ಪಾಕ್‌ಗೆ ಕಾರವಾರ ನೌಕಾನೆಲೆ ಮಾಹಿತಿ ಕೊಟ್ಟ ಇಬ್ಬರ ಬಂಧನ

| Published : Feb 19 2025, 12:49 AM IST

ಪಾಕ್‌ಗೆ ಕಾರವಾರ ನೌಕಾನೆಲೆ ಮಾಹಿತಿ ಕೊಟ್ಟ ಇಬ್ಬರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಐಎನ್‌ಎಸ್ ಕದಂಬ ನೌಕಾನೆಲೆ ಮಾಹಿತಿಯನ್ನು ಹನಿಟ್ರ್ಯಾಪ್‌ಗೆ ಒಳಗಾಗಿ ಪಾಕಿಸ್ತಾನದ ಬೇಹುಗಾರರಿಗೆ ನೀಡಿರುವ ಆರೋಪದಡಿ ಅಂಕೋಲಾ ತಾಲೂಕಿನ ಹಳವಳ್ಳಿಯ ಅಕ್ಷಯ ನಾಯ್ಕ ಹಾಗೂ ಕಾರವಾರ ತಾಲೂಕಿನ ಮುದಗಾದ ವೇತನ್ ತಾಂಡೇಲ ಎಂಬಿಬ್ಬರನ್ನು ಮಂಗಳವಾರ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ ಹಾಗೂ ವಿಚಾರಣೆಗೆ ಎನ್ಐಎ ಕೇಂದ್ರ ಕಚೇರಿಗೆ ಕರೆದೊಯ್ದಿದ್ದಾರೆ.

- ಬಂಧಿತರಿಬ್ಬರೂ ನೌಕಾನೆಲೆ ಹೊರಗುತ್ತಿಗೆ ನೌಕರರು

- ಹನಿಟ್ರ್ಯಾಪ್‌ಗೆ ಒಳಗಾಗಿ ರಹಸ್ಯ ಮಾಹಿತಿ ನೀಡಿದ್ದರು----

- ಬಂಧಿತ ಅಕ್ಷಯ ನಾಯ್ಕ ಹಾಗೂ ವೇತನ್ ತಾಂಡೇಲ ಕಾರವಾರ ನೌಕಾನೆಲೆಯ ಹೊರಗುತ್ತಿಗೆ ನೌಕರರು

- ಹನಿಟ್ರ್ಯಾಪ್‌ ಮಾಡಿದ್ದ ಪಾಕ್ ಐಎಸ್ಐ ಮಹಿಳೆಯೊಬ್ಬಳು ಇವರಿಂದ ನೆಲೆಯ ರಹಸ್ಯ ಮಾಹಿತಿ ಪಡೆದಿದ್ದಳು

- ನೌಕಾನೆಲೆ ಕೆಲಸ, ಯುದ್ಧ ನೌಕೆ ಮಾಹಿತಿ, ಆಗಮನ-ನಿರ್ಗಮನ ಸಮಯ, ಭದ್ರತಾ ಮಾಹಿತಿ ಪಡೆದಿದ್ದಳು

- ಆಪಾದಿತರಿಬ್ಬರಿಗೂ 8 ತಿಂಗಳ ಕಾಲ ಮಾಸಿಕ ತಲಾ 5 ಸಾವಿರ ರು. ಹಣ ನೀಡಿ ಹನಿಟ್ರ್ಯಾಪ್‌ ಮಾಡಿದ್ದಳು

- 2024ರ ಆಗಸ್ಟ್‌ ತಿಂಗಳಲ್ಲಿ ಕಾರವಾರದಲ್ಲಿ ಇವರ ವಿಚಾರಣೆ ನಡೆಸಿದ್ದರು, ಈಗ ಮಾಹಿತಿ ಕಲೆಹಾಕಿ ಸೆರೆ

--

ಕನ್ನಡಪ್ರಭ ವಾರ್ತೆ ಕಾರವಾರ

ಇಲ್ಲಿನ ಐಎನ್‌ಎಸ್ ಕದಂಬ ನೌಕಾನೆಲೆ ಮಾಹಿತಿಯನ್ನು ಹನಿಟ್ರ್ಯಾಪ್‌ಗೆ ಒಳಗಾಗಿ ಪಾಕಿಸ್ತಾನದ ಬೇಹುಗಾರರಿಗೆ ನೀಡಿರುವ ಆರೋಪದಡಿ ಅಂಕೋಲಾ ತಾಲೂಕಿನ ಹಳವಳ್ಳಿಯ ಅಕ್ಷಯ ನಾಯ್ಕ ಹಾಗೂ ಕಾರವಾರ ತಾಲೂಕಿನ ಮುದಗಾದ ವೇತನ್ ತಾಂಡೇಲ ಎಂಬಿಬ್ಬರನ್ನು ಮಂಗಳವಾರ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ ಹಾಗೂ ವಿಚಾರಣೆಗೆ ಎನ್ಐಎ ಕೇಂದ್ರ ಕಚೇರಿಗೆ ಕರೆದೊಯ್ದಿದ್ದಾರೆ.

ಎನ್ಐಎ ಹೈದರಾಬಾದ್ ಘಟಕದ ಇಬ್ಬರು ಡಿವೈಎಸ್ಬಿ ಸೇರಿದಂತೆ ಆರು ಸಿಬ್ಬಂದಿಗಳಿದ್ದ ತಂಡ ಸೋಮವಾರ ಕಾರವಾರಕ್ಕೆ ಆಗಮಿಸಿ ರಾತ್ರಿವರೆಗೂ ನಗರ ಪೊಲೀಸ್ ಠಾಣೆಯಲ್ಲಿ ಬೀಡು ಬಿಟ್ಟಿತ್ತು. ಕಾರವಾರ ನಗರ ಠಾಣೆ ಹಾಗೂ ಅಂಕೋಲಾ ಪೊಲೀಸರ ಜತೆ ನಿರಂತರವಾಗಿ ಚರ್ಚೆ ನಡೆಸಿದ ಎನ್ಐಎ ಅಧಿಕಾರಿಗಳು ಪಕ್ಕಾ ಯೋಜನೆ ರೂಪಿಸಿದ್ದರು. ಸ್ಥಳೀಯ ಪೊಲೀಸರ ಸಹಾಯ ಪಡೆದು ಎರಡು ಪ್ರತ್ಯೇಕ ತಂಡದಲ್ಲಿ ಮಂಗಳವಾರ ನಸುಕಿನಲ್ಲಿ ಅಕ್ಷಯ ಹಾಗೂ ವೇತನ್ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ. ನಂತರ ವೇತನ್ ತಾಂಡೇಲನನ್ನು ಕಾರವಾರದಲ್ಲಿ ಮತ್ತು ಅಕ್ಷಯ ನಾಯ್ಕನನ್ನು ಅಂಕೋಲಾದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಳಿಕ ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಿದ ಅಧಿಕಾರಿಗಳು, ನಂತರ ಸ್ಥಳೀಯ ನ್ಯಾಯಾಲಯಕ್ಕೆ ಇಬ್ಬರನ್ನೂ ಹಾಜರುಪಡಿಸಿ ನ್ಯಾಯಾಲಯ ಅನುಮತಿ ಪಡೆದು ಕೇಂದ್ರ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.

ಪ್ರಕರಣದ ಹಿನ್ನೆಲೆ:

2024ರ ಆಗಸ್ಟ್‌ ತಿಂಗಳಲ್ಲಿ ಕಾರವಾರಕ್ಕೆ ಆಗಮಿಸಿದ್ದ ಎನ್‌ಐಎ ತಂಡ ಕದಂಬ ನೌಕಾನೆಲೆಯ ಆಂತರಿಕ ಮಾಹಿತಿ ಸೋರಿಕೆ ವಿಚಾರವಾಗಿ ಸ್ಥಳೀಯ ಅಕ್ಷಯ ನಾಯ್ಕ ಮತ್ತು ವೇತನ್‌ ತಾಂಡೇಲ ಸೇರಿದಂತೆ ಮೂರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನಂತರ ಬಿಡುಗಡೆ ಮಾಡಿತ್ತು.

ಈ ಶಂಕಿತ ಆರೋಪಿಗಳು ಹೊರಗುತ್ತಿಗೆ ಆಧಾರದಲ್ಲಿ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯ ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡು ಹನಿ ಟ್ರ್ಯಾಪ್ ಮಾಡಿ ನೌಕಾನೆಲೆಯ ಮಾಹಿತಿ ಕಲೆ ಹಾಕಲು ಬಳಸಿಕೊಂಡಿದ್ದ‍ಳು ಎನ್ನಲಾಗಿದೆ. ಆರೋಪಿತರು ನೌಕಾನೆಲೆಯಲ್ಲಿ ಕೆಲಸ ಮಾಡುವ ತಮ್ಮ ಪರಿಚಯಸ್ಥರ ಬಳಿ, ಸಂಬಂಧಿಕರ ಬಳಿ ನೌಕೆಗಳ ಒಳಗೊಂಡು ಒಳಗಿನ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದು ಈ ಮಹಿಳೆಗೆ ಸಂಪೂರ್ಣ ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ.

ಯಾವ ಮಾಹಿತಿ ಸೋರಿಕೆ?ಆರೋಪಿತರಿಂದ ಸೀಬರ್ಡ್‌ ನೌಕಾ ನೆಲೆಯಲ್ಲಿ ಆಗುತ್ತಿರುವ ಕೆಲಸ, ಯುದ್ಧ ನೌಕೆಗಳ ಮಾಹಿತಿ, ಆಗಮನ ಮತ್ತು ನಿರ್ಗಮನ ಸಮಯ, ಭದ್ರತೆ ಕುರಿಂತೆ ಮಾಹಿತಿಯನ್ನು ಮಹಿಳೆ ಪಡೆಯುತ್ತಿದ್ದಳೆಂದು ತಿಳಿದು ಬಂದಿದೆ. ಈ ಮಾಹಿತಿ ನೀಡಿದ್ದಕ್ಕೆ ಆರೋಪಿಗಳಿಬ್ಬರಿಗೂ 8 ತಿಂಗಳ ಕಾಲ ತಲಾ ₹5 ಸಾವಿರ ಹಣ ನೀಡಿದ್ದ ಬಗ್ಗೆ ಎನ್‌ಐಎ ತನಿಖೆ ವೇಳೆ ಬಹಿರಂಗಗೊಂಡಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿ ಅಕ್ಷಯ, ವೇತನ್ ಇಬ್ಬರನ್ನು ಈಗ ಬಂಧಿಸಿ ಕೇಂದ್ರ ಕಚೇರಿಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.