ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಆವರಿಸಿ ಸುಮಾರು ೨೦ ಎಕರೆ ಪ್ರದೇಶದ ಕಬ್ಬಿನ ಬೆಳೆ ಸುಟ್ಟು ಭಸ್ಮವಾಗಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ತಾಲೂಕಿನ ನಾವಲಗಿ ಗ್ರಾಮದಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಆವರಿಸಿ ಸುಮಾರು ೨೦ ಎಕರೆ ಪ್ರದೇಶದ ಕಬ್ಬಿನ ಬೆಳೆ ಸುಟ್ಟು ಭಸ್ಮವಾಗಿದೆ.ಬಸಯ್ಯ ನಾವಲಗಿಮಠ ಹಾಗೂ ಮುಪ್ಪಯ್ಯ ಹಿರೇಮಠ, ಮಲ್ಲಿಕಾರ್ಜುನ ನಾವಲಗಿಮಠ, ರಾಚಪ್ಪ ವಾಲಿ ಅವರಿಗೆ ಸೇರಿದ ಕಬ್ಬು ಹಾನಿಯಾಗಿದ್ದು, ಬೆಳೆ ನಷ್ಟದಿಂದ ತೀವ್ರ ಕಂಗಾಲಾಗಿದ್ದಾರೆ. ತೋಟಗಳಲ್ಲಿನ ಕಬ್ಬಿನ ಬೆಳೆಗೆ ಏಕಾಏಕಿ ಬೆಂಕಿ ಆವರಿಸಿ, ನೋಡನೋಡುತ್ತಿದ್ದಂತೆಯೇ ಬೆಂಕಿ ಕೆನ್ನಾಲಿಗೆ ಇಡೀ ಪ್ರದೇಶಕ್ಕೆ ವ್ಯಾಪಿಸಿದೆ. ಬೆಂಕಿಯ ತೀವ್ರತೆಗೆ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ರೈತರ ಕಣ್ಣೆದುರೇ ತಿಂಗುಗಟ್ಟಲೆ ಬೆಳೆಸಿದ ಫಸಲು ನಾಶವಾಗಿದೆ. ಕಬ್ಬು ಬೆಳೆಯಲು ರೈತರು ಸಾಕಷ್ಟು ಹಣ ಸುರಿದು ಜೊತೆಗೆ ಹಗಲಿರುಳು ಶ್ರಮಿಸಿದ್ದರು. ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ವಿದ್ಯುತ್ ಅವಘಡ ದೊಡ್ಡ ಆಘಾತ ನೀಡಿದೆ. ಬೆಳೆ ಕೈಗೆ ಬರುವ ಹಂತದಲ್ಲಿಯೇ ಸಂಭವಿಸಿದ ಅನಾಹುತದಿಂದ ರೈತರ ಆರ್ಥಿಕ ಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ.ಒಂದೆಡೆ ಕೃಷಿ ವೆಚ್ಚ ಹೆಚ್ಚಳ, ಮತ್ತೊಂದೆಡೆ ಪ್ರಕೃತಿ ಹಾಗೂ ವಿದ್ಯುತ್ ಅವಘಡಗಳ ಆತಂಕ ರೈತರನ್ನು ಕಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲಿಸಿ ಸಮಗ್ರ ವರದಿ ಸಿದ್ಧಪಡಿಸಿ ಬೆಳೆ ಹಾನಿಗೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಇಂತಹ ದುರ್ಘಟನೆಗಳು ಮರುಕಳಿಸದಂತೆ ವಿದ್ಯುತ್ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.