯ ಉದ್ಘಾಟನೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ನೆರವೇರಿಸಿದರು.ಈ ಸಂದರ್ಭ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಉಡುಪಿ ನಗರದ ಪ್ರಮುಖ ರಸ್ತೆಯಾಗಿರುವ ಕಿನ್ನಿಮೂಲ್ಕಿ ಸ್ವಾಗತ ಗೋಪುರದಿಂದ ಬ್ರಹ್ಮಗಿರಿ ಜಂಕ್ಷನ್ ಸಂಪರ್ಕಿಸುವ ರಸ್ತೆ ಅಭಿವೃದ್ಧಿಯ ಕನಸು 2.50 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಮೂಲಕ ನನಸಾಗಿದೆ ಮುಂದಿನ ದಿನದಲ್ಲಿಯೂ ನಗರದ ಮೂಲ ಸೌಕರ್ಯದ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರಾದ ರಶ್ಮಿ ಸಿ. ಭಟ್, ಅಮೃತ ಕೃಷ್ಣಮೂರ್ತಿ ಆಚಾರ್ಯ, ಪಕ್ಷದ ಮುಖಂಡರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಶ್ರೀ ಭಗವಾನ್ ದಾಸ್, ಶ್ರೀ ದೇವದಾಸ್ ಶೆಟ್ಟಿಗಾರ್, ಶ್ರೀ ಆನಂದ ಕಾರ್ನಾಡ್, ಅಂಬಲಪಾಡಿ ಗ್ರಾ.ಪಂ. ಸದಸ್ಯರು, ಗಡುವಾಡಿನ ಆಡಳಿತ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.