ತುಂಗಭದ್ರಾ ಜಲಾಶಯದಿಂದ ನದಿಗೆ 2 ಲಕ್ಷ ಕ್ಯುಸೆಕ್‌ ನೀರು

| Published : Aug 02 2024, 12:53 AM IST

ತುಂಗಭದ್ರಾ ಜಲಾಶಯದಿಂದ ನದಿಗೆ 2 ಲಕ್ಷ ಕ್ಯುಸೆಕ್‌ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ತುಂಗಭದ್ರಾ ಜಲಾಶಯದಿಂದ ನದಿಗೆ 2 ಲಕ್ಷ ಕ್ಯುಸೆಕ್‌ ನೀರನ್ನು ಹರಿಸುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ಪ್ರವಾಹದ ಸ್ಥಿತಿ ಗಂಭೀರಗೊಂಡಿದೆ.

ನದಿ ಪಾತ್ರದಲ್ಲಿ ಪ್ರವಾಹದ ಸ್ಥಿತಿ ಗಂಭೀರ

ಕನ್ನಡಪ್ರಭ ವಾರ್ತೆ ಮುನಿರಾಬಾದ

ತುಂಗಭದ್ರಾ ಜಲಾಶಯದಿಂದ ನದಿಗೆ 2 ಲಕ್ಷ ಕ್ಯುಸೆಕ್‌ ನೀರನ್ನು ಹರಿಸುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ಪ್ರವಾಹದ ಸ್ಥಿತಿ ಗಂಭೀರಗೊಂಡಿದೆ. ಜಲಾಶಯದ ಎಲ್ಲ 33 ಗೇಟುಗಳನ್ನು 4 ಅಡಿ ಎತ್ತರಕ್ಕೆ ಎತ್ತಿ ನದಿಗೆ ನೀರನ್ನು ಹರಿಸಲಾಗುತ್ತಿದೆ.

ಸಾಮಾನ್ಯವಾಗಿ 1 ಲಕ್ಷ ಕ್ಯುಸೆಕ್‌ ನೀರು ಹರಿಸಿದರೆ ಮುನಿರಾಬಾದಿನ ಹಳೆ ಸೇತುವೆ, ಹುಲಿಗೆಮ್ಮ ದೇವಸ್ಥಾನದ ಸ್ನಾನ ಘಟ್ಟ, ಹಂಪಿ ಸ್ಮಾರಕಗಳು, ಕಂಪ್ಲಿ ಸೇತುವೆ, ಶಿವಪುರದ ಮಾರ್ಕಂಡೇಶ್ವರ ದೇವಸ್ಥಾನ ಜಲಾವೃತಗೊಳ್ಳುತ್ತಿದ್ದವು. ಈವತ್ತು ಜಲಾಶಯದಿಂದ 2 ಲಕ್ಷ ಕ್ಯುಸೆಕ್‌ ನೀರನ್ನು ಹರಿಸಲಾಗುತ್ತಿದ್ದು, ನದಿ ಪಾತ್ರದಲ್ಲಿ ಪ್ರವಾಹದ ಸ್ಥಿತಿಯು ತುಂಬಾ ಗಂಭೀರವಾಗಿದೆ.

2 ಲಕ್ಷ ಕ್ಯುಸೆಕ್‌ ನೀರು:

ಜಲಾಶಯ ಭರ್ತಿಗೊಂಡರೆ ಸಾಮಾನ್ಯವಾಗಿ ನದಿಗೆ 50ರಿಂದ 1.50 ಲಕ್ಷ ಕ್ಯುಸೆಕ್‌ವೆರೆಗೆ ಜಲಾಯದಿಂದ ನದಿಗೆ ನೀರನ್ನು ಹರಿಸಲಾಗುತ್ತಿತ್ತು. ಅದರೆ ಪ್ರಸಕ್ತ ಸಾಲಿನಲ್ಲಿ 2 ಲಕ್ಷ ಕ್ಯುಸೆಕ್‌ ನೀರನ್ನು ಹರಿಸಲಾಗುತ್ತಿದೆ. ಇಷ್ಟು ಪ್ರಮಾಣದ ನೀರನ್ನು 1993ನಲ್ಲಿ ಹಾಗೂ 2009ರಲ್ಲಿ ಹರಿಸಲಾಗಿತ್ತು.

1993ರಲ್ಲಿ ಹಠಾತ್ತನೇ ಜಲಾಶಯದ ನೀರಿನ ಮಟ್ಟಕ್ಕಿಂತ 5 ಅಡಿ ನೀರು ಅಧಿಕವಾಗಿ ಬಂದು ಜಲಾಶಯದ ಅಸ್ತಿತ್ವಕ್ಕೆ ಸವಾಲು ಒಡ್ಡಿತ್ತು. ಆಗ ಜಲಾಶಯದ 33 ಗೇಟುಗಳಿಂದ ನದಿಗೆ 3.5 ಲಕ್ಷ ಕ್ಯುಸೆಕ್‌ ನೀರನ್ನು ಹರಿಸಲಾಗಿತ್ತು. ನದಿ ಪಾತ್ರದಲ್ಲಿ ಭೀಕರ ಪ್ರವಾಹ ಬಂದಿತ್ತು. ಈ ಸಂದರ್ಭದಲ್ಲಿ ಹಂಪಿಯ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಪ್ರವಾಹದ ನೀರು ನುಗ್ಗಿತ್ತು.

2009ರಲ್ಲಿ ಜಲಾಶಯದ ಗೇಟುಗಳಿಂದ ನದಿಗೆ 2.5 ಲಕ್ಷ ಕ್ಯುಸೆಕ್‌ ನೀರನ್ನು ಹರಿಸಲಾಗಿತ್ತು. ಆಗ ಮಂತ್ರಾಲಯದ ರಾಘವೇಂದ್ರ ಮಠವು ಜಲಾವೃತಗೊಂಡು, ಮಂತ್ರಾಲಯದ ಮಠಾಧೀಶರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತಂದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಬಾರಿಯು ಅಂತಹ ಪರಿಸ್ಥಿತಿ ಮರುಕಳುಹಿಸಬಹುದು ಎಂದು ನದಿ ಪಾತ್ರದ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.