ಕಲಬುರಗಿ ಕದನ ಕಣದಲ್ಲಿ 21 ಸುತ್ತಿನ ರಣರೋಚಕ ಹಾವು ಏಣಿ ಆಟ!

| Published : Jun 05 2024, 12:30 AM IST

ಕಲಬುರಗಿ ಕದನ ಕಣದಲ್ಲಿ 21 ಸುತ್ತಿನ ರಣರೋಚಕ ಹಾವು ಏಣಿ ಆಟ!
Share this Article
  • FB
  • TW
  • Linkdin
  • Email

ಸಾರಾಂಶ

ಈ ಮತ ಎಣಿಕೆಯನ್ನು ಹತ್ತಿರದಿಂದ ಗಮನಿಸಿದವರೆಲ್ಲರಿಗೂ ಲೀಡ್‌ ಹೊಂದುವಲ್ಲಿ ಬಿಜೆಪಿ, ಕಾಂಗ್ರೆಸ್‌ ನಡುವೆ ನಡೆದಿದ್ದ ತುರುಸಿನ ಪೈಪೋಟಿ ಅನುಭ‍ಕ್ಕೆ ಬದುಂ ಅಚ್ಚರಿಪಡುವಂತಾಯ್ತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿದ್ದಾಜಿದ್ದಿ ಪೈಪೋಟಿ ಕಂಡಿದ್ದ ಗುಲ್ಬರ್ಗ (ಮೀಸಲು) ಲೋಕಸಭಾ ಕ್ಷೇತ್ರ ಚುನಾವಣೆಯ ಮತ ಎಣಿಕೆಯೂ ಅಷ್ಟೇ ರಣರೋಚಕವಾಗಿತ್ತು.

ಈ ಮತ ಎಣಿಕೆಯನ್ನು ಹತ್ತಿರದಿಂದ ಗಮನಿಸಿದವರೆಲ್ಲರಿಗೂ ಲೀಡ್‌ ಹೊಂದುವಲ್ಲಿ ಬಿಜೆಪಿ, ಕಾಂಗ್ರೆಸ್‌ ನಡುವೆ ನಡೆದಿದ್ದ ತುರುಸಿನ ಪೈಪೋಟಿ ಅನುಭ‍ಕ್ಕೆ ಬದುಂ ಅಚ್ಚರಿಪಡುವಂತಾಯ್ತು.

ಮಂಗಳವಾರ ಗುಲ್ಬರ್ಗ ವಿಶ್ವವಿದ್ಯಾಲಯದ 8 ವಿಭಾಗಗಳಲ್ಲಿ ಏಕಕಾಲಕ್ಕೆ ನಡೆದ ಮತ ಎಣಿಕೆಯಲ್ಲಿ ಆರಂಭದಲ್ಲಿ 3 ಸುತ್ತು ಬಿಜೆಪಿಯ ಉಮೇಶ ಜಾದವ್‌ ಮುನ್ನಡೆ ಸಾಧಿಸಿದಾಗ ಕಾಂಗ್ರೆಸ್ಸಿಗರು ಮೋದಿ ಅಲೆಯಿಂದ ಹೀಗಾಯ್ತಲ್ಲ, ಅದೆಷ್ಟೇ ಶಿಸ್ತಿನಿಂದ ಇಲೆಕ್ಷನ್‌ ಮಾಡಿದರೂ ಆರಂಭದಲ್ಲೇ ಮುನ್ನಡೆ ಬಿಜೆಪಿಗೇ ಬಂತಲ್ಲ ಎಂದು ಕಂಗಾಲಾಗಿದ್ದರು.

ಅನೇಕ ಮತ ಎಣಿಕೆ ಕೇಂದ್ರಗಳಲ್ಲಿನ ಕಂಗ್ರೆಸ್ಸಿಗರ ಮುಖದಲ್ಲಿ ಈ ಭಾವ ಕಂಡಿತ್ತು. ಆದರೆ ಬಿಸಿಲೇರುತ್ತಿದ್ದಂತೆಯೇ ಮತ ಎಣಿಕೆ ಸುತ್ತುಗಳಲ್ಲಿ ಪ್ರಗತಿ ಕಂಡು ಬಂದಾಗ ಹಾವು ಏಣಿ ಆಟ ಶುರುವಾಯ್ತು!

ಒಮ್ಮೆ 3 ಸಾವಿರ ಮತದಿಂದ ಬಿಜೆಪಿ ಮುನ್ನಡೆಯಾದರೆ, 6 ಸಾವಿರ ಮತಗಳಿಂದ ಕಾಂಗ್ರೆಸ್‌ ಮುನ್ನಡೆ ಸಾಧಿಸೋದು, ಹೀಗೆಯೇ 35 ಸಾವಿರ ಮತಗಳವರೆಗೂ ಮುನ್ನಡೆ ಸಾಧಿಸಿದಾಗಲೂ ಕೂಡಾ ಅದು ಇದೇ ಪಕ್ಷಕ್ಕೆ ಖಚಿತ ಎಂದು ಹೇಳದಂತಹ ವಾತಾವರಣ ಅಲ್ಲಿತ್ತು.

ಏಕೆಂದರೆ ಯಾವಾಗ ಬೇಕಾದರೂ ಏನಾದರೂ ಲೀಡ್‌ನಲ್ಲಿ ಅದಲು ಬದಲು ಆಗಬಹುದು, ಯಾವ ಪ್ರದೇಶ, ಕ್ಷೇತ್ರಗಳ ಎಣಿಕೆ ಶುರುವಾಗಿ ಅದ್ಯಾವ ಅಂತ್ಯ ತಲುಪುವುದೋ? ಎಂಬ ಅತಂತ್ರ ಆತಂಕ ಅಲ್ಲಿದ್ದವರೆಲ್ಲರಿಗೂ ಮತ ಎಣಿಕೆಯ ಕೊನೆ ಸುತ್ತಿನವರೆಗೂ ಕಾಡಿತ್ತು.

13 ಸುತ್ತಿನವರೆಗೂ ಭಾರಿ ಅಂತರ ಕಾಯ್ದುಕೊಂಡಿದ್ದ ಕಾಂಗ್ರೆಸ್ ಪಕ್ಷ ಏಕಾಏಕಿಯಾಗಿ 14 ನೇ ಸುತ್ತಿನ ಮತಗಳ ಎಣಿಕೆಯಲ್ಲಿ ಹಿನ್ನೆಡೆಗೊಳಗಾಯ್ತು. ಇಲ್ಲಿ 365 ಮತಗಳ ಲೀಡ್‌ ಬಿಜೆಪಿಗೆ ಸಿಕ್ಕಾಗಲಂತೂ ಉಭಯ ಪಕ್ಷಗಳ ಕಾರ್ಯಕರ್ತರು ಅಭಿಮನಿಗಳು ಎಣಿಕೆಯಲ್ಲಿ ಏನಾದರೂ ಆಗಬುಹುದು, ಇದು ಹೀಗೆಯೇ ಆಗಲಿದೆ ಎಂದು ಹೇಳಲಾಗದು ಎಂದು ತಮ್ಮವರೇ ಗೆಲ್ಲೋದು ಎನ್ನತ್ತ ಕಾದು ಕುಳಿತಿದ್ದರು.

ಕೊನೆಗೆ 18 ನೇ ಸುತ್ತಿನಿಂದ ಶುರುವಾದ ಕಾಂಗ್ರೆಸ್‌ ಮೈಲುಗೈ ನಿಧಾನಕ್ಕೆ ಏರುಗತಿಯಲ್ಲೇ ಸಾಗಿತ್ತಾದರೂ ಕೊನೆ ಹಂತದಲ್ಲಿ ಮತ್ತೆ 10 ಸಾವಿರದಷ್ಟು ಲೀಡ್‌ ಕುಸಿದಿತ್ತು. 36 ಸಾವಿರದಲ್ಲೇ ರಾಧಾಕೃಷ್ಣ ಗೆಲ್ಲುತ್ತಾರೆಂದು ಅನೇಕರ ಲೆಕ್ಕಾಚಾರ ತಲೆ ಕೆಳಗಾಗಿ ಕೊನೆಗೆ 21 ಸುತ್ತುಗಳ ಹಾವು ಏಣಿ ಆಟದಲ್ಲಿ ಗೆಲುವಿನ ಲೀಡ್‌ ಕೂಡಿ ಕಳೆದು 27, 205 ಸಾವಿರಕ್ಕೆ ತಲುಪಿತ್ತು.

ಹೀಗೆ ಆರಂಭದ ಸುತ್ತಿನಿಂದಲೂ ಕೊನೆಯ 21 ನೇ ಸುತ್ತಿನವರೆಗೂ ಉಸಿರು ಬಿಗಿ ಹಿಡಿದುಕೊಂಡೇ ಕ್ಷೇತ್ರದ ಫಲಿತಾಂಶ ಗಮನಿಸುವಂತೆ ಇಲ್ಲಿನ ರೋಚಕ ಕದನ ಎಲ್ಲರನ್ನು ಮಾಡಿತ್ತು. ಅದರಲ್ಲೂ ಏಜಂಟರು, ಮುಖಂಡರು, ಪುಢಾರಿಗಳಂತೂ ಈ ಮತಗಳ ಮೇಲಾಟ ಕಂಡು ಹೌಹಾರಿದ್ದರು. ನಮ್ಮವರು, ತಮ್ಮವರು ಗೆಲ್ಲುತ್ತಾರೋ, ಬೀಳುತ್ತಾರೋ ಎಂಬ ಆತಂಕ ಒಳಗಾದರೆ ಯಾರು ಗೆದ್ದರೂ ಹತ್ತಿಪ್ಪತ್ತು ಸಾವಿರವಷ್ಟೇ ಅಂತರ ಎಂದು ಭವಿಷ್ಯ ನುಡಿಯುತ್ತ ಕುತೂಹಲದಿಂದ ಮತ ಎಣಿಕೆ ಮಾಹಿತಿಗಳನ್ನು ನೋಡೋದರಲ್ಲಿ ತಲ್ಲೀನರಾಗಿದ್ದರು.

ಚುನಾವಣೆ ಮತ ಎಣಿಕೆ ಶಾಂತಿಯುತವಾಗಿ ಜರುಗಿತು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು 27,205 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಘೋಷಿಸಿ ಅಭ್ಯರ್ಥಿಗೆ ಪ್ರಮಾಣಪತ್ರ ವಿತರಿಸಿದರು.

ಗುಲ್ಬರ್ಗ ಲೋಕಸಭಾ ಮತಕ್ಷೇತ್ರದ ಸಾಮಾನ್ಯ ವೀಕ್ಷಕ ದೀಪಂಕರ ಸಿನ್ಹಾ ಅವರು ಹಾಜರಿದ್ದು, ಸುಸೂತ್ರವಾಗಿ ಮತ ಎಣಿಕೆ ಜರುಗುವಂತೆ ನೋಡಿಕೊಂಡರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.