ಸಾರಾಂಶ
ಮುಂಡಗೋಡ
೨೧ನೇ ಶತಮಾನ ಯೋಗ್ಯತೆ ಹಾಗೂ ಸಾಮರ್ಥ್ಯದಿಂದ ಬದುಕುವ ಶತಮಾನವಾಗಿದ್ದು, ಬದುಕಿನಲ್ಲಿ ಪ್ರತಿಯೊಬ್ಬ ಮಕ್ಕಳಿಗೆ ಉತ್ತಮ ಶಿಕ್ಷಣ ಅತ್ಯವಶ್ಯವಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೩-೨೪ನೇ ಸಾಲಿನ ಸಾಂಸ್ಕೃತಿಕ, ಎನ್‌ಎಸ್‌ಎಸ್ ಕ್ರೀಡಾ ಹಾಗೂ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನ ಇಲ್ಲದಿದ್ದರೆ ಏನು ಪ್ರಯೋಜನವಿಲ್ಲ ಎಂದರು.ಇಂದಿನ ಮಕ್ಕಳು ಕೇವಲ ನಮ್ಮ ಮಕ್ಕಳಾಗಿ ಉಳಿದಿಲ್ಲ. ಬದಲಾಗಿ ಜಗತ್ತಿನ ಆಸ್ತಿಯಾಗಿ ಹೊರ ಹೊಮ್ಮುತ್ತಿದ್ದಾರೆ. ಹಾಗಾಗಿ ಜಗತ್ತಿನ ಆಗು-ಹೋಗುಗಳ ಬಗ್ಗೆ ಪರಿಕಲ್ಪನೆ ಪ್ರತಿಯೊಬ್ಬರಿಗೂ ಇರಬೇಕು ಎಂದ ಅವರು, ಮಕ್ಕಳಲ್ಲಿ ಸಮಾಜದ ಬಗ್ಗೆ ತಿಳಿವಳಿಕೆ ಕೊರತೆಯಾದರೆ ಭವಿಷ್ಯದಲ್ಲಿ ಬದುಕುವುದು ಕಷ್ಟವಾಗುತ್ತದೆ. ಕೇವಲ ಪುಸ್ತಕ ಜ್ಞಾನ ಸಾಲುವುದಿಲ್ಲ, ಬದಲಾಗಿ ಬದುಕಲು ಸಾಮಾನ್ಯ ಜ್ಞಾನ ಕೂಡ ಅಷ್ಟೇ ಮುಖ್ಯ. ತಂದೆ-ತಾಯಂದಿರ ಅಪೇಕ್ಷೆ ಈಡೇರಿಸುವ ಮಕ್ಕಳಾಗಿ ಹೊರ ಹೊಮ್ಮಬೇಕು ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ, ಕಾಲೇಜು ಎಲ್ಲ ವಿಭಾಗಗಳಲ್ಲಿ ಸಾಕಷ್ಟು ಸಾಧನೆ ಮಾಡಿದ್ದು, ಘಟಕಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಇನ್ನು ವಿವಿಧ ಕೋರ್ಸ್ ಆರಂಭಿಸುವ ಯೋಜನೆ ರೂಪಿಸಲಾಗಿದೆ ಎಂದರು.ಹಾವೇರಿ ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿ ಅಶೋಕ ಗಡ್ಡಿಗೌಡರ ಉಪನ್ಯಾಸ ನೀಡಿದರು. ಎಲ್.ಟಿ. ಪಾಟೀಲ, ದೈಹಿಕ ಕಾಲೇಜಿನ ಕ್ರೀಡಾ ನಿರ್ದೇಶಕ ನಿಸಾರಖಾನ. ಸಿ.ಆರ್, ಎನ್‌ಎಸ್‌ಎಸ್ ಹಾಗೂ ರೇಂಜರ್ಸ್ ಘಟಕದ ಸಂಚಾಲಕರಾದ ಮಧುಶ್ರೀ. ಕೆ, ಕುಮಾರ ಆರ್, ನಾಗರಾಜ ಹರಿಜನ, ಯಲ್ಲಪ್ಪ ಬಿಸೇರೊಟ್ಟಿ, ಜ್ಯೋತಿ ಹಿರೇಮಠ, ಮಲ್ಲಿಕಾರ್ಜುನ ಗೌಡ, ತಾರಾಮತಿ ನಾಕೋಡ, ಅಲಿ ಅಹ್ಮದ್ ಗೋಕಾವಿ, ಡಾ ಅನುಪಮಾ, ಮಧುಶ್ರೀ ಇದ್ದರು. ಇದೇ ವೇಳೆ ವಿವಿಧ ಕ್ರೀಡೆ ಹಾಗೂ ಚಟುವಟಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಶಾಸಕ ಶಿವರಾಮ ಹೆಬ್ಬಾರ ಅಭಿನಂದಿಸಿ ಪ್ರಮಾಣ ಪತ್ರ ವಿತರಿಸಿದರು.