ಯುವನಿಧಿ ಯೋಜನೆಗೆ ಜಿಲ್ಲೆಯಿಂದ 2019 ಅರ್ಜಿ ಸ್ವೀಕಾರ

| Published : Jan 13 2024, 01:34 AM IST

ಸಾರಾಂಶ

ಧಾರವಾಡ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ 2,091 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬರಗಾಲ ಸಂಬಂಧ ಎಲ್ಲ ಮುಂಜಾಗ್ರತಾ ಕ್ರಮ-ಜಿಲ್ಲಾಧಿಕಾರಿ

ಕನ್ನಡಪ್ರಭ ವಾರ್ತೆ ಧಾರವಾಡ

ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಜ.12ರ ವರೆಗೆ 2,091 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯುವನಿಧಿ ಯೋಜನೆಯು ರಾಜ್ಯ ಸರ್ಕಾರ ಪದವಿ ಹಾಗೂ ಡಿಪ್ಲೋಮಾ ಕೋರ್ಸ್‌ಗಳನ್ನು 2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡಿ 2023 ರಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ನಿರುದ್ಯೋಗ ಭತ್ಯೆಯನ್ನು ನೀಡುವ ಖಾತರಿ ಯೋಜನೆ. ಪದವಿಧರರಿಗೆ ₹3 ಸಾವಿರ ಮತ್ತು ಡಿಪ್ಲೋಮಾ ತೇರ್ಗಡೆಯಾದವರಿಗೆ ₹1500 ನಿರುದ್ಯೋಗ ಭತ್ಯೆಯನ್ನು ಎರಡು ವರ್ಷದವರೆಗೆ ನೀಡುವ ಯೋಜನೆ. ಯುವನಿಧಿ ಯೋಜನೆಗೆ ಅಭ್ಯರ್ಥಿಗಳು ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮ ಒನ್, ನಗರ ಪ್ರದೇಶಗಳಲ್ಲಿ ಕರ್ನಾಟಕ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಿಗೆ ತೆರಳಿ ಸೇವಾ ಸಿಂಧು ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಯುವನಿಧಿ ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ18005999918 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಬರಗಾಲ ಕುರಿತಂತೆ ಎಲ್ಲ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮದಲ್ಲಿ ಮಾತ್ರ ನೀರಿನ ಸಮಸ್ಯೆ ಕಂಡು ಬಂದಿದ್ದು, ಅಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಕಂಡುಬಂದಿಲ್ಲ ಎಂದರು. ನವಲಗುಂದ, ಕುಂದಗೋಳ ತಾಲೂಕುಗಳಲ್ಲಿ ಕೆಲ ವಾರಗಳ ಕಾಲ ಮಾತ್ರ ಸಾಕಾಗುವಷ್ಟು ಅಲ್ಲಿ ಮೇವು ಬ್ಯಾಂಕ್‌ ತೆರೆಯಲಾಗುವುದು. ಉಳಿದಂತೆ ಮಲೆನಾಡು ಪ್ರದೇಶದಲ್ಲಿ ಮೇವು ಸಾಕಷ್ಟು ಸಂಗ್ರಹವಿದೆ. ಕೊರತೆ ಕಂಡು ಬಂದರೆ ಟೆಂಡರ್ ಮೂಲಕ ಮೇವು ಖರೀದಿಸಲಾಗುವದು ಎಂದರು.

ಜಿಲ್ಲಾಧಿಕಾರಿಗಳ ವ್ಯಾಪ್ತಿಯಲ್ಲಿ ಬರ ನಿರ್ವಹಣೆಗಾಗಿ ಜಿಲ್ಲಾಡಳಿತದ ಬಳಿ ಸುಮಾರು ₹20 ಕೋಟಿ ಇದೆ. ಪ್ರತಿ ತಾಲೂಕಿನ ತಹಸೀಲ್ದಾರ್‌ ಹತ್ತಿರ ₹5 ಕೋಟಿ ಹಣವಿದೆ. ಬರಗಾಲ ಪರಿಹಾರ ಹಣ ಸಂದಾಯ ಕುರಿತಂತೆ ಪ್ರತಿ ಹೆಕ್ಟೆರಗೆ ₹2 ಸಾವಿರವನ್ನು ರೈತರ ಖಾತೆಗೆ ಡಿಬಿಟಿ ಮೂಲಕ ಇನ್ನೊಂದು ವಾರದಲ್ಲಿ ಸಂದಾಯ ಮಾಡಲಾಗುತ್ತಿದೆ. ರೈತರು ಪ್ರೋಟ್ ಐಡಿ ಹೊಂದಿರಬೇಕು ಎಂದರು.

ಹಾಸ್ಟೇಲ್‌ಗೆ ಹಣ ನೀಡಬೇಡಿ

ಧಾರವಾಡದಲ್ಲಿ ಹಾಸ್ಟೇಲ್‌ ಸಿಗದೇ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಹಣಕೊಟ್ಟರೆ ಮಾತ್ರ ಹಾಸ್ಟೇಲ್‌ ಸಿಗುತ್ತಿವೆ ಎಂಬ ಆರೋಪ ಕುರಿತಂತೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು, ಧಾರವಾಡ ಮಾತ್ರವಲ್ಲದೇ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಧಾರವಾಡದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ. ಆದರೆ, ಇಲ್ಲಿ ಬರೀ ಏಳೆಂಟು ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಸಾಕಾಗುವಷ್ಟ ವಸತಿ ವ್ಯವಸ್ಥೆ ಇದೆ. ಹೀಗಾಗಿ, ಧಾರವಾಡದ ಸಿಎ ನಿವೇಶನಗಳಲ್ಲಿ ಹಾಸ್ಟೇಲ್‌ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದ ಅವರು, ಹಾಸ್ಟೇಲ್‌ ನೀಡುವುದಾಗಿ ಯಾರೇ ಹಣ ಕೇಳಿದರೂ ವಿದ್ಯಾರ್ಥಿಗಳು ನೀಡಬಾರದು. ಇಂತಹ ಸಂದರ್ಭದಲ್ಲಿ ತಮ್ಮನ್ನು ಸಂಪರ್ಕಿಸಬಹುದು ಎಂಬ ಸಲಹೆ ನೀಡಿದರು.