ಸಾರಾಂಶ
ಗುತ್ತಿಗೆದಾರನಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ವಿಚಾರಣೆಯನ್ನು ಭಾನುವಾರ ಸಹ ವೈಯಾಲಿಕಾವಲ್ ಪೊಲೀಸರು ಮುಂದುವರೆಸಿದ್ದಾರೆ.
ಬೆಂಗಳೂರು : ತ್ಯಾಜ್ಯ ವಿಲೇವಾರಿ ಗುತ್ತಿಗೆ ಸಂಬಂಧ 30 ಲಕ್ಷ ರು. ಕಮಿಷನ್ ನೀಡುವಂತೆ ಒತ್ತಾಯಿಸಿ ಗುತ್ತಿಗೆದಾರನಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ವಿಚಾರಣೆಯನ್ನು ಭಾನುವಾರ ಸಹ ವೈಯಾಲಿಕಾವಲ್ ಪೊಲೀಸರು ಮುಂದುವರೆಸಿದ್ದಾರೆ.
ಕೋಲಾರದಲ್ಲಿ ಬಂಧಿಸಲಾಗಿದ್ದ ಮುನಿರತ್ನ ಅವರನ್ನು ಶನಿವಾರ ತಡರಾತ್ರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದರು. ಬಳಿಕ ಪ್ರಕರಣದ ತನಿಖೆಗೆ ಎರಡು ದಿನಗಳು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದರು. ಅಂತೆಯೇ ಅಶೋಕನಗರ ಠಾಣೆಗೆ ಕರೆ ತಂದು ಮುನಿರತ್ನ ಅವರಿಗೆ ಪೊಲೀಸರು ಗ್ರಿಲ್ ನಡೆಸಿದ್ದಾರೆ. ಆದರೆ ತಮ್ಮ ಮೇಲಿನ ಆರೋಪಗಳನ್ನು ಶಾಸಕರು ನಿರಾಕರಿಸಿದ್ದಾರೆ ಎನ್ನಲಾಗಿದೆ.
ನನ್ನ ವಿರುದ್ಧ ರಾಜಕೀಯ ಪಿತೂರಿಯಿಂದ ಆರೋಪಿಸಲಾಗಿದೆ. ನಾನು ಯಾರಿಗೂ ಬೆದರಿಸಿಲ್ಲ ಹಾಗೂ ಜಾತಿ ನಿಂದನೆ ಮಾಡಿಲ್ಲ. ನಾನು ತಪ್ಪು ಮಾಡಿಲ್ಲ ಎಂದು ವಿಚಾರಣೆಯಲ್ಲಿ ಮುನಿರತ್ನ ಅಲವತ್ತುಕೊಂಡಿರುವುದಾಗಿ ಮೂಲಗಳು ಹೇಳಿವೆ.
ಶಾಸಕ ಮುನಿರತ್ನ ವಿರುದ್ಧ ತಮಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಗುತ್ತಿಗೆದಾರ ಚೆಲುವರಾಜ್ ಹಾಗೂ ಜಾತಿ ನಿಂದನೆ ಮಾಡಿರುವುದಾಗಿ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ದೂರು ನೀಡಿದ್ದರು.