ಸಾರಿಗೆ ವ್ಯವಸ್ಥೆ ಬಲಗೊಳಿಸಲು 2000 ಬಸ್‌ ಖರೀದಿ

| Published : Apr 09 2025, 12:32 AM IST

ಸಾರಾಂಶ

ಅಂಜನಾದ್ರಿಗೆ ಹಿಂದಿನ ಸರ್ಕಾರ ₹ 19 ಕೋಟಿ ಅನುದಾನ ನೀಡಿತ್ತು. ನಮ್ಮ ಸರ್ಕಾರ ₹ 100 ಕೋಟಿ ನೀಡಿದೆ. ಪ್ರವಾಸಿ ಮಂದಿರ, ಶಾಫಿಂಗ್ ಕಾಂಪ್ಲೆಕ್ಸ್, ಪ್ರದಕ್ಷಿಣಾ ಪಥ, ಕುಡಿಯುವ ನೀರಿನ ವ್ಯವಸ್ಥೆ ಕಲ್ಲಿಸುವ ಮೂಲಕ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು.

ಕೊಪ್ಪಳ:

ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು 2000 ಬಸ್‌ ಖರೀದಿಸಲಾಗುತ್ತಿದ್ದು, ಅದರಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 600ರಿಂದ 700 ಬಸ್‌ ಕೊಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಯಲಬುರ್ಗಾ ತಾಲೂಕಿನ ಬೇವೂರಿನಲ್ಲಿ ಸೋಮವಾರ ನೂತನ ಬಸ್ ನಿಲ್ದಾಣದ ಶಂಕುಸ್ಥಾಪನೆ ಹಾಗೂ ಲೋಕೋಪಯೋಗಿ ಇಲಾಖೆಯ ಸರ್ಕಿಟ್ ಹೌಸ್ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಹಬ್ಬ-ಹರಿ ದಿನಗಳ ಸಂದರ್ಭ ಹಾಗೂ ವಿದ್ಯಾರ್ಥಿಗಳಿಗೆ ಹೊಸ ಬಸ್ ಖರೀದಿಯಿಂದ ಸಂಚರಿಸಲು ಅನುಕೂಲವಾಗುವ ಜತೆಗೆ ಬಸ್‌ಗಳ ಕೊರತೆ ನೀಗಿಸಿದಂತಾಗುತ್ತದೆ. ಯಲಬುರ್ಗಾ ಕ್ಷೇತ್ರದಲ್ಲಿ 16 ಬಸ್‌ ನಿಲ್ದಾಣ ಕಟ್ಟುತ್ತಿದ್ದು ಬೇವೂರು ಹಾಗೂ ಹಿರೇವಂಕಲಕುಂಟಾ ನೂತನ ಬಸ್ ನಿಲ್ದಾಣಗಳ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮಂಗಳೂರಿಗೆ ಬಸ್ ನಿಲ್ದಾಣ ನಿರ್ಮಿಸಲು ಆದೇಶಿಸಿದ್ದೇನೆ ಎಂದರು.

ಕೊಪ್ಪಳ-ಬೆಂಗಳೂರು ಹಾಗೂ ಕೊಪ್ಪಳ-ಬೀದರ ಜಿಲ್ಲೆಗಳಿಗೆ ಶೀಘ್ರವೇ ನಾನ ಎಸಿ ಸ್ಲೀಪರ್ ಬಸ್‌ ಓಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದ ಅವರು, ಅಂಜನಾದ್ರಿಗೆ ಹಿಂದಿನ ಸರ್ಕಾರ ₹ 19 ಕೋಟಿ ಅನುದಾನ ನೀಡಿತ್ತು. ನಮ್ಮ ಸರ್ಕಾರ ₹ 100 ಕೋಟಿ ನೀಡಿದೆ. ಪ್ರವಾಸಿ ಮಂದಿರ, ಶಾಫಿಂಗ್ ಕಾಂಪ್ಲೆಕ್ಸ್, ಪ್ರದಕ್ಷಿಣಾ ಪಥ, ಕುಡಿಯುವ ನೀರಿನ ವ್ಯವಸ್ಥೆ ಕಲ್ಲಿಸುವ ಮೂಲಕ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಪ್ರತಿ ವರ್ಷ ಜನರಿಗೆ 1.3 ಲಕ್ಷ ಕೋಟಿಯನ್ನು ನೇರವಾಗಿ ಕೊಡುತ್ತಿದೆ. ಗ್ಯಾರಂಟಿ ಯೋಜನೆಗಳ ಜತೆಗೆ ₹ 52 ಸಾವಿರ ಕೋಟಿ ಕೊಡುತ್ತಿದೆ. ಶಕ್ತಿಯೋಜನೆಯಲ್ಲಿ ರಾಜ್ಯದಲ್ಲಿ ನಿತ್ಯ 60ರಿಂದ 62 ಲಕ್ಷ ಮಹಿಳೆಯರು ಉಚಿತವಾಗಿ ಸಂಚರಿಸುತ್ತಿದ್ದು ಇದೊಂದು ಜಾಗತಿಕ ದಾಖಲೆ ಆಗಿದೆ ಎಂದರು.

ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ಯಲಬುರ್ಗಾ ಕ್ಷೇತ್ರದಲ್ಲಿ ಬಸ್ ನಿಲ್ದಾಣ. ಶಾಲಾ-ಕೊಠಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇರುವುದಕ್ಕಿಂತ ಹೆಚ್ಚಿವೆ. ಜಿಲ್ಲಾ ಕೇಂದ್ರದಲ್ಲಿ ಇರುವ ಸೌಲಭ್ಯ ಇಲ್ಲಿನ ಜನರಿಗೆ ಸಿಗಬೇಕೆಂದು ರಾಯರೆಡ್ಡಿ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು.

ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಅವರು, ಮೊದಲ ಬಾರಿಗೆ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಗರ್ಭ ಗುಡಿಗೆ ₹ 10 ಕೋಟಿ ಹಣ ನೀಡಿದ್ದರು. ವಿವಿಧ ಅಭಿವೃದ್ಧಿ ಯೋಜನೆ ಸೇರಿದಂತೆ ₹ 100 ಕೋಟಿ ಅನುದಾನವನ್ನು ಹುಲಿಗೆಮ್ಮ ದೇವಸ್ಥಾನಕ್ಕೆ ನೀಡುತ್ತೆನೆ ಎಂದು ಹೇಳಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಬೇವೂರು ಗ್ರಾಪಂ ಅಧ್ಯಕ್ಷೆ ಅಂದಮ್ಮ ಗವಿಸಿದ್ದಪ್ಪ ಬಳಿಗಾರ, ಜಿಲ್ಲಾಧಿಕಾರಿ ನಲಿನ್ ಅತುಲ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವ್ಯವಸ್ಥಾಪಕ ನಿದರ್ಶಶಕ ರಾಚಪ್ಪ ಎಂ., ಕಲಬುರಗಿ ಮುಖ್ಯ ಕಾಮಗಾರಿ ಅಭಿಯಂತರ ಚನ್ನನ ಬೋರಯ್ಯ. ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ವೆಂಕಟೇಶ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತ ಹೇಮಂತ್, ಕೊಪ್ಪಳ ಸಹಾಯಕ ಆಯುಕ್ತ ಕ್ಯಾ. ಮಹೇಶ್ ಮಾಲಗಿತ್ತಿ ಉಪಸ್ಥಿತರಿದ್ದರು.