ಸಾರಾಂಶ
ಬುಡಕಟ್ಟು ಸಮುದಾಯದ ಮಕ್ಕಳು ಬಹುಭಾಷೆ ಕಲಿತರೆ ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿಯಬಹುದು
ಕನ್ನಡಪ್ರಭ ವಾರ್ತೆ ಮೈಸೂರು
ಬುಡಕಟ್ಟು ಜನರ ಭಾಷೆಗಳು ಪ್ರಕೃತಿಯೊಂದಿಗೆ ಹೆಣೆದುಕೊಳ್ಳುತ್ತವೆ, ಇಂತಹ ಶ್ರೀಮಂತ ಭಾಷೆಗಳ ಬಗ್ಗೆ ಅಧ್ಯಯನ ಅಗತ್ಯ ಎಂದು ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಮಾಜಿ ನಿರ್ದೇಶಕ ಪ್ರೊ. ರಾಜೇಶ್ ಸಚ್ ದೇವ ತಿಳಿಸಿದರು.ನಗರದ ಹುಣಸೂರು ರಸ್ತೆಯಲ್ಲಿರುವ ಭಾರತೀಯ ಭಾಷಾ ಸಂಸ್ಥಾನದಲ್ಲಿ ಇಕ್ಕೀಚೆಗೆ ಆಯೋಜಿಸಿದ್ದ ಬುಡಕಟ್ಟು ಭಾಷೆ, ಸಂಸ್ಕೃತಿ ಮತ್ತು ಶಿಕ್ಷಣ ಕುರಿತ 2 ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನದ ವಿಸ್ತಾರವಾಗಲು ಬಹು ಭಾಷೆಯ ಕಲಿಕೆ ಅಗತ್ಯ. ಬುಡಕಟ್ಟು ಸಮುದಾಯದ ಮಕ್ಕಳು ಬಹುಭಾಷೆ ಕಲಿತರೆ ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿಯಬಹುದು ಎಂದರು.ಬುಡಕಟ್ಟು ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಒತ್ತಡ ಹಾಕಬಾರದು. ಅವರಿಗೆ ಜೀವನ ಶೈಲಿಯನ್ನು ನಾವು ಕಲಿಸುತ್ತಿದ್ದೇವೆಯೆಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ, ಅವರು ತಮ್ಮದೇ ಆದ ರಕ್ಷಣೆ, ಶಿಕ್ಷಣ, ಸಂಸ್ಕೃತಿ, ಭಾಷೆ, ಪರಂಪರೆಯನ್ನು ಕಟ್ಟಿ ಬೆಳೆಸಿದ್ದಾರೆ. ಅದನ್ನು ಶತ ಶತಮಾನಗಳಿಂದ ಉಳಿಸಿಕೊಂಡು ಬಂದಿದ್ದಾರೆ ಎಂದು ಅವರು ಹೇಳಿದರು.ಬುಡಕಟ್ಟು ಜನರ ಅವರ ಕುಟುಂಬಗಳಲ್ಲಿ ಜಾತಿ, ಧರ್ಮದ ಕಟ್ಟುಪಾಡಿಲ್ಲ. ಎಲ್ಲರೂ ಒಂದಾಗಿ ಬದುಕುತ್ತಾರೆ. ಡಾ. ಅಂಬೇಡ್ಕರ್ ಅವರ ಚಿಂತನೆಯ ಸಮಾಜ ಸಂವಿಧಾನ ಜಾರಿಗೂ ಮೊದಲೇ ಬುಡಕಟ್ಟು ಜನರಲ್ಲಿತ್ತು. ಸಂವಿಧಾನ ಸೂಚಿಸುವ ಅಂಶಗಳನ್ನು ತಮಗೇ ಅರಿವಿಲ್ಲದಂತೆ ಆಚರಿಸುತ್ತಿದ್ದಾರೆ. ನಮ್ಮೊಂದಿಗಿನ ಸಮೀಕರಣವು ಅವರಿಗೆ ಅನೇಕ ಬಾರಿ ಕಿರಿಕಿರಿ ಉಂಟು ಮಾಡುತ್ತದೆ. ಹೀಗಾಗಿ, ಅವರ ಜೊತೆಗಿದ್ದು ಕೆಲಸ ಮಾಡುವುದನ್ನು ನಾವು ಕಲಿತುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಸಮುದಾಯದೊಂದಿಗೆ ಕೆಲಸ ಮಾಡುವಾಗ ಅಲ್ಲಿನ ಸೂಕ್ಷ್ಮತೆಗಳ ಬಗ್ಗೆ ಎಚ್ಚರದಿಂದ ಇರಬೇಕು. ಭಾರತದ ಪ್ರತಿಯೊಂದು ಬುಡಕಟ್ಟು ಸಮುದಾಯದಲ್ಲೂ ಅನೇಕ ಕಥೆಗಳಿವೆ. ಅದರ ಸ್ವಾರಸ್ಯವನ್ನು ತಿಳಿಯುವ ಕೆಲಸವಾಗಬೇಕು ಹಾಗೂ ಅವರ ಭಾಷೆ ಮತ್ತು ಸಂಸ್ಕೃತಿ ಉಳಿಸಲು ಅವರ ಜೊತೆಗಿದ್ದು ಕೆಲಸ ಮಾಡಬೇಕು ಎಂದರು.ಸಿಐಐಎಲ್ ನಿರ್ದೇಶಕ ಪ್ರೊ. ಶೈಲೇಂದ್ರ ಮೋಹನ್, ಉಪ ನಿರ್ದೇಕರಾದ ಪ್ರೊ.ಪಿ.ಆರ್.ಡಿ. ಫರ್ನಾಂಡಿಸ್, ಪ್ರೊ. ಉಮಾರಾಣಿ ಪಾಪುಸ್ವಾಮಿ, ಕಾರ್ಯಕ್ರಮ ಸಂಯೋಜಕ ಡಾ. ಸುಜೋಯ್ ಸರ್ಕಾರ್ ಮೊದಲಾದವರು ಇದ್ದರು.