ಶಹಾಪುರ ತಾಲೂಕಿನ 21 ಪರೀಕ್ಷಾ ಕೇಂದ್ರಗಳು

| Published : Mar 25 2024, 12:46 AM IST

ಸಾರಾಂಶ

ಶಹಾಪುರ ನಗರದ ಆದರ್ಶ ವಿದ್ಯಾಲಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಕೇಂದ್ರದಲ್ಲಿ ಶಿಕ್ಷಕರು ಪೂರ್ವ ಸಿದ್ಧತೆಯಲ್ಲಿ ತೊಡಗಿರುವುದು. ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ವೆಬ್ ಕಾಸ್ಟಿಂಗ್ ಅಳವಡಿಸಿರುವುದು.

ಕನ್ನಡಪ್ರಭ ವಾರ್ತೆ ಶಹಾಪುರ

ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ಪ್ರಮುಖ ಘಟ್ಟ ಎಂದೇ ಪರಿಗಣಿಸಲಾದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಪ್ರತಿಯೊಂದು ಪರೀಕ್ಷೆ ಕೇಂದ್ರದಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಸಿಸಿ ಕ್ಯಾಮೆರಾ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಸೋಮವಾರದಿಂದ ಆರಂಭವಾಗಲಿದೆ. ತಾಲೂಕಿನ 21 ಪರೀಕ್ಷೆ ಕೇಂದ್ರಗಳಲ್ಲಿ ತಾಲೂಕಿನ ಹತ್ತಿಗೂಡುರ ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರ, ಸರಕಾರಿ ಕನ್ಯಾ ಪ್ರೌಢಶಾಲೆ, ಗೋಗಿ, ಸರಕಾರಿ ಪ್ರೌಢಶಾಲೆ ವಡಗೇರಾ ಹಾಗೂ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ದೋರನಹಳ್ಳಿ ಸೂಕ್ಷ್ಮ ಪರೀಕ್ಷಾ ಕೇಂದ್ರ ಎಂದು ಗುರುತಿಸಲಾಗಿದೆ. ತಾಲೂಕಿನ 21 ಪರೀಕ್ಷಾ ಕೇಂದ್ರಗಳಲ್ಲಿ 6393 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪ್ರಶ್ನೆ ಪತ್ರಿಕೆಗಳನ್ನು ತಾಲೂಕು ಖಜಾನೆಯಿಂದ ಕೇಂದ್ರಗಳಿಗೆ ತಲುಪಿಸಲು 7 ವಿತರಣಾ ಮಾರ್ಗಗಳನ್ನು ರಚಿಸಲಾಗಿದೆ. ನಿಯಮಾವಳಿ ರೀತಿ ವೇಳಾಪಟ್ಟಿಯಂತೆ ಸಕಾಲಕ್ಕೆ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ವ್ಯವಸ್ಥೆ ಮಾಡಿ ಕೊಳ್ಳಲಾಗಿದೆ.

ಪೊಲೀಸ್ ಬಂದೋಬಸ್ತ್ :

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪರೀಕ್ಷೆ ಕೇಂದ್ರಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ.

ಸಿಸಿ ಕ್ಯಾಮೆರಾ ವೆಬ್ ಕಾಸ್ಟಿಂಗ್ :

ಪ್ರತಿ ಪರೀಕ್ಷಾ ಕೇಂದ್ರದ ಪರೀಕ್ಷೆ ಕೋಣೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ಅಧಿಕಾರಿಗಳ ವೀಕ್ಷಣೆಗೆಂದು ವೆಬ್ ಕಾಸ್ಟಿಂಗ್ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಯಲ್ಲಿ ನಕಲು ಹಾಗೂ ಇತರೆ ಅಕ್ರಮಗಳಿಗೆ ಕಡಿವಾಣ ಹಾಕಲು ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಾ.25 ರಿಂದ ಏ.6 ರವರೆಗೆ ನಡೆಯಲಿರುವ ಹಿನ್ನೆಲೆ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಆದೇಶ ಹೊರಡಿಸಿದ್ದಾರೆ.

ಅರ್ಧ ಗಂಟೆ ಮುಂಚೆಯೇ ಪರೀಕ್ಷಾ ಕೇಂದ್ರಗಳನ್ನು ತಲುಪಿ. ನಿಮ್ಮ ನೋಂದಣಿ ಸಂಖ್ಯೆ ಹುಡುಕಿ ಕೇಂದ್ರದೊಳಗೆ ಪ್ರವೇಶಿಸಲು ಇದು ಅನುಕೂಲ ಮಾಡಿಕೊಡುತ್ತದೆ. ಸಮಯ ಕಡಿಮೆ ಇದ್ದಷ್ಟೂ ಆತಂಕ ಹೆಚ್ಚುತ್ತಾ ಹೋಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಆತಂಕ ಪಡದೆ, ಪರೀಕ್ಷೆಯನ್ನು ಎದುರಿಸುತ್ತೇನೆ ಎನ್ನುವ ಧೈರ್ಯದಿಂದ ಇರಬೇಕು :

ಶೀಬಾ ಜೇಲಿಯನ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಹಾಪುರ.