ಧಾರವಾಡ ಜಿಲ್ಲೆಯಲ್ಲಿ ಒಂದೇ ಒಂದು ನದಿ ಹರಿದಿಲ್ಲ. ಡ್ಯಾಂ ಇಲ್ಲ. ಆದರೂ ಪ್ರತಿ ಮಳೆಗಾಲದಲ್ಲಿ ಜಿಲ್ಲೆಯ ನವಲಗುಂದ, ಧಾರವಾಡ ಹಾಗೂ ಕುಂದಗೋಳ ತಾಲೂಕುಗಳ 34ಕ್ಕೂ ಅಧಿಕ ಹಳ್ಳಿಗಳನ್ನು ಬೆಣ್ಣಿಹಳ್ಳ-ತುಪರಿಹಳ್ಳಗಳು ಅಕ್ಷರಶಃ ನಲುಗಿಸುತ್ತವೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ:ಧಾರವಾಡ, ಗದಗ ಜಿಲ್ಲೆಗಳ ಕೆಲ ತಾಲೂಕುಗಳನ್ನು ಮಳೆಗಾಲದಲ್ಲಿ ನಲುಗಿಸುವ ಬೆಣ್ಣಿಹಳ್ಳ ಪ್ರವಾಹ ಶಾಶ್ವತ ತಡೆಗೆ ಇದೇ ಮೊದಲ ಬಾರಿಗೆ ₹ 200 ಕೋಟಿ ಅನುದಾನವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿಡುಗಡೆ ಮಾಡಿದೆ.
ಕೆಲಸ ಶುರುವಾದರೆ ಧಾರವಾಡ, ಗದಗ ಜಿಲ್ಲೆಗಳ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಅನುಕೂಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.ಧಾರವಾಡ ಜಿಲ್ಲೆಯಲ್ಲಿ ಒಂದೇ ಒಂದು ನದಿ ಹರಿದಿಲ್ಲ. ಡ್ಯಾಂ ಇಲ್ಲ. ಆದರೂ ಪ್ರತಿ ಮಳೆಗಾಲದಲ್ಲಿ ಜಿಲ್ಲೆಯ ನವಲಗುಂದ, ಧಾರವಾಡ ಹಾಗೂ ಕುಂದಗೋಳ ತಾಲೂಕುಗಳ 34ಕ್ಕೂ ಅಧಿಕ ಹಳ್ಳಿಗಳನ್ನು ಬೆಣ್ಣಿಹಳ್ಳ-ತುಪರಿಹಳ್ಳಗಳು ಅಕ್ಷರಶಃ ನಲುಗಿಸುತ್ತವೆ. ಬೇಸಿಗೆಯಲ್ಲಿ ಆಟದ ಮೈದಾನದಂತೆ ಗೋಚರಿಸುವ ಈ ಬೆಣ್ಣಿಹಳ್ಳ-ತುಪರಿಹಳ್ಳಗಳು ಮಳೆಗಾಲದಲ್ಲಿ ಮಾತ್ರ ಯಾವ ನದಿಗೂ ಕಮ್ಮಿಯಿಲ್ಲದಂತೆ ಉಗ್ರಾವತಾರ ತಾಳುತ್ತವೆ.
ಹತ್ತಾರು ಹಳ್ಳಿಗಳಿಗೆ ನೀರು ನುಗ್ಗುತ್ತವೆ. ಹಲವು ರೈತರು, ಸಾರ್ವಜನಿಕರು ಹಳ್ಳ ದಾಟಲು ಆಗದೇ ಪ್ರವಾಹದಲ್ಲಿ ಸಿಲುಕುತ್ತಾರೆ. ಅವರ ರಕ್ಷಣೆಗೆ ರಾತ್ರಿಯೆಲ್ಲ ಕಾರ್ಯಾಚರಣೆ ನಡೆಸಲಾಗುತ್ತದೆ. ಇದು ಒಂದು ವರ್ಷದ ಕಥೆಯಲ್ಲ. ಪ್ರತಿವರ್ಷ ಇಂಥ ಕಥೆಗಳ ಸಾಲು ಸಾಲು ಬೆಣ್ಣಿಹಳ್ಳದ ದಂಡೆಯಲ್ಲಿ ಸಿಗುತ್ತವೆ.ಏಳು ಗ್ರಾಮಗಳನ್ನು ಸ್ಥಳಾಂತರ ಮಾಡಲಾಗಿದೆ. ಆದರೂ ಪ್ರವಾಹಕ್ಕೆ ಶಾಶ್ವತ ತಡೆ ಹಾಕಲು ಮಾತ್ರ ಸಾಧ್ಯವಾಗಿಲ್ಲ. ಹಾಗಂತ ಆಳಿದ ಸರ್ಕಾರಗಳು ಏನೂ ಮಾಡಿಯೇ ಇಲ್ಲ ಅಂತೇನೂ ಇಲ್ಲ. ಪ್ರವಾಹ ತಡೆಯಲು ಎಲ್ಲ ಸರ್ಕಾರಗಳು ಆಗಾಗ ಅಷ್ಟಿಷ್ಟು ಅನುದಾನ ಬಿಡುಗಡೆ ಮಾಡುತ್ತಿವೆ. ತುಪರಿಹಳ್ಳ ಶಾಶ್ವತ ಪ್ರವಾಹ ತಡೆಗೆ ₹ 314 ಕೋಟಿ ಯೋಜನೆ ಜಾರಿಗೊಂಡಿದ್ದು, ಹಿಂದೆ ಬೊಮ್ಮಾಯಿ ಸರ್ಕಾರ ₹ 152 ಕೋಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಕೆಲಸ ಸಾಗುತ್ತಿದೆ.
ತುಪ್ಪರಿಹಳ್ಳಕ್ಕೆ ಹೋಲಿಸಿದರೆ ಬೆಣ್ಣಿಹಳ್ಳದ ಪ್ರಮಾಣ ದೊಡ್ಡದು. ಹತ್ತಾರು ಉಪಹಳ್ಳಗಳು ಇದರಲ್ಲಿ ಸೇರುತ್ತವೆ. ಇದಕ್ಕೆ ₹ 1612 ಕೋಟಿ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮವೂ ಸಿದ್ಧಪಡಿಸಿದೆ. ಯೋಜನೆ ಸಿದ್ಧಪಡಿಸಿದ್ದು ಬಿಜೆಪಿ ಸರ್ಕಾರ. ಆದರೆ ಅದಕ್ಕೆ ಮೊದಲ ಹಂತವಾಗಿ ₹ 200 ಕೋಟಿ ಬಿಡುಗಡೆ ಮಾಡಿರುವುದು ಸಿದ್ದರಾಮಯ್ಯ ಸರ್ಕಾರ. ಇದು ಇನ್ನೂ ಪ್ರಾರಂಭವಾಗಿಲ್ಲ. ಟೆಂಡರ್ ಪ್ರಕ್ರಿಯೆಯಲ್ಲಿದೆ. ಈ ಕೆಲಸ ಶುರುವಾದರೆ ಬರೀ ಧಾರವಾಡ ಅಷ್ಟೇ ಅಲ್ಲ. ಗದಗ ಜಿಲ್ಲೆಯ ನರಗುಂದ ಸೇರಿದಂತೆ ವಿವಿಧ ತಾಲೂಕುಗಳ ಹಳ್ಳಿಗಳಲ್ಲಿನ ಪ್ರವಾಹವನ್ನೂ ತಡೆದಂತಾಗುತ್ತದೆ. ಪ್ರತಿವರ್ಷ ಪ್ರವಾಹ ಎದುರಿಸುವ ಜನತೆ ನೆಮ್ಮದಿಯ ನಿಟ್ಟಿಸಿರು ಬಿಟ್ಟಂತಾಗುತ್ತದೆ. ಐಐಟಿಗೆ 470 ಎಕರೆ ಜಮೀನು!ಧಾರವಾಡ ಐಐಟಿಗೆ 2013-18ರ ವರೆಗಿನ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ 470 ಎಕರೆ ಜಮೀನನ್ನು ಸಿದ್ದರಾಮಯ್ಯ ಸರ್ಕಾರ ನೀಡಿತ್ತು. 2016ಕ್ಕೆ ಐಐಟಿಯನ್ನು ತಾತ್ಕಾಲಿಕವಾಗಿ ವಾಲ್ಮಿ ಕಟ್ಟಡದಲ್ಲಿ ಶುರು ಮಾಡಲಾಯಿತು. 2017ಕ್ಕೆ ಸಿದ್ದರಾಮಯ್ಯ ಸರ್ಕಾರ ಜಮೀನು ನೀಡಿದ್ದು ಐಐಟಿ ಕಟ್ಟಡ ನಿರ್ಮಾಣವಾಗಿ 2023ರಲ್ಲಿ ಉದ್ಘಾಟನೆಗೊಂಡಿತು.
ಕಳ್ಳಬಟ್ಟಿ ತಯಾರಕರು ಎಂಬ ಹಣೆಪಟ್ಟಿ ಕಳಚಿದ ಅರಸು ಕಾಯ್ದೆ!ಕಳ್ಳಬಟ್ಟಿ ತಯಾರಿಸುವವರು ಎಂಬ ಹಣೆಪಟ್ಟಿ ಕಳಚಿದ ಮಹಾನ್ ವ್ಯಕ್ತಿ ದಿ. ದೇವರಾಜ ಅರಸು. ಅವರ ಭೂ ಸುಧಾರಣೆ ಕಾಯ್ದೆಯಿಂದ ಗ್ರಾಮದ ಪರಿಸ್ಥಿತಿಯನ್ನೇ ಬದಲಾಯಿತು!ಇದು ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿಯಲ್ಲಿನ ರೈತನೊಬ್ಬ ನುಡಿಯುವ ಮಾತು. ಅಂದು ಕಳ್ಳಬಟ್ಟಿ ತಯಾರಕರಲ್ಲಿ ಹಲವರು ಈಗ ಕೃಷಿಕರಾಗಿ ಹೊರಹೊಮ್ಮಿದ್ದಾರೆ. ಅದಕ್ಕೆಲ್ಲ ಕಾರಣ ದೇವರಾಜ ಅರಸು ಅವರ ಭೂ ಸುಧಾರಣೆ ಕಾಯ್ದೆ.
ಏನಿದು ಕಾಯ್ದೆ?:ಹುಬ್ಬಳ್ಳಿಯ ಸೆಟ್ಲ್‌ಮೆಂಟ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ? ಕಳ್ಳರು-ಕಾಕರು, ದರೋಡೆಕೋರರನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ಬ್ರಿಟಿಷ್ ಸರ್ಕಾರ ಒಂದೆಡೆ ಅವರನ್ನು ಕೂಡಿಹಾಕುತ್ತಿದ್ದ ಸ್ಥಳವೇ ಸೆಟ್ಲ್‌ಮೆಂಟ್. ಒಂದು ರೀತಿಯಲ್ಲಿ ಬಯಲು ಜೈಲು ಇದು.ಇಂಥ ಸೆಟ್ಲ್‌ಮೆಂಟ್ ಏರಿಯಾಗಳು ದೇಶದಲ್ಲಿ ಕೆಲವೇ ಕೆಲವು ಇವೆ. ಅವುಗಳಲ್ಲಿ ಹುಬ್ಬಳ್ಳಿಯ ಸೆಟ್ಲ್‌ಮೆಂಟ್ ಕೂಡ ಒಂದು. ಇಲ್ಲಿನ ಕೆಲವರ ಗುಂಪು ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿ ಎಂಬ ಪುಟ್ಟ ಗ್ರಾಮಕ್ಕೆ ಹೋಗಿ ನೆಲೆಸಿತ್ತು. ಅಲ್ಲಿಗೆ ಹೋಗಿ ಪಾಳು ಬಿದ್ದ ಭೂಮಿಯಲ್ಲೇ ಗುಡಿಸಲು ಕಟ್ಟಿಕೊಂಡು ಎದುರಿಗಿದ್ದ ಜಮೀನನಲ್ಲಿ ಉಳುಮೆ ಮಾಡುತ್ತಾ, ಆಗಾಗ ಕಳ್ಳಬಟ್ಟಿ ಇಳಿಸುತ್ತಾ ಜೀವನ ಸಾಗಿಸುತ್ತಿತ್ತು.ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾದ ಮೇಲೆ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿದರು. ಇದರನ್ವಯ ಯಾರು ಉಳುಮೆ ಮಾಡುತ್ತಾರೋ ಅವರೇ ಭೂ ಒಡೆಯ ಎಂಬುದಾಗಿತ್ತು. ಅಷ್ಟು ದಿನಗಳ ಕಾಲ ಎದುರಿಗೆ ಕಂಡ ಜಮೀನಿನಲ್ಲೇ ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಸೆಟ್ಲ್‌ಮೆಂಟ್‌ನಿಂದ ಬಂದು ಬೆಳ್ಳಿಗಟ್ಟಿಯಲ್ಲಿ ನೆಲೆ ಕಂಡುಕೊಂಡಿದ್ದ ಜನತೆಯ ಮೊಗದಲ್ಲಿ ಮಂದಹಾಸ ಮೂಡಲಾರಂಭಿಸಿತು. ಬಳಿಕ ಕೋರ್ಟ್‌ಗೆ ಹೋಗಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಸಾಕಷ್ಟು ಹೋರಾಟ ನಡೆಸಿದರು. ಇದೀಗ ಹಲವರ ಹೆಸರಲ್ಲಿ ಭೂಮಿ ಇದೆ. ಅಲ್ಲೇ ಇವರು ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಕಳ್ಳಬಟ್ಟಿ ಸಾರಾಯಿ ಮಾಡುವುದನ್ನು ಕೈಬಿಟ್ಟಿದ್ದಾರೆ. ಸಾಕಷ್ಟು ಜನ ಓದಿ ಬೇರೆ ಬೇರೆ ಉದ್ಯೋಗ ಕಂಡು ಕೊಂಡಿದ್ದಾರೆ. ದೊಡ್ಡ ದೊಡ್ಡ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ.
ಹೀಗೆ ಕಳ್ಳಬಟ್ಟಿ ಕಳಂಕಿತರು ಎಂಬ ಹಣೆಪಟ್ಟಿಯಿಂದ ಹೊರತಂದಿದ್ದು ದೇವರಾಜ ಅರಸು ಅವರ ಭೂ ಸುಧಾರಣೆ ಕಾಯ್ದೆಯಿಂದ ಎಂಬುದು ಸ್ಪಷ್ಟ.