ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಬಿಎಂಪಿಗೆ ಸೇರ್ಪಡೆಗೊಂಡಿರುವ 110 ಹಳ್ಳಿಗಳು ಸೇರಿದಂತೆ ಪಾಲಿಕೆಯ ಹೊರವಲಯದಲ್ಲಿ ಮುಂದಿನ ಒಂದು ವರ್ಷದಲ್ಲಿ 20 ಹೊಸ ಉದ್ಯಾನವನ ನಿರ್ಮಾಣಕ್ಕೆ ಪಾಲಿಕೆಯ ತೋಟಗಾರಿಕೆ ವಿಭಾಗ ಮುಂದಾಗಿದೆ.ಬಿಬಿಎಂಪಿ ವ್ಯಾಪ್ತಿಗೆ 2006-07ರಲ್ಲಿ ಸೇರ್ಪಡೆಗೊಂಡ 110 ಹಳ್ಳಿಗಳಲ್ಲಿ ಇರುವ ಖಾಲಿ ಜಾಗದಲ್ಲಿ ಬಿಬಿಎಂಪಿಯಿಂದ ಉದ್ಯಾನ ವನ ನಿರ್ಮಾಣದ ಮೂಲಕ ಹಸಿರೀಕರಣ ಹೆಚ್ಚಿಸಲು ನಿರ್ಧರಿಸಲಾಗಿದೆ. 20 ಹೊಸ ಉದ್ಯಾನವನಗಳ ನಿರ್ಮಾಣಕ್ಕೆ 2024-25ನೇ ಸಾಲಿನಲ್ಲಿ ಅನುದಾನ ನೀಡುವಂತೆ ಬಿಬಿಎಂಪಿ ತೋಟಗಾರಿಕೆ ವಿಭಾಗ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಹಣಕಾಸು ವಿಭಾಗಕ್ಕೆ ಮನವಿ ಮಾಡಿದೆ.
ನಗರದ ಕೇಂದ್ರ ವಲಯಗಳಾದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ ಈಗಾಗಲೇ ಒಂದು ಸಾವಿರಕ್ಕೂ ಅಧಿಕ ಉದ್ಯಾನವನಗಳಿವೆ. ಅಲ್ಲದೇ ರಸ್ತೆ ವಿಭಜಕ ಹಾಗೂ ಜಂಕ್ಷನ್‌ಗಳಲ್ಲಿ ಸಾಕಷ್ಟು ಕಿರು ಉದ್ಯಾನವನಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಬಿಬಿಎಂಪಿಗೆ ಸೇರ್ಪಡೆಗೊಂಡ 110 ಹಳ್ಳಿ ಸೇರಿದಂತೆ ಬೊಮ್ಮನಹಳ್ಳಿ ವಲಯ, ಆರ್‌ಆರ್‌ನಗರ, ದಾಸರಗಳ್ಳಿ, ಯಲಹಂಕ ಹಾಗೂ ಮಹದೇವಪುರ ವಲಯದ ವ್ಯಾಪ್ತಿಯಲ್ಲಿ ಉದ್ಯಾನವನಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ, ಬಿಬಿಎಂಪಿ ಜಾಗದಲ್ಲಿ ಉದ್ಯಾನವನ ನಿರ್ಮಿಸಲು ನಿರ್ಧರಿಸಲಾಗಿದೆ.ಎಷ್ಟು ಎಕರೆ ಪ್ರದೇಶದಲ್ಲಿ ಉದ್ಯಾನವನ ನಿರ್ಮಾಣ ಮಾಡಬೇಕೆಂಬುದನ್ನು 2024-25ನೇ ಸಾಲಿನಲ್ಲಿ ಸರ್ಕಾರ ಮತ್ತು ಬಿಬಿಎಂಪಿಯಿಂದ ಮೀಸಲಿಡುವ ಅನುದಾನದ ಮೇಲೆ ನಿರ್ಧರಿಸಲಾಗುವುದು. ಮುಖ್ಯವಾಗಿ ಒತ್ತುವರಿ ತೆರವುಗೊಳಿಸಿ ಬಿಬಿಎಂಪಿಯ ವಶದಲ್ಲಿ ಇರುವ ಜಾಗ ಹಾಗೂ ಯಾವುದೇ ಕಾನೂನು ತೊಡಕು ಇಲ್ಲದ ಪಾಲಿಕೆ ಜಾಗದಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗುವುದು. ಇದರಿಂದ ಬಿಬಿಎಂಪಿಯ ಜಾಗವೂ ಸುರಕ್ಷಿತವಾಗಿರಲಿದೆ. ಜತೆಗೆ ಸಾರ್ವಜನಿಕರಿಗೂ ಅನುಕೂಲವಾಗಲಿದೆ ಮತ್ತು ಉತ್ತಮ ಪರಿಸರ ನಿರ್ಮಾಣವಾಗಲಿದೆ ಎಂಬುದು ಬಿಬಿಎಂಪಿ ತೋಟಗಾರಿಕೆ ವಿಭಾಗದ ಅಧಿಕಾರಿಗಳ ಅಭಿಪ್ರಾಯವಾಗಿದೆ.ಉದ್ಯಾನವನದಲ್ಲಿ ಬೇವು, ಬನ್ನಿ ಮರ
ನಗರದಲ್ಲಿರುವ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಬಳಕೆ ಆಗುವ ಮರಗಳನ್ನು ಪ್ರಸಕ್ತ 2024-25ನೇ ಸಾಲಿನಲ್ಲಿ ನೆಟ್ಟು ಬೆಳೆಸಲು ಪಾಲಿಕೆ ಅರಣ್ಯ ವಿಭಾಗ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಬೇವು, ಬನ್ನಿ ಹಾಗೂ ಬೇಲದ ಹಣ್ಣು ಸೇರಿದಂತೆ ಮೊದಲಾದ ಗಿಡಗಳನ್ನು ನೆಟ್ಟು ಬೆಳೆಸುವುದಾಗಿ ಬಿಬಿಎಂಪಿ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಾಮಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.