ಸಾರಾಂಶ
ಧಾರವಾಡ:
ಕಾನೂನು ವೃತ್ತಿಪರರಿಗೆ ಜಾಗತಿಕವಾಗಿ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಭಾರತದಲ್ಲಿ ಕಾನೂನು ವೃತ್ತಿಯು ವಾರ್ಷಿಕವಾಗಿ ಶೇ.20ರ ದರದಲ್ಲಿ ಬೆಳವಣಿಗೆ ಕಾಣುತ್ತಿದೆ ಎಂದು ಆಂಧ್ರಪ್ರದೇಶದ ರಾಜ್ಯಪಾಲ ಮತ್ತು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಹೇಳಿದರು.ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಬಳಿಕ, ಕಾನೂನು ವೃತ್ತಿಯು ಏಕದಿನ ಅಥವಾ ಟಿ20 ಪಂದ್ಯದಂತಲ್ಲ. ಇದು ದೀರ್ಘ, ಒಂದೇ ಇನ್ನಿಂಗ್ಸ್‌ನ ಟೆಸ್ಟ್ ಪಂದ್ಯ. ಹೀಗಾಗಿ ಯುವ ವಕೀಲರು ತಮ್ಮ ವೃತ್ತಿಯಲ್ಲಿ ತುಂಬ ತಾಳ್ಮೆಯಿಂದಿರಬೇಕು ಎಂದು ಸಲಹೆ ನೀಡಿದರು.
ಆಧುನಿಕ ಸಂದರ್ಭದಲ್ಲಿ ಹೊಸ ಸವಾಲುಗಳು ವಕೀಲರಿಗೂ ಎದುರಾಗುತ್ತಿದ್ದು, ಯಶಸ್ವಿ ವಕೀಲನಾಗಲು ಹೆಚ್ಚು ಸಂವಹನ ಕೌಶಲ್ಯಗಳು, ವಿಶೇಷ ವಕಾಲತ್ತಿನ ಮಾತುಗಾರಿಕೆ ಮತ್ತು ದೋಷರಹಿತ ಕರಡು ರಚನೆ ಸಾಮರ್ಥ್ಯ ಹೊಂದಬೇಕು ಎಂದರು.ಘಟಿಕೋತ್ಸವ ಭಾಷಣ ಮಾಡಿದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಮತ್ತು ಕರ್ನಾಟಕ ರಾಜ್ಯ ಗಡಿ ಮತ್ತು ನದಿ ಸಂರಕ್ಷಣಾ ಆಯೋಗದ ಅಧ್ಯಕ್ಷ ಶಿವರಾಜ್ ಪಾಟೀಲ್, ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಪ್ರಭಾವ ಮತ್ತು ಆ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾನೂನು ಸಂಶೋಧನೆ, ಒಪ್ಪಂದ ಕರಡು ರಚನೆ, ದಾಖಲೆ ನಿರ್ವಹಣೆ ಮತ್ತು ತೀರ್ಪು ಅನುವಾದದಲ್ಲಿ ಕೃತಕ ಬುದ್ಧಿಮತ್ತೆಯ ತ್ವರಿತ ಅಳವಡಿಕೆಯು ವಿಪುಲ ಅವಕಾಶ ಮತ್ತು ವೃತ್ತಿ ಸವಾಲುಗಳನ್ನು ನಿಭಾಯಿಸುತ್ತದೆ. ತಂತ್ರಜ್ಞಾನವು ನ್ಯಾಯದ ಸಾಧನವಾಗಿ ಉಳಿಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಈ ಪೀಳಿಗೆಯ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಗೈರು ಹಾಜರಿಯಲ್ಲಿ ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ಹಿರಿಯ ವಕೀಲ ವಿ. ಸುಧೀಶ್ ಪೈ ಅವರಿಗೆ ಕಾನೂನು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಮೂರು ವರ್ಷ ಮತ್ತು ಐದು ವರ್ಷಗಳ ಕಾನೂನು ಕೋರ್ಸಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಟ್ಟು 28 ಚಿನ್ನದ ಪದಕ ಪ್ರದಾನ ಮಾಡಲಾಯಿತು. 2022-23ನೇ ಸಾಲಿಗೆ, ಬೆಂಗಳೂರಿನ ಗಣೇಶ್ ಕೆ. ಮೂರು ವರ್ಷಗಳ ಎಲ್‌ಎಲ್‌ಬಿ ಕಾರ್ಯಕ್ರಮದಲ್ಲಿ ಚಿನ್ನದ ಪದಕ ಪಡೆದರು, ಬೆಂಗಳೂರಿನ ಮಾನ್ಯ ಆನಂದ್ ಐದು ವರ್ಷಗಳ ಬಿಎ ಎಲ್‌ಎಲ್‌ಬಿ ಕಾರ್ಯಕ್ರಮದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದರು.ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಕಾನೂನು ಸಚಿವ ಎಚ್.ಕೆ. ಪಾಟೀಲ್ ಮತ್ತು ಕಾನೂನು ವಿವಿ ಉಪಕುಲಪತಿ ಡಾ.ಸಿ. ಬಸವರಾಜು ಪದಕ ಮತ್ತು ಪ್ರಮಾಣಪತ್ರ ಪ್ರದಾನ ಮಾಡಿದರು.
ದೀರ್ಘ ಕಾರ್ಯಕ್ರಮ..ಕೃಷಿ ವಿವಿ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಿಗದಿತ ಸಮಯಕ್ಕೆ ಘಟಿಕೋತ್ಸವ ಆರಂಭವಾಯಿತು. ಆದರೆ, ಕಾರ್ಯಕ್ರಮ ದೀರ್ಘವಾದ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅಸಮಧಾನಗೊಂಡರು. ಸಾಮಾನ್ಯವಾಗಿ ಘಟಿಕೋತ್ಸವಗಳು 75 ನಿಮಿಷಗಳಲ್ಲಿ ಮುಗಿಯುತ್ತವೆ. ಆದರೆ, ಕಾರ್ಯಕ್ರಮ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ನಡೆದಿದೆ. ಸಾಂಕೇತಿಕವಾಗಿ ಕೇವಲ 20ರಿಂದ 25 ಅಭ್ಯರ್ಥಿಗಳು ವೇದಿಕೆಯಲ್ಲಿ ಪ್ರಮಾಣಪತ್ರ ಪಡೆಯಬೇಕು. ಆದರೆ, ಈಗ 200 ತಲುಪಿದೆ ಎಂದು ನಗುತ್ತಲೇ ವಿವಿ ಕುಲಪತಿಗಳಿಗೆ ಮುಂದಿನ ಘಟಿಕೋತ್ಸವದ ಸಮಯ ತಗ್ಗಿಸಲು ಸೂಚಿಸಿದರು.
;Resize=(128,128))
;Resize=(128,128))