ಕೆಲ ದಿನಗಳ ಹಿಂದಷ್ಟೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿರುವ ಬಸವನಗುಡಿಯ ಗಾಂಧಿ ಬಜಾರ್ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ದುರುಪಯೋಗವಾಗುತ್ತಿರುವ ಆರೋಪ ಕೇಳಿ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಲ ದಿನಗಳ ಹಿಂದಷ್ಟೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿರುವ ಬಸವನಗುಡಿಯ ಗಾಂಧಿ ಬಜಾರ್ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ದುರುಪಯೋಗವಾಗುತ್ತಿರುವ ಆರೋಪ ಕೇಳಿ ಬಂದಿದೆ.ಪಾರ್ಕಿಂಗ್ ತಾಣದಲ್ಲಿ ಐಷಾರಾಮಿ ಕಾರುಗಳನ್ನು ನಿಲ್ಲಿಸಿ ಅಕ್ಕ ಪಕ್ಕದಲ್ಲಿ ಬೇರೆ ಕಾರುಗಳು ನಿಲ್ಲಿಸದಂತೆ ಟೇಪ್ ಕಟ್ಟಲಾಗಿದೆ. ಅಲ್ಲದೇ 2 ಕಾರುಗಳು ನಿಲ್ಲಿಸುವ ಜಾಗದಲ್ಲಿ ಒಂದು ಕಾರನ್ನು ಮಧ್ಯದಲ್ಲಿ ನಿಲ್ಲಿಸಲಾಗಿದೆ. ಈ ರೀತಿ ಕಾರು ಪಾರ್ಕಿಂಗ್ ಸ್ಥಳದ ದುರುಪಯೋಗದ ಕುರಿತು ಕೃಷ್ಣನ್ ಆರ್ ಎಂಬುವರು ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಗಾಂಧಿ ಬಜಾರ್ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್‌ನಲ್ಲಿ ಡಜನ್‌ಗಟ್ಟಲೇ ಲಕ್ಸುರಿ ಕಾರುಗಳನ್ನು ಪಾರ್ಕಿಂಗ್ ಮಾಡಿರುವುದನ್ನು ನೋಡಿದೆ. ಇದು ಸಾರ್ವಜನಿಕ ಪಾರ್ಕಿಂಗ್ ಸ್ಥಳದ ದುರುಪಯೋಗದ ಸ್ಪಷ್ಟ ನಿದರ್ಶನವಾಗಿದೆ. ತಮ್ಮ ಸ್ವಂತ ಪಾರ್ಕಿಂಗ್ ಸ್ಥಳದಂತೆ ಕಾರುಗಳನ್ನು ನಿಲ್ಲಿಸಲಾಗಿದೆ. ಭಾನುವಾರ ಪಾರ್ಕಿಂಗ್ ಮಾಡಲು ಜಾಗವಿಲ್ಲದೇ ಅನೇಕ ವಾಹನ ಚಾಲಕರು ವಾಪಸ್ ಹೋಗಿದ್ದಾರೆ. ಆದರೆ, ಎಲ್‌ಇಡಿ ಫಲಕದಲ್ಲಿ ಪಾರ್ಕಿಂಗ್‌ಗೆ ಜಾಗವಿದೆ ಎಂದು ತೋರಿಸುತ್ತಿತ್ತು. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷ್ಣನ್ ಕೋರಿದ್ದಾರೆ.‘ಕೆಲವರು ತಿಂಗಳ ಪಾಸ್ ತೆಗೆದುಕೊಂಡು ಕಾರು ಪಾರ್ಕಿಂಗ್ ಮಾಡುತ್ತಾರೆ. ಅದಕ್ಕೆ ಅವಕಾಶವಿದೆ. ಆದರೆ, ತಮಗಿಷ್ಟ ಬಂದಂತೆ ಕಾರು ನಿಲ್ಲಿಸಲು, ಟೇಪ್ ಕಟ್ಟಿಕೊಳ್ಳಲು ಅವಕಾಶವಿಲ್ಲ. ಈ ಕುರಿತು ಪರಿಶೀಲನೆ ನಡೆಸುತ್ತೇನೆ’ ಎಂದು ಪಾರ್ಕಿಂಗ್ ಸ್ಥಳದ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರ ಕುಮಾರ್ ತಿಳಿಸಿದರು.

ನೋಟಿಸ್ ನೀಡುತ್ತೇವೆ: ಪಾರ್ಕಿಂಗ್ ಸ್ಥಳದ ದುರುಪಯೋಗದ ಬಗ್ಗೆ ಪರಿಶೀಲನೆ ನಡೆಸಿ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡುತ್ತೇವೆ. ಖಾಸಗಿ ಸ್ಥಳದಂತೆ ಸಾರ್ವಜನಿಕ ಪಾರ್ಕಿಂಗ್ ಸ್ಥಳ ಬಳಸಿಕೊಳ್ಳಲು ಅವಕಾಶವಿಲ್ಲ ಎಂದು ಜಿಬಿಎ ಚಿಕ್ಕಪೇಟೆ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರದೀಪ್ ಕುಮಾರ್ ಹೇಳಿದರು.