ಸಾರಾಂಶ
ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಮಂಗಳವಾರ (ಮೇ 20) ಎರಡು ವರ್ಷ ಪೂರೈಸಿ, ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಅಂಶಿ ಪ್ರಸನ್ನಕುಮಾರ್
ಮೈಸೂರು : ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಮಂಗಳವಾರ (ಮೇ 20) ಎರಡು ವರ್ಷ ಪೂರೈಸಿ, ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರಿನಿಂದ ಆರು ಬಾರಿ ಆಯ್ಕೆಯಾಗಿದ್ದ ಡಿ.ದೇವರಾಜ ಅರಸು ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದರು. ಮೊದಲ ಬಾರಿ ಪೂರ್ಣಾವಧಿ ಇದ್ದರು. ಎರಡನೇ ಬಾರಿ ಮೂರು ವರ್ಷ ಇದ್ದರು. ನಂತರ ಸ್ವಪಕ್ಷೀಯರೇ ಬಂಡಾಯವೆದ್ದು ಅಧಿಕಾರದಿಂದ ಕೆಳಕ್ಕಿಳಿಸಿದರು. ಆಗ ಆರ್.ಗುಂಡೂರಾವ್ ಮುಖ್ಯಮಂತ್ರಿಯಾದರು.
ಸಿದ್ದರಾಮಯ್ಯ ಅವರು ಅರಸರಂತೆಯೇ ಮೊದಲ ಅವಧಿಯಲ್ಲಿ ಐದು ವರ್ಷ (2013-2018) ಪೂರ್ಣಾವಧಿ ಆಡಳಿತ ನಡೆಸಿದರು. ಅರಸು ಅವರ ನಂತರ ಪೂರ್ಣಾವಧಿ ಆಡಳಿತ ನಡೆಸಿದ ಮೊದಲ ಸಿಎಂ ಎಂಬ ಹೆಗ್ಗಳಿಕೆ ಅವರದು. 2018ರಲ್ಲಿ ಎರಡನೇ ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಇದೀಗ ಎರಡು ವರ್ಷ ಪೂರೈಸಿದ್ದಾರೆ.
16 ಬಾರಿ ಬಜೆಟ್ ಮಂಡನೆಯ ದಾಖಲೆ:
ಸಿದ್ದರಾಮಯ್ಯ ಅವರು ಹಣಕಾಸು ಸಚಿವರು, ಹಣಕಾಸು ಖಾತೆಯೊಂದಿಗೆ ಉಪ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಿ 16 ಬಾರಿ ಬಜೆಟ್ ಮಂಡಿಸಿದ್ದಾರೆ. ಇದೊಂದು ದಾಖಲೆ. ರಾಮಕೃಷ್ಣ ಹೆಗಡೆ ಅವರು 13 ಬಾರಿ ಬಜೆಟ್ ಮಂಡಿಸಿದ್ದರು.
ಚಾಮರಾಜನಗರಕ್ಕೂ ಭೇಟಿ:
ಸಿಎಂ ಆದ ನಂತರ ಚಾಮರಾಜನಗರಕ್ಕೆ ಇಪ್ಪತ್ತು ಬಾರಿ ಭೇಟಿ ನೀಡಿದ್ದಾರೆ. ಆ ಮೂಲಕ ಅಲ್ಲಿಗೆ ಭೇಟಿ ನೀಡಿದ ಸಿಎಂ ಆರು ತಿಂಗಳೊಳಗೆ ಅಧಿಕಾರ ಕಳೆದುಕೊಳ್ಳವರು ಎಂಬ ಪ್ರತೀತಿಗೆ ಸೆಡ್ಡು ಹೊಡೆದಿದ್ದಾರೆ. ಹೀಗಾಗಿ ಈಗ ಪ್ರತೀತಿ ಠುಸ್ ಆಗಿದೆ.
ಅತಿ ಹೆಚ್ಚು ಬಾರಿ ಶಾಸಕ:
ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ವಿಧಾನಸಭೆಗೆ ಆಯ್ಕೆಯಾದವರು ಎಂಬ ದಾಖಲೆ ಕೂಡ ಸಿದ್ದರಾಮಯ್ಯ ಅವರ ಹೆಸರಿಗೆ ಸೇರಿದೆ. ಅವರು 9 ಬಾರಿಗೆ ವಿಧಾನಸಭೆಯಲ್ಲಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಿಂದ 1983, 1985, 1994, 2004, 2006 ರ ಉಪ ಚುನಾವಣೆ, ವರುಣದಿಂದ 2008, 2013, 2023, ಬಾದಾಮಿಯಿಂದ 2018 ರಲ್ಲಿ ಗೆದ್ದಿದ್ದಾರೆ.
ಚಾಮುಂಡೇಶ್ವರಿಯಲ್ಲಿ 1989 ರಲ್ಲಿ ಎಂ. ರಾಜಶೇಖರಮೂರ್ತಿ, 1999 ರಲ್ಲಿ ಎ.ಎಸ್. ಗುರುಸ್ವಾಮಿ ಹಾಗೂ 2018 ರಲ್ಲಿ ಜಿ.ಟಿ.ದೇವೇಗೌಡರ ಎದುರು ಸೋತಿದ್ದಾರೆ.
ಗುಂಡ್ಲುಪೇಟೆಯ ಕೆ.ಎಸ್. ನಾಗರತ್ನಮ್ಮ ಅವರು ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಡಿ. ದೇವರಾಜ ಅರಸು, ಬಿ. ರಾಚಯ್ಯ, ಎಂ. ರಾಜಶೇಖರಮೂರ್ತಿ, ಅಜೀಜ್ ಸೇಠ್, ಕೆ.ಪುಟ್ಟಸ್ವಾಮಿ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಪ್ರಸ್ತುತ ಟಿ.ನರಸೀಪುರದ ಡಾ.ಎಚ್.ಸಿ.ಮಹದೇವಪ್ಪ, ಪಿರಿಯಾಪಟ್ಟಣದ ಕೆ. ವೆಂಕಟೇಶ್, ನರಸಿಂಹರಾಜದ ತನ್ವೀರ್ ಸೇಠ್ ಆರನೇ ಬಾರಿ ವಿಧಾನಸಭೆಯಲ್ಲಿದ್ದಾರೆ.
ಡಿ.ದೇವರಾಜ ಅರಸು ಅವರು ಹುಣಸೂರು ಕ್ಷೇತ್ರವನ್ನು 1952 ರಿಂದ 1978 ರವರೆಗೆ ಒಂದು ಬಾರಿ ಅವಿರೋಧ ಆಯ್ಕೆ ಸೇರಿದಂತೆ ಆರು ಬಾರಿ ಪ್ರತಿನಿಧಿಸಿದ್ದರು. ಅವರು ಸತತ ಎರಡು ಬಾರಿ ಮುಖ್ಯಮಂತ್ರಿ ಆದರು.
ಸಿದ್ದರಾಮಯ್ಯ ಅವರು 2008ರಲ್ಲಿ ವರುಣದಿಂದ ಗೆದ್ದಾಗ ಒಂದು ವರ್ಷದ ನಂತರ ಪ್ರತಿಪಕ್ಷ ನಾಯಕ, 2013 ರಲ್ಲಿ ಎರಡನೇ ಬಾರಿ ಗೆದ್ದಾಗ ಮುಖ್ಯಮಂತ್ರಿಯಾದರು.
2018ರಲ್ಲಿ ಬಾದಾಮಿಯಿಂದ ಗೆದ್ದಾಗ 14 ತಿಂಗಳ ಪ್ರತಿಪಕ್ಷ ನಾಯಕರು. 2023 ರಲ್ಲಿ ವರುಣದಿಂದ ಮೂರನೇ ಬಾರಿ ಗೆದ್ದಾಗ ಎರಡನೇ ಬಾರಿ ಮುಖ್ಯಮಂಕ್ರಿಯಾಗಿದ್ದಾರೆ.
ಒಂದಲ್ಲ ಒಂದು ಅಧಿಕಾರ:
ಸಿದ್ದರಾಮಯ್ಯ ಅವರಿಗೆ 2004 ರಿಂದಲೂ ಒಂದಲ್ಲ ಒಂದು ಅಧಿಕಾರ ಸಿಕ್ಕಿದೆ. 2004 ರಲ್ಲಿ ಎರಡನೇ ಬಾರಿ ಡಿಸಿಎಂ, 2008 ರಲ್ಲಿ ಒಂದು ವರ್ಷದ ಬಳಿಕ ಪ್ರತಿಪಕ್ಷ ನಾಯಕ, 2013ರಲ್ಲಿ ಮುಖ್ಯಮಂತ್ರಿ. 2018ರಲ್ಲಿ 14 ತಿಂಗಳ ನಂತರ ಪ್ರತಿಪಕ್ಷ ನಾಯಕ, 2023ರಲ್ಲಿ ಎರಡನೇ ಬಾರಿ ಮುಖ್ಯಮಂತ್ರಿ.