ಸಾರಾಂಶ
8 ವರ್ಷಗಳಿಂದ ನಗರದ 83 ಟವರ್‌ಗಳ ಗುತ್ತಿಗೆದಾರರು ತೆರಿಗೆ ಪಾವತಿಸಿಲ್ಲ
ವಿಶೇಷ ವರದಿಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ನಗರಸಭೆಗೆ ಮೊಬೈಲ್ ನೆಟ್‌ವರ್ಕ್ ಟವರ್ ಕಂಪನಿಗಳು ಸುಮಾರು 2 ಕೋಟಿ ರು.ಗೂ ಅಧಿಕ ತೆರಿಗೆಯನ್ನು ಬಾಕಿ ಇರಿಸಿದ್ದು, ಇದೀಗ ನಗರಸಭೆ ಕಾನೂನು ಕ್ರಮಕ್ಕೆ ಮುಂದಾಗಿದೆ.ಒಂದೆಡೆ ಮೊಬೈಲ್ ನೆಟ್‌ವರ್ಕ್ ಸೇವಾದಾರರ ಮೇಲಾಟದಿಂದಾಗಿ ಜಿಲ್ಲೆಯ ಹೃದಯ ಭಾಗವಾಗಿರುವ ಉಡುಪಿ ನಗರದಲ್ಲಿಯೇ ಸಿಗ್ನಲ್ ತೀರಾ ದುರ್ಬಲವಾಗಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ. ಇನ್ನೊಂದೆಡೆ ಮೊಬೈಲ್ ಟವರ್ ಕಂಪನಿಗಳು ಕಳೆದ 8 ವರ್ಷಗಳಿಂದ ತೆರಿಗೆ ಶುಲ್ಕವನ್ನು ಪಾವತಿಸದೇ ನಗರಸಭೆಯನ್ನೇ ಯಾಮಾರಿಸುತಿವೆ.
ಪ್ರಸ್ತುತ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಿವಿಧ ಮೊಬೈಲ್ ನೆಟ್‌ವರ್ಕ್‌ಗಳ 83 ಟವರ್‌ಗಳಿವೆ. ಇನ್ನೂ 8 ಟವರ್‌ಗಳಿಗೆ ಜಿಲ್ಲಾಡಳಿತ ಅನುಮತಿ ನೀಡಿದೆ.ಈ ಟವರ್‌ಗಳನ್ನು ನೆಟ್‌ವರ್ಕ್ ಕಂಪನಿಗಳು ತಾವೇ ನಿರ್ಮಿಸುವುದಿಲ್ಲ, ಅವುಗಳನ್ನು ಖಾಸಗಿ ಸಂಸ್ಥೆಯೊಂದು ಗುತ್ತಿಗೆ ಪಡೆದು ನಿರ್ಮಾಣ ಮಾಡುತ್ತವೆ ಮತ್ತು ಈ ಟವರ್‌ಗಳನ್ನು ಮೊಬೈಲ್ ನೆಟ್‌ವರ್ಕ್ ಕಂಪನಿಗಳಿಗೆ ಬಾಡಿಗೆಗೆ ನೀಡಿ ಲಕ್ಷಾಂತರ ರು. ಲಾಭ ಪಡೆಯುತ್ತವೆ.
ಈ ಟವರ್ ನಿರ್ಮಾಣ ಒಂದು ವಾಣಿಜ್ಯ ವ್ಯವಹಾರವಾಗಿದ್ದು, ಗುತ್ತಿಗೆದಾರರು ಉಡುಪಿ ನಗರಸಭೆಗೆ ವರ್ಷಕ್ಕೆ 12,500 ರು. ವಾಣಿಜ್ಯ ತೆರಿಗೆಯನ್ನು ಕಟ್ಟಬೇಕು. ಆದರೆ ಒಂದು ಮಾಹಿತಿಯ ಪ್ರಕಾರ ಟವರ್ ಗುತ್ತಿಗೆದಾರರು ನಗರಸಭೆಗೆ 2017ರಿಂದ ತೆರಿಗೆ ಪಾವತಿಸಿಲ್ಲ.ಜೊತೆಗೆ ಈ ಟವರ್‌ಗಳನ್ನು ಖಾಸಗಿಯವರ ಕಟ್ಟಡಗಳ ಮೇಲೆ ಅಥವಾ ಭೂಮಿಯಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದ ಈ ಕಟ್ಟಡ ಅಥವಾ ಭೂಮಿಯ ಮಾಲಕರಿಗೆ ಪ್ರತಿ ತಿಂಗಳು ಸುಮಾರು 10 ಸಾವಿರ ರು.ಗಳಷ್ಟು ವಾಣಿಜ್ಯ ಲಾಭ ಇರುವುದರಿಂದ ಅವರು ಕೂಡ ನಗರಸಭೆಯಿಂದ ವಾಣಿಜ್ಯ ಪರವಾಮಗಿ ಪಡೆದು ವಾಣಿಜ್ಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ ನಗರಸಭೆಗೆ ಈ ತೆರಿಗೆ ಕೂಡ ಕೂಡ ಪಾವತಿಯಾಗುತ್ತಿಲ್ಲ.
ಆಶ್ಚರ್ಯ ಎಂದರೆ ಟವರ್ ನಿರ್ಮಾಣಕ್ಕೆ ನಗರಸಭೆಯಿಂದ ಪರವಾನಗಿಯೇ ಇಲ್ಲದೇ ಟವರ್ ನಿರ್ಮಾಣ ಮಾಡಿದ್ದರೂ, ಈ ಎಲ್ಲ ಟವರ್‌ಗಳಿಗೆ ಮೆಸ್ಕಾಂ ವಿದ್ಯುತ್ ಸಂಪರ್ಕ ನೀಡಿದೆ.ಉಡುಪಿ ನಗರಸಭೆಯ 5ನೇ ಹಣಕಾಸು ಲೆಕ್ಕಪರಿಶೋಧನಾ ವರದಿಯಲ್ಲಿ ಮೊಬೈಲ್ ಟವರ್‌ಗಳಿಂದ ಸುಮಾರು 2 ಕೋಟಿ ರು.ಗಳಷ್ಟು ತೆರಿಗೆ ಸಂಗ್ರಹಕ್ಕೆ ಬಾಕಿ ಬಗ್ಗೆ ನಗರಸಭೆಯ ಅಧಿಕಾರಗಳ ನಿರ್ಲಕ್ಷ್ಯಕ್ಕೆ ಆಕ್ಷೇಪ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ನಗರಸಭೆಯ ಅಧಿಕಾರಿಗಳು ಈ ಟವರ್ ಗುತ್ತಿಗೆದಾರರಿಗೆ ತಕ್ಷಣ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿ, ತಪ್ಪಿದಲ್ಲಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.------------ಕಾನೂನು ಕ್ರಮಕ್ಕೆ ನಿರ್ಧಾರ: ನಗರಸಭೆ ಅಧ್ಯಕ್ಷ
ಟವರ್ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಅದಕ್ಕೆ ಗುತ್ತಿಗೆದಾರರು ತೆರಿಗೆ ಕಟ್ಟಬೇಕಾಗಿಲ್ಲ ಎಂದು ಹೈಕೋರ್ಟ್‌ನ ಆದೇಶವನ್ನು ತೋರಿಸುತ್ತಿದ್ದಾರೆ. ಆದರೆ ಈ ಆದೇಶದಲ್ಲಿ 2005ರಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ವಿಧಿಸಿರುವ ಷರತ್ತುಗಳನ್ನು ಪೂರೈಸಿ ಟವರ್ ನಿರ್ಮಾಣ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅದರಂತೆ ಅವರು ವಾಣಿಜ್ಯ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಕಟ್ಟದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದ್ದಾರೆ.