ಉತ್ಸವ ಮುಗಿದ 2 ದಿನದಲ್ಲಿ ಮತ್ತೆ ಯಥಾಸ್ಥಿತಿ

| Published : Oct 29 2025, 11:15 PM IST

ಸಾರಾಂಶ

ಮದುವಣಗಿತ್ತಿಯಂತೆ ಜಗಮಗಿಸಿ ಕಂಗೊಳಿಸುತ್ತಿದ್ದ ಕಿತ್ತೂರು ಪಟ್ಟಣ ಉತ್ಸವ ಮುಗಿದ 2 ದಿನದಲ್ಲಿ ಮತ್ತೆ ಯಥಾಸ್ಥಿತಿಗೆ ಮರುಕಳಿಸಿದ್ದು ಸಂಭ್ರಮದ ವಾತಾವರಣ ಕಳೆಗುಂದಿದೆ.

ಸೋಮಶೇಖರ ಕುಪ್ಪಸಗೌಡರ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು ಮದುವಣಗಿತ್ತಿಯಂತೆ ಜಗಮಗಿಸಿ ಕಂಗೊಳಿಸುತ್ತಿದ್ದ ಕಿತ್ತೂರು ಪಟ್ಟಣ ಉತ್ಸವ ಮುಗಿದ 2 ದಿನದಲ್ಲಿ ಮತ್ತೆ ಯಥಾಸ್ಥಿತಿಗೆ ಮರುಕಳಿಸಿದ್ದು ಸಂಭ್ರಮದ ವಾತಾವರಣ ಕಳೆಗುಂದಿದೆ.

ಪಟ್ಟಣದುದ್ದಕ್ಕೂ ಹಾಕಲಾಗಿದ್ದ ವಿವಿಧ ಬಣ್ಣಗಳುಳ್ಳ ವಿದ್ಯುತ್ ಅಲಂಕಾರ ಎಲ್ಲರನ್ನು ಉತ್ಸವದ ನಿಮಿತ್ತ ಕೈ ಬಿಸಿ ಕರೆದು ತನ್ನ ಸೌದಂರ್ಯ ಪ್ರದರ್ಶಿಸಿತ್ತು. ಪಟ್ಟಣದ ಪ್ರಮುಖ ಬೀದಿಗಳು ಮದುವೆಯ ಮನೆಯಂತೆ ಗೋಚರಿಸಿದ್ದವು. ಇತ್ತ ಐತಿಹಾಸಿಕ ಕೋಟೆ ಹಾಗೂ ಹಾಗೂ ಆವರಣವೂ ಅಂದಿನ ಗತವೈಭವ ನೆನಪಿಸುವಂತಿತ್ತು. ಆದರೆ, ಉತ್ಸವ ಮುಗಿದ ಹಿನ್ನೆಲ್ಲೆಯಲ್ಲಿ ಐತಿಹಾಸಿಕ ಕಿತ್ತೂರು ಕೋಟೆ ತನ್ನಲ್ಲೆ ಹುಮ್ಮಸ್ಸು ಕಳೆದುಕೊಂಡು ಮತ್ತೆ ಶಾಂತವಾಗಿದೆ.ಸಕಲ ಸಿದ್ಧತೆ ಕೈಗೊಂಡಿದ್ದ ಜಿಲ್ಲಾಡಳಿತ:

ಕಿತ್ತೂರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮ ಕೈಗೊಂಡಿತ್ತು. ಇದರಲ್ಲಿ ಯಶಸ್ಸು ಸಹ ಕಂಡಿತ್ತು. ಆದರೆ, ವರುಣ ದೇವನ ಅವಕೃಪೆಯಿಂದ ಉತ್ಸವದ ಮೊದಲೆರೆಡು ದಿನಗಳಲ್ಲಿ ಜನರಿಲ್ಲದೆ ನೀರಸ ಪ್ರತಿಕ್ರಿಯೆ ಕಂಡು ಬಂದಿತು.

ಉತ್ಸವದ ಆಚರಣೆಗಾಗಿ ಕ್ರೀಡೆಯೊಂದನ್ನು ಹೊರತುಪಡೆಸಿ ಇನ್ನುಳಿದ ಎಲ್ಲ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಆಯೋಜಿಸಿತ್ತು. ಫಲಪುಷ್ಪ ಅಲಂಕಾರ, ವಸ್ತು ಪ್ರದರ್ಶನ, ಜಲಸಾಹಸ, ಆರೋಗ್ಯ ಮೇಳ, ರಾಜ್ಯಮಟ್ಟದ ಮಹಿಳಾ ಗೋಷ್ಠಿಗಳು, ರಾಜ್ಯಮಟ್ಟದ ವಿಚಾರ ಸಂಕಿರಣ, ಭತ್ತೇರಿ ಮೇಲೆ ದೀಪೋತ್ಸವ ಹಾಗೂ ಸಿಡಿಮದ್ದು ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು.ಮನಸೂರೆಗೊಳಿಸಿದ ಸಾಂಸ್ಕೃತಿಕ ಕಾರ್ಯಕ್ರಮ:

ಮಧ್ಯಾಹ್ನ ೩ಕ್ಕೆ ಮುಖ್ಯ ವೇದಿಕೆಯಾದ ಚನ್ನಮ್ಮಾಜಿಯ ವೇದಿಕೆಯ ಮೇಲೆ ನಾಡಿನ ವಿವಿಧ ಜಾನಪದ ಲೋಕ ಅನಾವರಣಗೊಂಡು ಉತ್ತರ ಕರ್ನಾಟಕದ ನಾಡು ನುಡಿ, ಜನಪದ ಶೈಲಿ, ಬಯಲಾಟ, ನೃತ್ಯ ರೂಪಕ, ಶಹನಾಯಿ, ನೃತ್ಯ ರೂಪಕಗಳು, ಹಾಸ್ಯ, ವಿವಿಧ ಸಂಗೀತದ ವೈವಿಧ್ಯತೆ, ನೊಡುಗರ ಮನಸೂರೆಗೊಳಿಸಿತು. ನಂತರ ಮುಸ್ಸಂಜೆ ಸಮಯಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಗರೋಪಾದಿಯಲ್ಲಿ ಹರಿದು ಬಂದು ಜನ ಸಾಗರ ಸಾಂಸ್ಕೃತೀಕದ ರಂಗು ಮತ್ತಷ್ಟು ರಂಗೇರುವಂತೆ ಮಾಡಿತು. ಮಂಜುನಾಥ ಹುಡೇದ, ಪ್ರವೀಣ ಕೆ.ಆರ್ ಪೇಟೆ ಶಿವು ಪ್ರಸ್ತುತ ಪಡಿಸಿದ ರಸಮಂಜರಿ, ರಮಿಂದರ್ ಖುರಾನಾ ನೃತ್ಯ, ಆಲ್ ಒಕೆ ತಂಡದ ರಸಮಂಜರಿ, ಬೆಂಗಳೂರಿನ ಸರಿಗಮಪ ತಂಡದ ರಸಮಂಜರಿ ಜನರನ್ನು ವೇದಿಕೆಯ ಮುಂದೆ ಹಿಡದಿಟ್ಟುಕೊಳ್ಳಲು ಯಶಸ್ವಿಯಾದವು.ಸಮಾರೋಪದ ದಿನದಂದು ಜಾನಪದ ಹಾಡಿನ ಖ್ಯಾತ ಗಾಯಕರಾದ ಬಾಳು ಬೆಳಗುಂದಿ, ಹನುಮಂತ ಲಮಾಣಿ ತಂಡವೂ ಜನರು ಕಿಕ್ಕಿರಿದು ವೇದಿಕೆ ಮುಂದೆ ನಿಲ್ಲುವಂತೆ ಮಾಡಿತು. ಹುಟ್ಟಿದ ಊರಿಗೆ ಹೋದರ್ ಕಟ್ಟಿ ಬಡಿತಾರ ಹಾಡಿಗೆ ನೆರದ ಜನ ಮಂತ್ರಮುಗ್ಧರಾದರು. ಕುಣಿತಾಳೋ ಕುಣಿತಾಳೋ ಹಾಡಿಗೆ ಯುವಕರು ಹೆಜ್ಜೆ ಹಾಕಿದ್ದಲ್ಲದೆ ಸಿಳ್ಳೆ ಚಪ್ಪಾಳೆಗಳು ಕೇಳಿ ಬಂದವು, ಹನುಮಂತ ಲಮಾಣಿ ಅವರ ನಿನ್ನ ಮಾರಿ ನೋಡೊಂಗ ಆಗೇತಿ ಸೇರಿದಂತೆ ಎಲ್ಲ ಹಾಡುಗಳು ಜನ ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಗಾಯಕಿ ನೀತಿ ಮೋಹನ ಮತ್ತು ತಂಡದಿಂದ ನಡೆದ ರಸಮಂಜರಿ ಕಾರ್ಯಕ್ರಮ ನೋಡುಗರ ಮನ ಗೆದ್ದಿದ್ದಲ್ಲದೆ ಯುವಕರ ಮನ ತಣಿಸಿತು. ಏನನ್ನೂ ಘೋಸಿಷದ ಮುಖ್ಯಮಂತ್ರಿ

ಕಿತ್ತೂರು ಉತ್ಸವಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಕಿತ್ತೂರು ಕರ್ನಾಟಕ ಭಾಗದ ಜನರ ಬಹು ನಿರೀಕ್ಷೆಯಿತ್ತು. ಜೊತೆಗೆ ಜನ ಪ್ರತಿನಿಧಿಗಳು ಸಹ ಇದರ ನಿರೀಕ್ಷೆಯಲ್ಲಿದ್ದರು. ಆದರೆ, ಮುಖ್ಯಮಂತ್ರಿಗಳು ಉತ್ಸವಕ್ಕೆ ೨ನೇ ಭಾರಿ ಬಂದರೂ ಯೊವೊಂದು ವಿಶೇಷ ಅನುದಾನ ಕಿತ್ತೂರು ಭಾಗಕ್ಕೆ ನೀಡಲಿಲ್ಲ. ವಿಶೇಷವಾದ ಘೋಷಣೆಗಳನ್ನು ಮಾಡದಿರುವುದು ನಾಡಿನ ಜನರಲ್ಲಿ ಬೇಸರವನ್ನುಂಟು ಮಾಡಿತು. ವೇದಿಕೆಯ ಮೇಲೆ ಕೇವಲ ಸರ್ಕಾರದ ಸಾಧನೆಗಳ ಕುರಿತು ಮಾತನಾಡಿ ಉತ್ಸವದ ಆಚರಣೆ ಶುಭಾಶಯ ನೀಡಿ ತೆರಳಿದ್ದು ಜನರಲ್ಲಿ ಬೇಸರವನ್ನುಂಟು ಮಾಡಿದ್ದಂತೂ ಸುಳ್ಳಲ್ಲ.