ಸರ್ಕಾರಕ್ಕೆ 2ರ ಸಂಭ್ರಮ : ಸಮರ್ಪಣೆ ಸಂಕಲ್ಪ‌ ಸಮಾವೇಶ

| N/A | Published : May 20 2025, 02:41 AM IST / Updated: May 20 2025, 05:18 AM IST

ಸಾರಾಂಶ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮೇ 20ರ ಮಂಗಳವಾರ ಎರಡು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ‌ ಮಂಗಳವಾರ ಬೃಹತ್‌ ‘ಸಮರ್ಪಣೆ ಸಂಕಲ್ಪ‌ ಸಮಾವೇಶ’ ಹಮ್ಮಿಕೊಳ್ಳಲಾಗಿದೆ.

 ಹೊಸಪೇಟೆ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಮೇ 20ರ ಮಂಗಳವಾರ ಎರಡು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲಿ‌ ಮಂಗಳವಾರ ಬೃಹತ್‌ ‘ಸಮರ್ಪಣೆ ಸಂಕಲ್ಪ‌ ಸಮಾವೇಶ’ ಹಮ್ಮಿಕೊಳ್ಳಲಾಗಿದೆ.

ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಪ್ರಿಯಾಂಕಾ ಗಾಂಧಿ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ, ವೇಣುಗೋಪಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಇಡೀ ಸಚಿವ ಸಂಪುಟದ ಸಚಿವರು, ಶಾಸಕರು, ಕಾಂಗ್ರೆಸ್‌ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

2 ವರ್ಷದ ಸಂಭ್ರಮಾಚರಣೆಯನ್ನು ಇನ್ನಷ್ಟು ಅರ್ಥಪೂರ್ಣ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಮಂಗಳವಾರದ ಕಾರ್ಯಕ್ರಮದ ವೇಳೆ ಕಂದಾಯ ಗ್ರಾಮಗಳನ್ನು ಘೋಷಣೆ ಮಾಡಿ, 1,11,111 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುತ್ತಿದೆ.

ಹಕ್ಕುಪತ್ರ ವಿತರಣೆ:ಬ್ರಿಟಿಷ್‌ ಕಾಲಾವಧಿಯಿಂದ ದಾಖಲೆ ಇಲ್ಲದೆ ಬದುಕುತ್ತಿರುವ ರಾಜ್ಯದ 31 ಜಿಲ್ಲೆಗಳ ತಾಂಡಾ, ಹಟ್ಟಿ, ಹಾಡಿ, ಕ್ಯಾಂಪ್, ಕಾಲನಿ, ಮಜಿರೆಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಸಮಾವೇಶದಲ್ಲಿ 1,11,111 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ರಾಜ್ಯ ಸರ್ಕಾರ ಯೋಜಿಸಿದ್ದು, ಸಮಾವೇಶದಲ್ಲಿ 50 ಜನರಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾಂಡಾ, ಹಟ್ಟಿ, ಹಾಡಿ, ತಾಂಡಾ, ಕ್ಯಾಂಪ್, ಕಾಲನಿ, ಮಜಿರೆಗಳಲ್ಲೂ ಸಂಭ್ರಮ ಮನೆ ಮಾಡಿದೆ.ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಮತ್ತಷ್ಟು ಪ್ರಚಾರಗೊಳಿಸುವುದು ಸಮಾವೇಶದ ಮೂಲ ಉದ್ದೇಶವಾಗಿದ್ದರೂ ಆರನೇ ಗ್ಯಾರಂಟಿ ಎನ್ನುವಂತೆ ‘ಭೂ ಗ್ಯಾರಂಟಿ’ ಎನ್ನುವ ಶೀರ್ಷಿಕೆಯಡಿ 1,11,111 ಭೂರಹಿತ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿರುವುದು ವಿಶೇಷ.

ಎರಡರ ಸಂಭ್ರಮ:

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಮಾವೇಶಕ್ಕಾಗಿ 200 ಅಡಿ ಅಗಲ, 70 ಅಡಿ ಉದ್ದದ ಭವ್ಯ ವೇದಿಕೆ ಸಿದ್ದಗೊಂಡಿದೆ. ಭಾರೀ ಬಿಸಿಲು ಇರುವುದರಿಂದ ನೆರಳಿನ ವ್ಯವಸ್ಥೆಯೊಂದಿಗೆ ಸುಸಜ್ಜಿತ ಜರ್ಮನ್‌ ಟೆಂಟ್‌ ನಿರ್ಮಾಣ ಮಾಡಲಾಗಿದೆ. ಈ ಭವ್ಯ ವೇದಿಕೆಯ ಅಕ್ಕಪಕ್ಕ ಹಾಗೂ ಹೊರಗಡೆ ಹಂಪಿ ಸ್ಮಾರಕಗಳ ಕಂಬ ಬಳಕೆ ಮಾಡಲಾಗಿದೆ.

ಸಮಾವೇಶಕ್ಕೆ ಕನಿಷ್ಠ 4 ಲಕ್ಷ ಜನರು ಬರುವ ನಿರೀಕ್ಷೆ ಇದ್ದು, 1,11,111 ಲಕ್ಷ ಫಲಾನುಭವಿಗಳು ಭಾಗವಹಿಸುತ್ತಾರೆ. ಸಮಾವೇಶಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 3,700 ಬಸ್ ಸೇರಿದಂತೆ 10 ಸಾವಿರಕ್ಕೂ ಅಧಿಕ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಬಳಿ 1.50 ಲಕ್ಷ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚುವರಿಯಾಗಿ 50 ಸಾವಿರ ಕುರ್ಚಿಗಳನ್ನು ತರಿಸಲಾಗುತ್ತಿದೆ. ಕ್ರೀಡಾಂಗಣದ ಅಕ್ಕಪಕ್ಕದ ರಸ್ತೆಯಲ್ಲೂ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗಿದೆ. ಜನರಿಗಾಗಿ 5 ಲಕ್ಷ ಪ್ಯಾಕೆಟ್ ನೀರು, 3 ಲಕ್ಷ ಪ್ಯಾಕೆಟ್ ಮಜ್ಜಿಗೆ, 2.50 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಪ್ರಧಾನ ವೇದಿಕೆಯಲ್ಲಿ 300 ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಎರಡು ಕಿರು ವೇದಿಕೆಗಳಿದ್ದು, ಒಂದರಲ್ಲಿ 50 ಜನ ಮಾಜಿ ಸಚಿವರಿಗೆ ವೇದಿಕೆ ಕಲ್ಪಿಸಲಾಗುತ್ತಿದೆ. ಇನ್ನೊಂದು ಕಿರು ವೇದಿಕೆಯಲ್ಲಿ ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ಪಕ್ಷದ ಪ್ರಮುಖ 50 ಜನ ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ.

ಹೈಲೈಟ್ಸ್‌:

- 200 ಅಡಿ ಅಗಲ, 70 ಅಡಿ ಉದ್ದ.: ಪ್ರಧಾನ ವೇದಿಕೆ.

- 1,50,000 ಲಕ್ಷ ಕುರ್ಚಿ ವ್ಯವಸ್ಥೆ.

- 5,00,000 ಲಕ್ಷ ಪ್ಯಾಕೆಟ್ ನೀರು.

- 3,00,000 ಲಕ್ಷ ಪ್ಯಾಕೆಟ್ ಮಜ್ಜಿಗೆ.

- 2,50,000 ಲಕ್ಷ ಜನರಿಗೆ ಊಟ-ತಿಂಡಿ ವ್ಯವಸ್ಥೆ.

- 1,11,111 - ಫಲಾನುಭವಿಗಳಿಗೆ ಕಂದಾಯ ಹಕ್ಕುಪತ್ರ ವಿತರಣೆ.

- 4,00,000- ಜನ ಆಗಮನ ನಿರೀಕ್ಷೆ.

- 10,000 - ವಾಹನಗಳ ವ್ಯವಸ್ಥೆ.

Read more Articles on