ಸಾರಾಂಶ
ಭಾನುವಾರ ಸಂಭವಿಸಿದ ಕಾಡಾನೆಗಳ ಸಾವಿಗೆ ಹೆಸ್ಕಾಂ ಹಾಗೂ ರೈತರು ಇಬ್ಬರನ್ನೂ ಹೊಣೆಗಾರನ್ನಾಗಿಸಿದೆ ಎಂದು ಶಿವಾನಂದ ಮಗದುಮ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಖಾನಾಪುರ
ವಿದ್ಯುತ್ ತಂತಿ ತುಳಿದು ಎರಡು ಕಾಡಾನೆಗಳು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ದೇವರಾಯಿ ಸಮೀಪದ ಹೊರವಲಯದಲ್ಲಿ ಭಾನುವಾರ ನಡೆದಿದೆ. ಸುಳ್ಳೇಗಾಳಿಯ ರೈತ ಗಣಪತಿ ಗುರವ ಅವರ ಜಮೀನಿನ ಬಳಿ ಭಾನುವಾರ ಮಧ್ಯಾಹ್ನ ಎರಡು ಕಾಡಾನೆಗಳ ಕಳೇಬರ ಪತ್ತೆಯಾಗಿವೆ. ಕಳೆದೆರಡು ದಿನಗಳಿಂದ ಆಹಾರ ಅರಸಿ ಬಂದಿದ್ದ ಎರಡು ಮಧ್ಯ ವಯಸ್ಕಿನ ಕಾಡಾನೆಗಳು ದೇವರಾಯಿ ಹಾಗೂ ಸುಳ್ಳೇಗಾಳಿ ವ್ಯಾಪ್ತಿಯ ಕೃಷಿ ಜಮೀನುಗಳಲ್ಲಿ ಕಾಣಿಸಿಕೊಂಡಿದ್ದವು. ಈ ಆನೆಗಳಿಗೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿವೆ ಎನ್ನಲಾಗಿದೆ.ಘಟನೆ ಹಿನ್ನೆಲೆ:
ಸುಳ್ಳೇಗಾಳಿ ಮತ್ತು ದೇವರಾಯಿ ಭಾಗದ ರೈತರು, ಆನೆಗಳು ಸೇರಿದಂತೆ ವನ್ಯ ಮೃಗಗಳ ದಾಳಿಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸೋಲಾರ್ ತಂತಿಬೇಲಿಗಳನ್ನು ಅಳವಡಿಸಿಕೊಂಡಿದ್ದಾರೆ. ಈ ತಂತಿಬೇಲಿಗಳಿಗೆ ಅಕ್ರಮವಾಗಿ ವಿದ್ಯುತ್ ಹರಿಬಿಡಲಾಗುತ್ತಿದ್ದು, ಇದರಿಂದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಳಿದ ಕಾಡಾನೆಗಳು ಸ್ಥಳದಲ್ಲೇ ಮತಪಟ್ಟಿವೆ ಎನ್ನಲಾಗಿದೆ.ರೈತ ಗಣಪತಿ ಗುರವ ಹಾಗೂ ಹೆಸ್ಕಾಂ ವಿರುದ್ಧ ನಾಗರಗಾಳಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೃತ ಆನೆಗಳ ಕಳೇಬರಗಳನ್ನು ಮರಣೋತ್ತರ ಪರೀಕ್ಷೆಯ ಬಳಿಕ ಇಲಾಖೆಯ ನಿಯಮಗಳ ಪ್ರಕಾರ ಅವುಗಳ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಮಗದುಮ್ ಪ್ರತಿಕ್ರಿಯಿಸಿ, ಖಾನಾಪುರ ತಾಲೂಕಿನ ಕಾನನದಂಚಿನ ಕೃಷಿ ಜಮೀನುಗಳ ಬಳಿ ಕಾಡಾನೆಗಳು ಬಂದು ಹೋಗುವ ಪರಿಪಾಠ ಮೊದಲಿನಿಂದಲೂ ಇದೆ. ಆದರೆ ಇದುವರೆಗೂ ತಾಲೂಕಿನಲ್ಲಿ ಸಂಚರಿಸುವ ಕಾಡಾನೆಗಳಿಗೆ ಯಾವುದೇ ಜೀವಭಯ ಇರಲಿಲ್ಲ. ಈಗ ಬೆಳೆ ರಕ್ಷಣೆಯ ಭರದಲ್ಲಿ ರೈತರು ಹೆಣೆದ ಜಾಲಕ್ಕೆ ಸಿಕ್ಕ ಎರಡು ಆನೆಗಳು ತಮ್ಮ ಜೀವ ತ್ಯಜಿಸಿವೆ. ಬೆಳೆ ಸಂರಕ್ಷಣೆಯ ನೆಪದಲ್ಲಿ ಎರಡು ಆನೆಗಳ ಸಾವಿಗೆ ಕಾರಣರಾದವರ ವಿರುದ್ಧ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.ಅರಣ್ಯ ಇಲಾಖೆ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದೆ. ಕೃಷಿ ಜಮೀನುಗಳಲ್ಲಿ ಅಕ್ರಮವಾಗಿ ಎಳೆದಿರುವ ತಂತಿಗಳನ್ನು ಪತ್ತೆ ಹಚ್ಚಿ ತೆರವುಗೊಳಿಸಬೇಕೆಂದು ಹೆಸ್ಕಾಂಗೆ ಪತ್ರ ಬರೆಯಲಾಗುವುದು. ಜೊತೆಗೆ ಇಲಾಖೆಯಿಂದಲೇ ಕಾಡಂಚಿನ ಭಾಗದ ರೈತರು ಅಕ್ರಮವಾಗಿ ತಮ್ಮ ಜಮೀನುಗಳಲ್ಲಿ ಅಳವಡಿಸಿರುವ ವಿದ್ಯುತ್ ತಂತಿಬೇಲಿಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ. ಭಾನುವಾರ ಸಂಭವಿಸಿದ ಕಾಡಾನೆಗಳ ಸಾವಿಗೆ ಹೆಸ್ಕಾಂ ಹಾಗೂ ರೈತರು ಇಬ್ಬರನ್ನೂ ಹೊಣೆಗಾರನ್ನಾಗಿಸಿದೆ ಎಂದು ಶಿವಾನಂದ ಮಗದುಮ್ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))