ಕೊನೆ ಭಾಗಕ್ಕೆ 220 ಕ್ಯುಸೆಕ್‌ ನೀರು: ಎಸಿ ಅಭಿಷೇಕ್‌

| Published : Mar 25 2024, 12:49 AM IST

ಸಾರಾಂಶ

ಭದ್ರಾವತಿ ಹಾಗೂ ಹೊನ್ನಾಳಿ ತಾಲೂಕುಗಳಲ್ಲಿ ಬರುವ ಆನವೇರಿಯ ಮುಖ್ಯ ಭದ್ರಾ ನಾಲೆಯಿಂದ ಬೇಸಿಗೆ ಹಂಗಾಮಿಗೆ ಹರಿಸಿರುವ 220 ಕ್ಯುಸೆಕ್ ನೀರನ್ನು ಕೊನೆ ಭಾಗಕ್ಕೆ ಹರಿಸಲಾಗುತ್ತಿದೆ ಎಂದು ಉಪವಿಭಾಧಿಕಾರಿ ವಿ. ಅಭಿಷೇಕ್ ಹೊನ್ನಾಳಿಯಲ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಭದ್ರಾವತಿ ಹಾಗೂ ಹೊನ್ನಾಳಿ ತಾಲೂಕುಗಳಲ್ಲಿ ಬರುವ ಆನವೇರಿಯ ಮುಖ್ಯ ಭದ್ರಾ ನಾಲೆಯಿಂದ ಬೇಸಿಗೆ ಹಂಗಾಮಿಗೆ ಹರಿಸಿರುವ 220 ಕ್ಯುಸೆಕ್ ನೀರನ್ನು ಕೊನೆ ಭಾಗಕ್ಕೆ ಹರಿಸಲಾಗುತ್ತಿದೆ ಎಂದು ಉಪವಿಭಾಧಿಕಾರಿ ವಿ. ಅಭಿಷೇಕ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಚಾನಲ್‍ನಿಂದ ಸಾಕಷ್ಟು ಜನರು ಪಂಪ್‌ಸೆಟ್ ಮೂಲಕ ಅನಧಿಕೃತವಾಗಿ ನೀರು ಪಡೆಯುತ್ತಿದ್ದಾರೆ. ಪರಿಣಾಮ ಕೊನೆ ಭಾಗದ ಅಧಿಕೃತ ಪಂಪೆಸೆಟ್ ಹೊಂದಿರುವ ರೈತರಿಗೆ ನೀರು ಸಿಗುತ್ತಿಲ್ಲ. ಆದ್ದರಿಂದ ಕೂಡಲೇ ಪೊಲೀಸ್, ಬೆಸ್ಕಾಂ, ನೀರಾವರಿ, ಕಂದಾಯ ಇಲಾಖೆಗಳ ಅಧಿಕಾರಿಗಳು ಪಂಪ್‍ಸೆಟ್ ಅಳವಡಿಸಿ, ನೀರು ಪಡೆಯುತ್ತಿರುವ ರೈತರ ಮನವೊಲಿಸಬೇಕು. ಐಪಿ ಸೆಟ್ ಕಡೆ ಬರುವ ಪಂಪ್‌ಸೆಟ್‍ಗಳನ್ನು ತೆರವುಗೊಳಿಸಬೇಕು ಎಂದು ಬೆಸ್ಕಾಂ, ಪೊಲಿಸ್ ಹಾಗೂ ಭಾರಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಎಸಿ ಅವರು ಸೂಚಿಸಿದರು.

ಬೇಸಿಗೆಯಲ್ಲಿ ಮೊದಲನೇ ಆದ್ಯತೆ ಕುಡಿಯುವ ನೀರು ಹಾಗೂ ಅಡಕೆ ಬೆಳೆಯನ್ನು ಉಳಿಸಿಕೊಳ್ಳುವುದಕ್ಕೆ ಆನವೇರಿ ಮುಖ್ಯನಾಲೆ ಮುಖಾಂತರ ಮಾರ್ಚ್ 21ರಂದು 220 ಕ್ಯುಸೆಕ್‌ ನೀರು ಬಿಟ್ಟಿದ್ದರೂ, ಇನ್ನೂ ಕೊನೆ ಭಾಗದ ಸಾಸ್ವೇಹಳ್ಳಿ, ಬೆನಕನಹಳ್ಳಿ, ಸದಾಶಿವಪುರ, ಕಮ್ಮಾರಗಟ್ಟೆ ಹಾಗೂ ತಕ್ಕನಹಳ್ಳಿಗೆ ನೀರು ತಲುಪಿಲ್ಲ. ಇದರಿಂದ ಕುಡಿಯುವ ನೀರು ಹಾಗೂ ರೈತರ ಬೆಳೆಗಳಿಗೆ ನೀರು ಸಿಗುತ್ತಿಲ್ಲ. ಆದ್ದರಿಂದ ಕೂಡಲೇ ರೈತರ ಮನವೊಲಿಸಿ, ಕೊನೆ ಭಾಗದ ರೈತರಿಗೂ ನೀರು ಸಿಗುವಂತೆ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದರು.

ತಹಸೀಲ್ದಾರ್ ಪುರಂದರ ಹೆಗ್ಡೆ, ನ್ಯಾಮತಿ ತಹಸೀಲ್ದಾರ್ ಫಿರೋಜ್ ಷಾ, ಸಾಸ್ವೇಹಳ್ಳಿ ನೀರಾವರಿ ಇಲಾಖೆಯ ಎಇಇ ರಾಜಕುಮಾರ್, ತಾಪಂ ಇಒ ರಾಘವೇಂದ್ರ, ಪುರಸಭಾ ಮುಖ್ಯಾಧಿಕಾರಿ ನಿರಂಜನಿ, ನ್ಯಾಮತಿ ಪಪಂ ಮುಖ್ಯಾಧಿಕಾರಿ ಗಣೇಶ್‍ ರಾವ್, ಲೋಕೋಪಯೋಗಿ ಇಲಾಖೆ ಎಇಇ ಕಣುಮಪ್ಪ, ಯುಟಿಪಿ. ಎ.ಇ.ಇ. ಮಂಜುನಾಥ್, ಬೆಸ್ಕಾಂ ಎಇಇ ಜಯಪ್ಪ, ನ್ಯಾಮತಿ ಬೆಸ್ಕಾಂ ಎಇಇ ಶ್ರೀನಿವಾಸ್ ನಾಯ್ಕ್, ಸಿಪಿಐ ಮುದ್ದುರಾಜ್, ನ್ಯಾಮತಿ ಸಿಪಿಐ ರವಿಕುಮಾರ್ ಕಂದಾಯ ಇಲಾಖೆಯ ಸಂತೋಷ್, ದಿನೇಶ್, ರವಿಕುಮಾರ್ ಹಾಗೂ ಇತರರು ಇದ್ದರು.

- - -

ಬಾಕ್ಸ್‌ ಚುನಾವಣಾ ಸೆಕ್ಟರ್ ಆಧಿಕಾರಿಗಳ ಸಭೆ

ನೀರಾವರಿ ಸಭೆ ನಂತರ ಚುನಾವಣಾ ಕರ್ತವ್ಯದ ಸೆಕ್ಟರ್ ಅಧಿಕಾರಿಗಳ ಸಭೆ ನಡೆಸಿದ ಎಸಿ ಅವರು, ಕುಂದುಕೊರತೆಗಳು, ಸಮಸ್ಯೆಗಳಿದ್ದರೆ ತಿಳಿಸಿ ಎಂದರು. ಆಗ ಸೆಕ್ಟರ್ ಆಧಿಕಾರಿಗಳಾಗಿರುವ ಹೆಚ್ಚಿನ ಉಪನ್ಯಾಸಕರು ತಮಗೆ ಉತ್ತರ ಪ್ರತಿಕೆ ಮೌಲ್ಯಮಾಪನ ಕೆಲಸ 8ರಿಂದ 10 ದಿನಗಳ ಕಾಲ ಇರುತ್ತದೆ ಎಂದರು. ಆಗ ಎಸಿ ಅವರು ಮಾತನಾಡಿ, ಪರೀಕ್ಷಾ ಉತ್ತರ ಪತ್ರಿಕೆಗಳ ಕೆಲಸ ಕೂಡ ಮುಖ್ಯವಾಗಿದೆ. ಚುನಾವಣಾ ಸಮಯದಲ್ಲಿ ಈ ಕೆಲಸದಿಂದ ಕೂಡ ಹಿಂಜರಿಯವಂತಿಲ್ಲ. ಮೌಲ್ಯಮಾಪಕರ ಕೆಲಸಕ್ಕೆ ಹೋಗಿ ಬನ್ನಿ, ಆದರೆ ಎಸ್‌ಎಸ್‌ಟಿ. ಎಫ್‌ಎಸ್‌ಟಿ ತಂಡಗಳು ಸೇರಿದಂತೆ ಇತರೆ ಚುನಾವಣಾಧಿಕರಿಗಳ ಜತೆ ಕೂಡ ನಿರಂತರ ಫೋನ್‌ ಸಂಪರ್ಕದಲ್ಲಿರಬೇಕು. ಏನೇ ಸಮಸ್ಯೆ ಬಂದಲ್ಲಿ ಗಮನಕ್ಕೆ ತನ್ನಿ ಎಂದು ಸೆಕ್ಟರ್ ಅಧಿಕಾರಿಗಳಿಗೆ ಸೂಚಿಸಿದರು.

- - -

ಕೋಟ್‌ ಅಕ್ರಮವಾಗಿ ನೀರು ಪಡೆಯುವವರು ಮನವೊಲಿಕೆ ಬಗ್ಗದಿದ್ದರೆ ಪಂಪ್‍ಸೆಟ್‍ಗಳ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ. ಚುನಾವಣೆ ಹಿನ್ನೆಲೆ ಕಾನೂನು ಸುವ್ಯವಸ್ಥೆ ಹಾಳಾಗಬಾರದು. ಆ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಬಂದೋಬಸ್ತ್ ಮಾಡಿ, ನಾಲೆಗಳು ಇರುವ ದಾರಿಯಲ್ಲಿ ಪೊಲೀಸ್ ಬೀಟ್ ಹಾಕಬೇಕು

- ಅಭಿಷೇಕ್‌, ಉಪವಿಭಾಗಾಧಿಕಾರಿ, ಹೊನ್ನಾಳಿ ತಾಲೂಕು

- - - -24ಎಚ್.ಎಲ್.ಐ1:

ಹೊನ್ನಾಳಿಯಲ್ಲಿ ಎಸಿ ಅಭಿಷೇಕ್‌ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು.