ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ರಿಂಗ್ ರಸ್ತೆಯಲ್ಲಿರುವ ಅಕ್ಕ ಮಹಾದೇವಿ ಬಡಾವಣೆಯಲ್ಲಿನ ಶಾಂತಾ ಆಸ್ಪತ್ರೆಯವರು ಉಚಿತ ಚಿಕಿತ್ಸೆಯ 2 ಜನಮುಖಿ ಯೋಜನೆಗಳ ಘೋಷಣೆ ಮಾಡಿದ್ದಾರೆ.ಆಸ್ಪತ್ರೆಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಸಂಜೀವ ಪಾಟೀಲ್, ಬರಗಾಲದಿಂದ ಜನ ತೊಂದರೆಯಲ್ಲಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸುವುದು ಮಾನವೀಯತೆ ಆಗಿದೆ ಎಂದು ಹೇಳಿದ್ದಾರೆ.
ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಜನತೆ ಅಪಘಾತ, ಟ್ರಾಮಾ ಕೇರ್, ತುರ್ತು ಚಿಕಿತ್ಸೆಗೆಂದು ಶಾಂತಾ ಆಸ್ಪತ್ರೆಗೆ ಬಂದಲ್ಲಿ ಅವರಿಗೆ ಔಷಧಿ, ಪ್ರಯೋಗಾಲಯ ಶುಲ್ಕ ಹೊರತು ಪಡಿಸಿ ಐಸಿಯೂ, ಡಯಾಲಿಸಿಸ್, ಬೆಡ್ ಶುಲ್ಕ ಸೇರಿದಂತೆ ಆಸ್ಪತ್ರೆಯ ಇನ್ಯಾವುದೇ ಶುಲ್ಕ ಪಡೆಯೋದಿಲ್ಲ. ಉಚಿತವಾಗಿ ಚಿಕಿತ್ಸೆ ನೀಡತ್ತೇವೆ ಎಂದಿದ್ದಾರೆ.ಈಗಾಗಲೇ ಕಳೆದ 2 ದಿನದಿಂದ ಅಫಜಲ್ಪುರ ಜನತೆಗಾಗಿ ಸಂಪೂರ್ಣ ಉಚಿತ ಚಿಕಿತ್ಸೆ ಘೋಷಿಸಲಾಗಿದ್ದು ಇದರಡಿಯಲ್ಲಿ 75ಕ್ಕೂ ಹೆಚ್ಚು ಜನ ಪ್ರಯೋಜನ ಪಡೆದಿದ್ದಾರೆಂದರು.
ಅಫಜಲ್ಪುರ ಮತಕ್ಷೇತ್ರದ ಹಿರಿಯ ಶಾಸಕರು, ಮುತ್ಸದ್ಧಿ ನಾಯಕರಾದಂತಹ ಎಂ.ವೈ ಪಾಟೀಲ್ ಫೌಂಡೇಷನ್ ಅಡಿಯಲ್ಲಿ ಕಳೆದ 2023ರ ಸೆ.17ರಂದು ಆಸ್ಪತ್ರೆ ಆರಂಭವಾಗಿದೆ. ಜನರ ಸಹಕಾರದಿಂದ ಆಸ್ಪತ್ರೆ 6 ತಂಗಳಲ್ಲೇ ಸಾಕಷ್ಟು ಆರೋಗ್ಯ ಸೇವೆಗಳನ್ನು ನೀಡುವ ಮೂಲಕ ಜನರ ಗಮನ ಸೆಳೆದಿರೋದು ಖುಷಿಯ ಸಂಗತಿ ಎಂದರು.ಬರಗಾಲದಲ್ಲಿ ಆರೋಗ್ಯ ತೊಂದರೆಗೀಡಾಗಿ ನಲುಗುವ ಅಫಜಲ್ಪುರ ತಾಲೂಕು ಹಾಗೂ ಮತಕ್ಷೇತ್ರದಲ್ಲಿ ಬರುವ ಎಲ್ಲಾ ವರ್ಗದ ಬಡ, ಮಧ್ಯಮ ವರ್ಗದ ಕುಟುಂಬದವರಿಗೆ ಅತ್ಯುತ್ತಮ ಆರೋಗ್ಯ ಸೇವೆಗಳನ್ನೆಲ್ಲ ಆಸ್ಪತ್ರೆಯಿಂದ ಸಂಪೂರ್ಣ ಉಚಿತ. ಕಲಬುರಗಿ, ಯಾದಗಿರಿ ಜಿಲ್ಲೆಯ ಜನತೆ ಅಪಘಾತ, ಕ್ರಿಟಿಕಲ್ ಕೇರ್ ಎಂದು ಬಂದಲ್ಲಿ ಅವರಿಗೂ ಸಂಪೂರ್ಣ ಉಚಿತ ಚಿಕಿತ್ಸೆ ಇಲ್ಲಿ ಲಭ್ಯ ಎಂದು ಡಾ. ಸಂಜು ಪಾಟೀಲ್ ಹೇಳಿದರು.
ಖಾಸಗಿ ರಂಗದಲ್ಲಿ ಅತ್ಯುತ್ತಮ ಸವಲತ್ತುಗಳಿರುವ ಶಾಂತಾ ಆಸ್ಪತ್ರೆ ಪರಿಣಿತ ತಜ್ಞ ವೈದ್ಯರೊಂದಿಗೆ ಕೆಲಸ ಮಾಡುತ್ತಿದೆ. ಕಳೆದ 6 ತಿಂಗಳಲ್ಲೇ ಸ್ತ್ರೀರೋಗ - ಪ್ರಸೂತಿ ಸಂಬಂಧಿ 10ಕ್ಕೂ ಹೆಚ್ಚು, ಜನರಲ್ ಸರ್ಜರಿ- 35, ಎಲುಬು- ಮೂಳೆ ಸರ್ಜರಿ- 2, ನ್ಯೂರಾಲಜಿ ಸರ್ಜರಿ- 10, ಯೂರಾಲಜಿ- 10, ಲೇಸರ್ ಮೂಲಕ ಚಿಕಿತ್ಸೆ- 20, ಪ್ಲಾಸ್ಟಿಕ್ ಸರ್ಜರಿ- 10, ದಂತ- 5, ಇಎನ್‌ಟಿ- 5, ಕಣ್ಣು ಚಿಕಿತ್ಸೆ 25 ಹೀಗೆ ಹಲವು ವಿಭಾಗಗಳಲ್ಲಿ ಸಂಕೀರ್ಣ ಶಸ್ತ್ರ ಚಿಕಿತ್ಸೆ ಸೇವೆ ನೀಡಿದೆ ಎಂದರು.ಆಸ್ಪತ್ರೆ ನಿರ್ದೇಶಕಿ, ನೇತ್ರತಜ್ಞೆ ಡಾ. ಅಂಬಿಕಾ ಪಾಟೀಲ್, ಕ್ರಿಟಿಕಲ್ ಕೇರ್‌ನ ತಜ್ಞರಾದ ಡಾ. ತ್ರಿವೇಣಿ, ಡಾ. ಗ್ರೇಸ್, ಡಾ. ಜುಬೇದಾ ಸುದ್ದಿಗೋಷ್ಠಿಯಲ್ಲಿದ್ದರು.