ಸಾರಾಂಶ
ಬೆಂಗಳೂರು : ಮೈಸೂರು ದಸರಾ ಮಹೋತ್ಸವ ವೀಕ್ಷಣೆಗೆ ಬರುವವರ ಹಾಗೂ ದಸರಾ ರಜಾ ದಿನಗಳಲ್ಲಿ ವಿವಿಧ ನಗರಗಳಿಗೆ ಸಂಚರಿಸುವವರ ಅನುಕೂಲಕ್ಕಾಗಿ ಅ. 9ರಿಂದ 12ರವರೆಗೆ ಕೆಎಸ್‌ಆರ್‌ಟಿಸಿಯಿಂದ ಎರಡು ಸಾವಿರಕ್ಕೂ ಹೆಚ್ಚಿನ ವಿಶೇಷ ಬಸ್‌ಗಳ ಸೇವೆ ನೀಡಲಾಗುವುದು.
ರಾಜ್ಯ ಮತ್ತು ಹೊರರಾಜ್ಯದ ವಿವಿಧ ನಗರಗಳಿಗೆ ವಿಶೇಷ ಬಸ್ ಸೇವೆಯನ್ನು ನೀಡಲಾಗುತ್ತದೆ. ಬೆಂಗಳೂರಿನಿಂದ ಹೊರಡುವ ವಿಶೇಷ ಬಸ್‌ಗಳು ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುತ್ತದೆ. ವಿಶೇಷ ಬಸ್‌ಗಳ ಪೈಕಿ ಮೈಸೂರು ದಸರಾ ಅಂಗವಾಗಿ ಕೆಎಸ್ಸಾರ್ಟಿಸಿ 660 ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ.
ಅದರಲ್ಲಿ 260 ಬಸ್‌ಗಳು ಬೆಂಗಳೂರಿನಿಂದ ಮೈಸೂರು ನಗರಕ್ಕೆ ಸಂಚರಿಸಲಿದ್ದು, ಉಳಿದ 400 ಬಸ್‌ಗಳು ಮೈಸೂರು ಸುತ್ತಮುತ್ತಲನ ನಗರಗಳಾದ ಮಂಡ್ಯ, ಮಡಿಕೇರಿ, ಮಳವಳ್ಳಿ, ಎಚ್‌ಡಿ ಕೋಟೆ, ಚಾಮರಾಜನಗರ, ಚಾಮುಂಡಿ ಬೆಟ್ಟ, ಕೆಆರ್‌ಎಸ್ ಆಣೆಕಟ್ಟು, ನಂಜನಗೂಡು ಸೇರಿದಂತೆ ಮತ್ತಿತರ ನಗರಗಳಿಗೆ ಸೇವೆ ನೀಡಲಿವೆ.
ಮೈಸೂರಿಗೆ ಬರುವ ಪ್ರವಾಸಿಗರಿಗಾಗಿ ಕೆಸ್ಸಾರ್ಟಿಸಿಯು ಪ್ರವಾಸಿ ಬಸ್ ಸೇವೆ ಆರಂಭಿಸಿದೆ. ಮೈಸೂರು ಮತ್ತು ಅಕ್ಕಪಕ್ಕದ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗುವ ಗಿರಿದರ್ಶಿನಿ, ಜಲದರ್ಶಿನಿ, ದೇವದರ್ಶಿನಿ ಹೆಸರಿನ ಒಂದು ದಿನದ ಪ್ರವಾಸಿ ಪ್ಯಾಕೇಜ್ ವ್ಯವಸ್ಥೆ ನೀಡಲಾಗುತ್ತಿದೆ. ಈ ಪ್ರವಾಸಿ ಬಸ್ ಸೇವೆಯು ಮೈಸೂರಿನಿಂದ ಆರಂಭವಾಗಲಿದೆ. ಅ. 3ರಿಂದ ಆರಂಭವಾಗಿರುವ ಪ್ರವಾಸಿ ಪ್ಯಾಕೇಜ್ ಅ. 15ರವರೆಗೆ ಕಾರ್ಯಾಚರಣೆಗೊಳ್ಳಲಿದೆ.
ಈ ಎಲ್ಲ ಸೇವೆಗಳ ಕುರಿತು ಮಾಹಿತಿ ಹಾಗೂ ಮುಂಗಡ ಟಿಕೆಟ್ ಬುಕ್ಕಿಂಗ್‌ಗಾಗಿ ಕೆಎಸ್ಸಾರ್ಟಿಸಿ ವೆಬ್‌ಸೈಟ್ www.ksrtc.karnataka.gov.inಗೆ ಭೇಟಿ ನೀಡಬಹುದಾಗಿದೆ.