ಸಾರಾಂಶ
ನರಸಿಂಹರಾಜಪುರ, ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಸಾತ್ಕೋಳಿಯ ಹಳ್ಳದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ 2 ಹಸುಗಳು ಕೊಚ್ಚಿಹೋದ ಘಟನೆ ನಡೆದಿದೆ.
ಮನವಿ ನೀಡಿದರೂ ನಿರ್ಮಾಣವಾಗದ ಸೇತುವೆ: ಗ್ರಾಮಸ್ಥರ ಆರೋಪ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಸಾತ್ಕೋಳಿಯ ಹಳ್ಳದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ 2 ಹಸುಗಳು ಕೊಚ್ಚಿಹೋದ ಘಟನೆ ನಡೆದಿದೆ.
ಸಾತ್ಕೋಳಿಗೆ ಹೋಗಬೇಕಾದರೆ ಮಾರ್ಗ ಮದ್ಯೆ ಸಾತ್ಕೋಳಿ ಹಳ್ಳ ಸಿಗುತ್ತದೆ.ಈ ಹಳ್ಳಕ್ಕೆ ಸಣ್ಣ ಪೈಪುಗಳು ಹಾಕಿ ಮೋರಿ ಮಾತ್ರ ನಿರ್ಮಿಸ ಲಾಗಿದೆ. ಮಳೆ ಜೋರಾಗಿ ಬಂದಾಗ ಪೈಪಿನಲ್ಲಿ ನೀರು ಹೋಗಲು ಸಾಧ್ಯವಾಗದೆ ನೀರು ಉಕ್ಕಿ ರಸ್ತೆಯ ಮೇಲೆ ಹರಿಯುತ್ತದೆ. ಈ ಭಾಗದ ದನಗಳು ಕಾಡಿನಲ್ಲಿ ಮೇಯ್ದು ವಾಪಾಸು ಈ ರಸ್ತೆಯ ಮೇಲೆ ಬರಬೇಕಾದರೆ ಸಂಜೆ 5 ಗಂಟೆ ಹೊತ್ತಿಗೆ ಎರಡು ದನಗಳು ನೀರಿನಲ್ಲಿ ಕೊಚ್ಚಿಕೊಂಡು ಹಳ್ಳಕ್ಕೆ ಸೇರಿದೆ. ಸಾತ್ಕೋಳಿಯ ನಾಗೇಶ ಹಾಗೂ ನಾಗರತ್ನ ಅವರಿಗೆ ಈ ಹಸುಗಳು ಸೇರಿವೆ.ಇದೇ ಹಳ್ಳದಲ್ಲಿ ಕೆಲವು ವರ್ಷಗಳ ಹಿಂದೆ ಭಾರೀ ಮಳೆಯಿಂದಾಗಿ ಕಾರೊಂದು ಹಳ್ಳಕ್ಕೆ ಹೋಗಿ ಒಬ್ಬರು ಮೃತ ಪಟ್ಟಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ. ಹಲವಾರು ವರ್ಷಗಳಿಂದ ಸಾತ್ಕೋಳಿ ಹಳ್ಳಕ್ಕೆ ದೊಡ್ಡ ಸೇತುವೆ ನಿರ್ಮಿಸಿಕೊಡಬೇಕು ಎಂದು ಸಂಬಂಧ ಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ನೀಡಿದರೂ ಸೇತುವೆ ನಿರ್ಮಾಣವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಅಡಿಕೆ, ಬತ್ತಕ್ಕೆ ಹಾನಿ:ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ಸಾತ್ಕೋಳಿಯ ರಾಮಣ್ಣ, ಗಂಗಣ್ಣ, ಪುಟ್ಟಸ್ವಾಮಿ, ಲಿಂಗಣ್ಣ ಮುಂತಾದವರ ಅಡಕೆ ತೋಟದ ಮೇಲೆ ಹಳ್ಳದ ನೀರು ಹರಿದು ತೋಟಗಳು ಹಾಳಾಗಿವೆ. ಅಲ್ಲದೆ ಇದೇ ಗ್ರಾಮದ ಮಂಜುನಾಥ, ನಾಗರತ್ನ, ನಾಗಪ್ಪ, ಕೃಷ್ಣಪ್ಪ ಎಂಬುವರ ಗದ್ದೆಗಳ ಮೇಲೆ ನೀರು ಹರಿದು ಬತ್ತದ ಪೈರು ಹಾಳಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.