ಸಾರಾಂಶ
ಹೊಸಪೇಟೆ : ನಗರದಲ್ಲಿ ನಡೆಯಲಿರುವ ಸರ್ಕಾರದ ಸಾಧನಾ ಸಮಾವೇಶಕ್ಕೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಮಿಸಲಿದ್ದಾರೆ.
ಈ ಸಮಾವೇಶಕ್ಕೆ 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಹೇಳಿದರು.
ನಗರದ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ವೇದಿಕೆ ನಿರ್ಮಾಣ ಕಾಮಗಾರಿ ಪರಿಶೀಲಿಸಿ ಬಳಿಕ ಮಾತನಾಡಿದ ಅವರು, ಮೇ 20ರಂದು ಹೊಸಪೇಟೆಯಲ್ಲಿ ನಡೆಯುವ ಸರ್ಕಾರದ ಸಾಧನಾ ಸಮಾವೇಶದಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ಸಮರ್ಪಣಾ ಸಮಾವೇಶ ಮಾಡಲಾಗುವುದು.
ರಾಜ್ಯದ ಹಟ್ಟಿ, ಹಾಡಿ, ತಾಂಡಾ, ಕ್ಯಾಂಪ್, ಕಾಲನಿ, ಮಜಿರೆಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು. ಸಮಾರಂಭದ ಸಕಲ ಸಿದ್ಧತೆಗೆ ತಯಾರಿ ನಡೆಸಲಾಗಿದೆ. ವಿಜಯನಗರ ಜಿಲ್ಲೆಯ ಮೇಲೆ ಸಿಎಂ ಸಿದ್ದರಾಮಯ್ಯರಿಗೆ ವಿಶೇಷ ಕಾಳಜಿ ಇದೆ. ಈ ಭಾಗದ ಎಲ್ಲಾ ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಲಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ವೇದಿಕೆ ಸೇರಿದಂತೆ ಆಗಮಿಸುವ ಜನತೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಸರ್ಕಾರದ ಸಾಧನಾ ಸಮಾವೇಶಕ್ಕೆ ಸಂಪುಟದ ಎಲ್ಲಾ ಸಚಿವರು, ಸಂಸದರು, ಶಾಸಕರು ಸೇರಿದಂತೆ ಅನೇಕ ಮುಖಂಡರು ಆಗಮಿಸುತ್ತಿದ್ದಾರೆ. ಜನರಿಗೆ ಭೋಜನದ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ ಎಂದರು.ಭಾರೀ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗುವುದು. ಈಗಾಗಲೇ ಪೊಲೀಸರು ಸೂಕ್ತ ಸ್ಥಳಗಳನ್ನು ಗುರುತಿಸಿದ್ದಾರೆ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್, ಎಸ್ಪಿ ಶ್ರೀಹರಿಬಾಬು ಮತ್ತಿತರರಿದ್ದರು.
ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಾಧನಾ ಸಮಾವೇಶದ ಪೂರ್ವಭಾವಿ ಸಭೆ ನಡೆಸಿದರು.
16ರಂದು ಹೊಸಪೇಟೆಗೆ ಸಿಎಂ ಸಿದ್ದರಾಮಯ್ಯ
ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶ ಮೇ 20ರಂದು ಹೊಸಪೇಟೆಯಲ್ಲಿ ನಡೆಯುತ್ತಿರುವ ಹಿನ್ನೆಲೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 16 ರಂದು ಹೊಸಪೇಟೆಗೆ ಆಗಮಿಸಲಿದ್ದಾರೆ.ಮೇ 16ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಹೆಚ್‌ಎಎಲ್‌ನ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಹೊರಟು ತೋರಣಗಲ್‌ನ ಜಿಂದಾಲ್‌ನ ಏರ್‌ಪೋರ್ಟ್ ಗೆ ಆಗಮಿಸಿ ಅಲ್ಲಿಂದ ವಾಹನದ ಮೂಲಕ ಹೊಸಪೇಟೆ ಬರಲಿದ್ದಾರೆ.
ಸಾಧನಾ ಸಮಾವೇಶದ ಕಾರ್ಯಕ್ರಮ ಆಯೋಜಿಸಿರುವ ಸ್ಥಳ ಪರಿಶೀಲನೆ ನಡೆಸಲಿದ್ದಾರೆ.ಎರಡು ಲಕ್ಷ ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಿದ್ದು, ಒಂದು ಲಕ್ಷ ಜನರಿಗೆ ಹಕ್ಕು ಪತ್ರ ನೀಡಲಿದ್ದಾರೆ. ಇನ್ನೂ ಸಿಎಂ ಸಿದ್ದರಾಮಯ್ಯ ಅವರ ಜೊತೆ ವಿಜಯನಗರ ಉಸ್ತುವಾರಿ ಸಚಿವ ಜಮೀರ್, ಶಿವರಾಜ್ ತಂಗಡಗಿ, ಸೇರಿದಂತೆ ಸಚಿವ ಸಂಪುಟದ ಹಲವು ಸಚಿವರು ಮುಖ್ಯಮಂತ್ರಿ ಅವರಿಗೆ ಸಾಥ್ ನೀಡಲಿದ್ದಾರೆ.