ಬ್ಯಾಡಗಿ ಮಾರುಕಟ್ಟೆಗೆ 2.86 ಲಕ್ಷ ಚೀಲ ಮೆಣಸಿನಕಾಯಿ ಆವಕ: ದರ ಅಲ್ಪ ಕುಸಿತ

| Published : Mar 28 2025, 12:30 AM IST

ಬ್ಯಾಡಗಿ ಮಾರುಕಟ್ಟೆಗೆ 2.86 ಲಕ್ಷ ಚೀಲ ಮೆಣಸಿನಕಾಯಿ ಆವಕ: ದರ ಅಲ್ಪ ಕುಸಿತ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 3 ತಿಂಗಳಿನಿಂದ ಮಾರುಕಟ್ಟೆಗೆ ಪ್ರತಿವಾರ ಲಕ್ಷಾಂತರ ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಗೆ ಆವಕಾಗಿದ್ದು, ಎಲ್ಲರ ನಿಬ್ಬೆರಗಾಗುವಂತೆ ಮಾಡಿದೆ.

ಬ್ಯಾಡಗಿ: ಕಳೆದೆರಡು ತಿಂಗಳಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಮೆಣಸಿನಕಾಯಿ ಚೀಲಗಳ ಸಾಗರದಂತೆ ಹರಿದು ಬರುತ್ತಿದ್ದು, ಗುರುವಾರ ಕೂಡ ಒಟ್ಟು 2.86 ಲಕ್ಷ ಚೀಲ ಮೆಣಸಿನಕಾಯಿ ಆವಕಾಗಿದ್ದು, ದರದಲ್ಲಿ ಅಲ್ಪಮಟ್ಟಿನ ಕುಸಿತ ಕಂಡುಬಂದಿದೆ. ದರ ಕುಸಿತದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಪ್ರಮಾಣದ ಆವಕನ್ನು ನಿರೀಕ್ಷಿಸಿರಲಿಲ್ಲ. ಆದರೆ ಎಲ್ಲ ವರ್ತಕರ ನಿರೀಕ್ಷೆ ಸುಳ್ಳು ಮಾಡುವಂತೆ ಕಳೆದ 3 ತಿಂಗಳಿನಿಂದ ಮಾರುಕಟ್ಟೆಗೆ ಪ್ರತಿವಾರ ಲಕ್ಷಾಂತರ ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಗೆ ಆವಕಾಗಿದ್ದು, ಎಲ್ಲರ ನಿಬ್ಬೆರಗಾಗುವಂತೆ ಮಾಡಿದೆ.

ಕಳೆದ ವರ್ಷ ದರ ಕುಂಠಿತಗೊಂಡಿದೆ ಎಂದು ಆರೋಪಿಸಿ ಮಾರುಕಟ್ಟೆ ಕಚೇರಿ ಅಗ್ನಿ ಸ್ಪರ್ಶಿಸಿ ರೈತರು ಗಲಾಟೆ ನಡೆಸಿದ್ದರು. ಇದಾದ ಬಳಿಕ ಮಾರುಕಟ್ಟೆ ಸಾಕಷ್ಟು ಕಠಿಣ ಹಾದಿಗಳನ್ನು ಸವೆಸುವ ಮೂಲಕ ಮತ್ತೆ ತನ್ನ ಖ್ಯಾತಿಗೆ ತಕ್ಕಂತೆ ವ್ಯಾಪಾರ, ವಹಿವಾಟು ನಡೆಸಿದೆಯಲ್ಲದೇ ಪ್ರತಿವಾರ 5 ಲಕ್ಷಕ್ಕಿಂತ ಅಧಿಕ ಮೆಣಸಿನಕಾಯಿ ಚೀಲಗಳು ಕಳೆದ 3 ತಿಂಗಳಿಂದ ಮಾರಾಟಕ್ಕೆ ಬರುತ್ತಿದೆ.7 ಸಾವಿರ ಚೀಲ ಅಧಿಕ: ಕಳೆದ ಸೋಮವಾರ ಮಾ. 24ರಂದು ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ 2.79 ಲಕ್ಷ ಚೀಲಗಳು ಆವಕಾಗಿದ್ದು, ಉತ್ತಮ ದರ ಲಭಿಸಿತ್ತು. ಆದರೆ ಗುರುವಾರ ಮತ್ತೆ ಅದಕ್ಕಿಂತ 7 ಸಾವಿರ ಚೀಲ ಮೆಣಸಿನಕಾಯಿ ಆವಕಾಗಿವೆ.ಅಲ್ಪಮಟ್ಟಿನ ದರ ಕುಸಿತ: ಕಳೆದ ವಾರಕ್ಕೆ ಹೋಲಿಸಿದ್ದಲ್ಲಿ ಮೂರು ತಳಿಯ ಮೆಣಸಿನಕಾಯಿ ದರದಲ್ಲಿ ಅಲ್ಪಮಟ್ಟಿನ ಕುಸಿತ ಕಂಡುಬಂದಿದೆ. ಉಳಿದಂತೆ ಗುಣಮಟ್ಟದ ಮೆಣಸಿನಕಾಯಿಗೆ ವ್ಯಾಪಾರಸ್ಥರು ಉತ್ತಮ ದರವನ್ನು ನೀಡಿದ್ದಾರೆ. ಕಳೆದ ವರ್ಷ ನಡೆದ ಗಲಾಟೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾರುಕಟ್ಟೆಯಲ್ಲಿ ಗುರುವಾರ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಗುರುವಾರದ ಮಾರುಕಟ್ಟೆ ದರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹2009, ಗರಿಷ್ಠ 23099, ಡಬ್ಬಿತಳಿ ಕನಿಷ್ಠ ₹2409, ಗರಿಷ್ಠ ₹26019, ಗುಂಟೂರು ಕನಿಷ್ಠ ₹789, ಗರಿಷ್ಠ ₹13359ಕ್ಕೆ ಮಾರಾಟವಾಗಿವೆ.ತೋಟಗಾರಿಕಾ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನ

ಹಾವೇರಿ: ಗದಗ ಜಿಲ್ಲೆಯ ತೋಟಗಾರಿಕಾ ತರಬೇತಿ ಕೇಂದ್ರದಲ್ಲಿ 2025- 26ನೇ ಸಾಲಿಗೆ 10 ತಿಂಗಳ ಅವಧಿಯ ತೋಟಗಾರಿಕಾ ತರಬೇತಿ ಪಡೆಯಲು ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಎಸ್ಎಸ್ಎಲ್‌ಸಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳ ತಂದೆ, ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು, ಪಹಣಿ ಕಡ್ಡಾಯವಾಗಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಏ. 1ರೊಳಗಾಗಿ ಸಲ್ಲಿಸಬೇಕು. ಏ. 8ರಂದು 11 ಗಂಟೆಗೆ ಹಾವೇರಿ ದೇವಗಿರಿಯ ಜಿಲ್ಲಾಡಳಿತ ಭವನದ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಏ. 16ರಂದು ತರಬೇತಿಗೆ ಆಯ್ಕೆಯಾದವರ ಪಟ್ಟಿ ಪ್ರಕಟಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಮೇ 2ರಂದು ತರಬೇತಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾ.ವ), ಹಾವೇರಿ ಹಾಗೂ ತಾಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಹಿರಿಯ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.