ಸಾರಾಂಶ
ಪಟ್ಟಣದ ನಿವಾಸಿ ವಿರೂಪಾಕ್ಷಪ್ಪ ಮಳಿಯಪ್ಪ ಬಡಿಗೇರ ಸುಮಾರು ವರ್ಷಗಳಿಂದ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬಕ್ಕೆ ಸುಮಾರು ೨೦೦೦ ಮಣ್ಣೆತ್ತುಗಳನ್ನು ತಯಾರಿಸಿ ಬಣ್ಣ ಬಳಿದು ಸುಂದರ ರೂಪ ನೀಡಿದ್ದಾರೆ.
ವಿರೂಪಾಕ್ಷಪ್ಪ ಬಡಿಗೇರ ಕೈಯಲ್ಲಿ ಅರಳುವ ಬಸವಣ್ಣನ ಮೂರ್ತಿಗಳು । ಅಮಾವಾಸ್ಯೆ ಆಚರಣೆಗೆ ಸಂಭ್ರಮದ ಸಿದ್ಧತೆ
ಶಿವಮೂರ್ತಿ ಇಟಗಿ
ಕನ್ನಡಪ್ರಭ ವಾರ್ತೆ ಯಲಬುರ್ಗಾಪಟ್ಟಣದ ನಿವಾಸಿ ವಿರೂಪಾಕ್ಷಪ್ಪ ಮಳಿಯಪ್ಪ ಬಡಿಗೇರ ಸುಮಾರು ವರ್ಷಗಳಿಂದ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬಕ್ಕೆ ಸುಮಾರು ೨೦೦೦ ಮಣ್ಣೆತ್ತುಗಳನ್ನು ತಯಾರಿಸಿ ಬಣ್ಣ ಬಳಿದು ಸುಂದರ ರೂಪ ನೀಡಿದ್ದಾರೆ.
ತಾಲೂಕಿನ ವಿವಿಧ ಹಳ್ಳಿಗಳ ಜನರು ಇವರ ಮನೆಗೆ ಆಗಮಿಸಿ ಮಣ್ಣೆತ್ತುಗಳನ್ನು ಖರೀದಿಸುತ್ತಾರೆ. ಇವರು ತಯಾರಿಸುವ ಎತ್ತುಗಳಿಗೆ ಬಹು ಬೇಡಿಕೆಯಿದೆ. ಪಿಒಪಿಯಿಂದ ತಯಾರಿಸಿದ ಎತ್ತುಗಳು ಇಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ ಅವುಗಳಿಗೆ ಸೆಡ್ಡು ಹೊಡೆಯುವಂತೆ ಇವರು ಉತ್ತಮ ಮಣ್ಣಿನಿಂದ ಎತ್ತುಗಳನ್ನು ತಯಾರಿಸಿದ್ದಾರೆ. ಒಂದು ಜೊತೆ ಎತ್ತುಗಳು ₹೨೦ರಿಂದ ೪೦ರ ವರೆಗೆ ಮಾರಾಟವಾಗುತ್ತವೆ. ಇವರ ಮೂಲ ಉದ್ಯೋಗ ಬಡಗಿತನವಾಗಿದ್ದರೂ ಅದರ ಜೊತೆಗೆ ಈ ಹಬ್ಬಕ್ಕಾಗಿ ಇವರು ಮಣ್ಣೆತ್ತುಗಳನ್ನು ತಯಾರಿಸುತ್ತಾರೆ.ಮಣ್ಣೆತ್ತಿನ ಅಮವಾಸ್ಯೆ ಬಂದರೆ ಸಾಕು ರೈತಾಪಿ ವರ್ಗ ಮುಂಗಾರಿನ ಖುಷಿಯ ನಡುವೆ ಅತ್ಯಂತ ಸಂತೋಷದಿಂದ ಹಬ್ಬ ಆಚರಿಸುತ್ತಾರೆ. ಆದರೆ ಈ ಭಾರಿ ಮಳೆ ತಡವಾಗಿಯಾದರೂ ಆಯಿತಲ್ಲ ಅನ್ನುವ ಖುಷಿಯಲ್ಲಿ ರೈತರು ಮಣ್ಣೆತ್ತಿನ ಅಮಾವಾಸ್ಯೆ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ.
ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಪ್ರತಿ ವರ್ಷ ಎತ್ತು ಕೊಂಡುಕೊಳ್ಳುತ್ತೇನೆ. ತುಂಬಾ ಸುಂದರವಾಗಿ ತಯಾರಿಸುತ್ತಾರೆ. ಇಂದಿನ ಆಧುನಿಕ ಯುಗದಲ್ಲಿಯೂ ಇಂತಹ ಮಣ್ಣಿನ ಎತ್ತುಗಳನ್ನು ತಯಾರಿಸಿ ಹಳೆಯ ಕಲೆ ಉಳಿಸಿ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ಕೀರ್ತಿ ಎಂ. ಜಕ್ಕಲಿ ತಿಳಿಸಿದ್ದಾರೆ.ನಾನು ಹಲವಾರು ವರ್ಷದಿಂದ ಇಂತಹ ಮೂರ್ತಿಗಳನ್ನು ತಯಾರಿಸುತ್ತೇನೆ. ಸುತ್ತಮುತ್ತಲಿನ ಹಲವಾರು ಗ್ರಾಮಸ್ಥರು ನನ್ನ ಮನೆಗೆ ಬಂದು ಎತ್ತು ಖರೀದಿಸುತ್ತಾರೆ. ಇದರಿಂದ ನನ್ನ ಜೀವನವು ಸುಖಕರವಾಗಿದೆ ಎಂದು ಮಣ್ಣೆತ್ತುಗಳ ತಯಾರಕ ವಿರೂಪಾಕ್ಷಪ್ಪ ಬಡಿಗೇರ ತಿಳಿಸಿದ್ದಾರೆ.