ಸಾರಾಂಶ
ದಾಬಸ್‍ಪೇಟೆ: ಸೋಂಪುರ ಹೋಬಳಿಯಾದ್ಯಂತ ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಎರಡು ಗಂಟೆಗೂ ಹೆಚ್ಚು ಸಮಯ ಸುರಿದ ಧಾರಾಕಾರ ಮಳೆಯಿಂದಾಗಿ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ವ್ಯಾಪಾರಸ್ಥರು, ವಾಹನ ಸವಾರರು, ಸಾರ್ವಜನಿಕರು ಹೈರಾಣರಾದರು.
ಬಾರಿ ಮಳೆಯಿಂದಾಗಿ ಸಂತೆ ಮೈದಾನ ಕೆಸರುಗದ್ದೆಯಂತಾಗಿತ್ತು. ಮಳೆಯಿಂದಾಗಿ ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅಗೆದಿರುವ ರಸ್ತೆಗಳಲ್ಲಿ ಅರ್ಧಂಬರ್ಧ ಕಾಮಗಾರಿಯಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು. ಬೆಂಗಳೂರು-ತುಮಕೂರು ಕಡೆ ತೆರಳುವ ಸರ್ವೀಸ್ ರಸ್ತೆ ತುಂಬೆಲ್ಲಾ ಮೂರರಿಂದ ನಾಲ್ಕು ಅಡಿಗೂ ಹೆಚ್ಚಿನ ನೀರು ನಿಂತಿತ್ತು. ಮಳೆ ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಇರುವ ಚರಂಡಿ ಗಿಡ ಗಂಟಿಗಳಿಂದ ತುಂಬಿರುವುದು ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ರಸ್ತೆಯಲ್ಲಿಯೇ ನಿಂತಿದ್ದು ಇದರಿಂದ ಪಾದಚಾರಿಗಳು, ಶಾಲಾ ಮಕ್ಕಳು, ಬೈಕ್ ಸವಾರರು ಪರದಾಡಿದರು.
ಗಣೇಶ ಮಾರಾಟಗಾರರಿಗೆ ಮಳೆ ಅಡ್ಡಿ: ಪಟ್ಟಣದಲ್ಲಿ ಗಣೇಶ ಹಬ್ಬಕ್ಕೆ ಮಾರಾಟ ಮಾಡಲು ವಿವಿಧೆಡೆ ಗಣೇಶ ಮೂರ್ತಿಗಳನ್ನು ಯಾವುದೇ ಶೆಡ್ ಗಳಲ್ಲಿ ಸಂಗ್ರಹಿಸದ ಪರಿಣಾಮ ಮಂಗಳವಾರ ಸಂಜೆ ಬಿದ್ದ ಮಳೆಗೆ ಗಣೇಶ ಮೂರ್ತಿಗಳು ನೆನೆದು ಗಣೇಶ ಮಾರಾಟಗಾರರಿಗೆ ಮಳೆ ಅಡ್ಡಿಯುಂಟು ಮಾಡಿತ್ತು.