ರಾಜ್ಯಾದ್ಯಂತ ಸ್ಮಾರ್ಟ್‌ ಮೀಟರ್‌ ಕಡ್ಡಾಯಕ್ಕೆ 2% ಹೆಚ್ಚುವರಿ ತೆರಿಗೆ?

| N/A | Published : Jul 23 2025, 12:31 AM IST / Updated: Jul 23 2025, 07:11 AM IST

smart meter
ರಾಜ್ಯಾದ್ಯಂತ ಸ್ಮಾರ್ಟ್‌ ಮೀಟರ್‌ ಕಡ್ಡಾಯಕ್ಕೆ 2% ಹೆಚ್ಚುವರಿ ತೆರಿಗೆ?
Share this Article
  • FB
  • TW
  • Linkdin
  • Email

ಸಾರಾಂಶ

 ಕೇಂದ್ರದ ಆರ್‌ಡಿಎಸ್‌ಎಸ್‌ (ರಿವ್ಯಾಂಪ್ಡ್‌ ಡಿಸ್ಟ್ರಿಬ್ಯೂಷನ್‌ ಸೆಕ್ಟರ್‌ ಸ್ಕೀಂ) ಅಡಿ ಎಲ್ಲಾ ವಿದ್ಯುತ್‌ ಸಂಪರ್ಕಗಳಿಗೂ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ.

  ಬೆಂಗಳೂರು :  ರಾಜ್ಯಾದ್ಯಂತ ಕೇಂದ್ರದ ಆರ್‌ಡಿಎಸ್‌ಎಸ್‌ (ರಿವ್ಯಾಂಪ್ಡ್‌ ಡಿಸ್ಟ್ರಿಬ್ಯೂಷನ್‌ ಸೆಕ್ಟರ್‌ ಸ್ಕೀಂ) ಅಡಿ ಎಲ್ಲಾ ವಿದ್ಯುತ್‌ ಸಂಪರ್ಕಗಳಿಗೂ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ.

ಆದರೆ, ಆರ್‌ಡಿಎಸ್‌ಎಸ್‌ ಅನುಷ್ಠಾನಕ್ಕೆ ರಾಜ್ಯ ಸರ್ಕಾರವು ಎಸ್ಕಾಂಗಳಿಗೆ ಬಾಕಿ ಇರುವ 15,000 ಕೋಟಿ ರು. ಹಣವನ್ನು ಸಂಪೂರ್ಣ ಪಾವತಿ ಮಾಡಬೇಕೆಂದು ಕೇಂದ್ರ ಸರ್ಕಾರ ಷರತ್ತು ವಿಧಿಸಿದೆ. ಈ ಹಣ ಎಲ್ಲಿಂದ ಹೊಂದಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಶೇ.2 ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಬಗ್ಗೆಯೂ ಪ್ರಸ್ತಾಪವಾಗಿದೆ. ಅಂತಿಮವಾಗಿ ಈ ಬಗ್ಗೆ ಸಾಧಕ- ಬಾಧಕಗಳನ್ನು ಪರಿಶೀಲಿಸಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಇಲಾಖೆಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಕ್ತಿ ಭವನದಲ್ಲಿ ಮಂಗಳವಾರ ಸಂಜೆ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕೇಂದ್ರದ ಆರ್‌ಡಿಎಸ್‌ಎಸ್‌ ಯೋಜನೆ ಅನುಷ್ಠಾನದ ಕುರಿತು ಸಭೆ ನಡೆಸಲಾಯಿತು.

ರಾಜ್ಯದ ವಿವಿಧ ಎಸ್ಕಾಂಗಳ ವ್ಯಾಪ್ತಿಯಲ್ಲಿ ಈಗಾಗಲೇ ನೂತನ ಹಾಗೂ ತಾತ್ಕಾಲಿಕ ಸಂಪರ್ಕಗಳಿಗೆ ಸ್ಮಾರ್ಟ್‌ ಮೀಟರ್ ಕಡ್ಡಾಯ ಮಾಡಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ಸಂಪರ್ಕಗಳಿಗೂ ಹಳೆಯ ಮೀಟರ್‌ ಬದಲಿಸಿ ಸ್ಮಾರ್ಟ್‌ ಮೀಟರ್‌ ಬದಲಿಸಬೇಕು. ತಂತ್ರಜ್ಞಾನ ಆಧಾರಿತವಾಗಿ ವಿದ್ಯುತ್‌ ಸಂಪರ್ಕಗಳನ್ನು ನಿಯಂತ್ರಿಸುವ ಉದ್ದೇಶ ಈಡೇರಲು ಸಾಧ್ಯ ಎಂಬ ಕಾರಣಕ್ಕೆ ಆರ್‌ಡಿಎಸ್‌ಎಸ್‌ ಅಡಿ ರಾಜ್ಯಾದ್ಯಂತ ಸ್ಮಾರ್ಟ್‌ ಮೀಟರ್‌ ಕಡ್ಡಾಯಗೊಳಿಸಲು ಇಂಧನ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದೆ.

ಶೇ.2ರಷ್ಟು ಹೆಚ್ಚುವರಿ ತೆರಿಗೆಗೆ ಚರ್ಚೆ?:ಆರ್‌ಡಿಎಸ್‌ಎಸ್‌ ಅನುಷ್ಠಾನಕ್ಕೆ ರಾಜ್ಯ ಸರ್ಕಾರವು ಎಸ್ಕಾಂಗಳಿಗೆ ಬಾಕಿ ಇರುವ 15,000 ಕೋಟಿ ರು. ಹಣವನ್ನು ಸಂಪೂರ್ಣ ಪಾವತಿ ಮಾಡಬೇಕೆಂದು ಕೇಂದ್ರ ಸರ್ಕಾರ ಷರತ್ತು ವಿಧಿಸಿದೆ. ಈ ಹಣ ಎಲ್ಲಿಂದ ಹೊಂದಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.

ರಾಜ್ಯ ಸರ್ಕಾರದ ಬಳಿ ಇಷ್ಟು ಹಣ ಇಲ್ಲದ ಕಾರಣ ಸ್ಥಳೀಯ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಶೇ.2 ರಷ್ಟು ಹೆಚ್ಚುವರಿ ತೆರಿಗೆ ವಿಧಿಸಬೇಕು. ಆ ಮೂಲಕ ಹಣ ಸಂಗ್ರಹಿಸಲು ಹರಿಯಾಣ ಮಾದರಿ ಕ್ರಮ ಅನುಸರಿಸಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರಸ್ತಾವನೆ ಮಂಡಿಸಿದರು.

ಆರ್‌ಡಿಎಸ್ಎಸ್‌ ಯೋಜನೆ ಅನುಷ್ಠಾನ ಮಾಡಿಕೊಂಡರೆ ಸರ್ಕಾರಕ್ಕೆ ಸಾವಿರಾರು ಕೋಟಿ ರು. ಉಳಿತಾಯವಾಗಲಿದೆ. ಗ್ರಾಹಕರಿಗೂ ಶೇ.15ರಷ್ಟು ಸಬ್ಸಿಡಿ ದರದಲ್ಲಿ ಮೀಟರ್‌ ದೊರೆಯಲಿದೆ. ಯೋಜನೆಗಾಗಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗೆ ಅಗತ್ಯವಿರುವ ಹಣವನ್ನು ಕೇಂದ್ರ ಸರ್ಕಾರವೇ ನೀಡಲಿದೆ ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿಲ್ಲ. ಈಗಾಗಲೇ ಬೆಲೆ ಏರಿಕೆ ಹೆಚ್ಚಳದಿಂದ ಜನ ಸಮಸ್ಯೆಗೆ ಸಿಲುಕಿದ್ದಾರೆ. ಈಗ ಹೊಸದಾಗಿ ಹೆಚ್ಚುವರಿ ತೆರಿಗೆ ಎಂದರೆ ಸಮಸ್ಯೆಯಾಗಲಿದೆ. ಹೀಗಾಗಿ ಪರ್ಯಾಯ ಮಾರ್ಗಗಳು ಇದ್ದರೆ ಯೋಚನೆ ಮಾಡಿ. ಸಾಧಕ-ಬಾಧಕಗಳನ್ನು ಪರಿಶೀಲಿಸಿ ಮುಂದಿನ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ ಎಂದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಸಂಪುಟ ಸಭೆಯಲ್ಲೇ ಚರ್ಚೆಯಾಗಿತ್ತು:

ಜು.17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಾಯೋಗಿಕವಾಗಿ ಮೈಸೂರು ಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಸುವ ಆರ್‌ಡಿಎಸ್‌ಎಸ್‌ (ರಿವ್ಯಾಂಪ್ಡ್‌ ಡಿಸ್ಟ್ರಿಬ್ಯೂಷನ್‌ ಸೆಕ್ಟರ್‌ ಸ್ಕೀಂ) ಜಾರಿ ಮಾಡಲು ವಿಷಯ ಮಂಡನೆಯಾಗಿತ್ತು.

ಸೆಸ್ಕ್‌ ವ್ಯಾಪ್ತಿಯಲ್ಲಿ 3,779 ಕೋಟಿ ರು. ವೆಚ್ಚದಲ್ಲಿ ಆರ್‌ಡಿಎಸ್‌ಎಸ್‌ ಅನುಷ್ಠಾನಗೊಳಿಸಲು ಪ್ರಸ್ತಾಪಿಸಲಾಗಿದೆ. ಆದರೆ, ಆರ್‌ಡಿಎಸ್‌ಎಸ್‌ ಜಾರಿಯಾಗಬೇಕಾದರೆ ಸರ್ಕಾರ ಹಾಗೂ ಸರ್ಕಾರದ ಅಂಗಸಂಸ್ಥೆಗಳು ಎಸ್ಕಾಂಗೆ ಬಾಕಿ ಇರುವ ಸಂಪೂರ್ಣ ಬಿಲ್ ಪಾವತಿಸಬೇಕು.ಇ ದಕ್ಕಾಗಿ ಸೆಸ್ಕ್‌ ವ್ಯಾಪ್ತಿಯಲ್ಲಿ ಬಾಕಿಯಿರುವ ಹಣವನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಶೇ.2 ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲು ಸಂಪುಟದಲ್ಲಿ ಪ್ರಸ್ತಾಪಿಸಲಾಯಿತು. ಇದಕ್ಕೆ ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಜತೆಗೆ ಯೋಜನೆಯನ್ನು ಒಂದೊಂದು ಎಸ್ಕಾಂಗೆ ಸೀಮಿತವಾಗಿ ಜಾರಿ ಮಾಡಲು ಬರುವುದಿಲ್ಲ. ಮಾಡಿದರೆ ರಾಜ್ಯಾದ್ಯಂತ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಷಯವನ್ನು ಮುಂದೂಡಿದ್ದರು. ಇದೀಗ ಮಂಗಳವಾರ ಈ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಮಾರ್ಟ್ ಮೀಟರ್‌ ಸುತ್ತ

- ರಾಜ್ಯಾದ್ಯಂತ ಜನತೆಗೆ ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ಕಡ್ಡಾಯ ಶಾಕ್‌ ಸಂಭವ

- ಈಗಾಗಲೇ ನೂತನ, ತಾತ್ಕಾಲಿಕ ಸಂಪರ್ಕಕ್ಕೆ ಸ್ಮಾರ್ಟ್‌ ಮೀಟರ್ ಕಡ್ಡಾಯ

- ಈಗ ಎಲ್ಲ ಹಳೇ ಮೀಟರ್‌ ಬದಲಿಸಿ ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಚಿಂತನೆ

- ಆರ್‌ಡಿಎಸ್‌ಎಸ್‌ ಅಡಿ ಇಂಧನ ಇಲಾಖೆಯಿಂದ ಪ್ರಸ್ತಾವನೆ ಸಿದ್ಧ. ಭಾರಿ ಚರ್ಚೆ

- ಸಾಧಕ-ಬಾಧಕ ಪರಿಶೀಲಿಸಿ ಮುಂದಿನ ಸಂಪುಟದಲ್ಲಿ ಮಂಡನೆಗೆ ಸಿಎಂ ಸೂಚನೆ

ಏನಿದು ಆರ್‌ಡಿಎಸ್‌ಎಸ್‌?

ಆರ್‌ಡಿಎಸ್‌ಎಸ್‌ (ರಿವ್ಯಾಂಪ್ಡ್ ಡಿಸ್ಟ್ರಿಬ್ಯೂಷನ್‌ ಸೆಕ್ಟರ್ ಸ್ಕೀಂ) ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದರಡಿ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡರೆ ಶೇ.100 ರಷ್ಟು ಮೀಟರ್‌ಗಳನ್ನು ಸ್ಮಾರ್ಟ್‌ ಮೀಟರ್ ಆಗಿ ಬದಲಿಸಬೇಕು. ಇದಕ್ಕಾಗಿ ಮೀಟರ್‌ಗೆ ಶೇ.15ರಷ್ಟು ಸಬ್ಸಿಡಿ ಹಾಗೂ ಐಟಿ ಮೂಲಸೌಕರ್ಯ ವ್ಯವಸ್ಥೆಗೆ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತದೆ.

ನಾಡಿದ್ದಿಂದ 2 ದಿನ ಎಸ್ಕಾಂ ಆನ್‌ಲೈನ್‌ ಸೇವೆ ಅಲಭ್ಯ

ಬೆಂಗಳೂರು: ವಿದ್ಯುತ್‌ ಸರಬರಾಜು ನಿರ್ವಹಣೆ ವ್ಯವಸ್ಥೆಯ ಸಾಫ್ಟ್‌ವೇರ್‌ ಉನ್ನತೀಕರಣದ ಹಿನ್ನೆಲೆಯಲ್ಲಿ ಜು.25 ರಿಂದ ಜು.27ರವರೆಗೆ 2 ದಿನಗಳ ಕಾಲ ರಾಜ್ಯದ 5 ಎಸ್ಕಾಂಗಳ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಆನ್‌ಲೈನ್‌ ಸೇವೆ ಸ್ಥಗಿತಗೊಳ್ಳಲಿವೆ. ಜು.25ರ ರಾತ್ರಿ 8.30 ಗಂಟೆಯಿಂದ ಜು.27 ರಂದು ರಾತ್ರಿ 10 ಗಂಟೆವರೆಗೆ ವಿದ್ಯುತ್‌ ಬಿಲ್‌ ಪಾವತಿ, ಹೆಸರು ಬದಲಾವಣೆ ಹಾಗೂ ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆ ಸೇರಿ ಯಾವುದೇ ಆನ್‌ಲೈನ್‌ ಆಧರಿತ ಸೇವೆ ಲಭ್ಯವಿರುವುದಿಲ್ಲ.

Read more Articles on