ನಗರ ವ್ಯಾಪ್ತಿಯಲ್ಲಿ ೨೨೦೦ ಗ್ರಾಪಂ ಅಕ್ರಮ ಖಾತೆಗಳು: ಒಂದು ವಾರದಲ್ಲಿ ಜಂಟಿ ಸರ್ವೇ ನಡೆಸಿ ಹಸ್ತಾಂತರ ಪ್ರಕ್ರಿಯೆ

| Published : Mar 28 2025, 12:35 AM IST

ನಗರ ವ್ಯಾಪ್ತಿಯಲ್ಲಿ ೨೨೦೦ ಗ್ರಾಪಂ ಅಕ್ರಮ ಖಾತೆಗಳು: ಒಂದು ವಾರದಲ್ಲಿ ಜಂಟಿ ಸರ್ವೇ ನಡೆಸಿ ಹಸ್ತಾಂತರ ಪ್ರಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆ ಅಧಿಕಾರಿಗಳ ಬಳಿ ನಗರಸಭೆಯ ಸರಹದ್ದಿನ ನಕ್ಷೆ ಇದೆ. ಗಡಿಯ ಅರಿವೂ ಇದೆ. ಪಂಚಾಯಿತಿ ಅಧಿಕಾರಿಗಳ ಬಳಿ ಸರಹದ್ದಿನ ನಕ್ಷೆ ಇಲ್ಲ. ಗಡಿಯ ಅರಿವೂ ಇಲ್ಲವೆಂದು ಹೇಳಲಾಗುತ್ತಿದೆ. ಒಮ್ಮೆ ಸರಹದ್ದು ಮತ್ತು ಗಡಿ ಗೊತ್ತಿದ್ದರೂ ಅದರ ಪ್ರಕಾರ ಮಾಡುವುದಕ್ಕೆ ಆಸಕ್ತಿ ತೋರಿರದ ಸಾಧ್ಯತೆಗಳೂ ಇವೆ. ಉದ್ದೇಶಪೂರ್ವಕವಾಗಿಯೇ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆರೋಪಗಳೂ ಕೇಳಿಬರುತ್ತಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರಸಭೆ ವ್ಯಾಪ್ತಿಗೆ ಸೇರಿದ ೨೨೦೦ಕ್ಕೂ ಹೆಚ್ಚು ಆಸ್ತಿಗಳನ್ನು ಗ್ರಾಮ ಪಂಚಾಯಿತಿಯವರು ಅಕ್ರಮವಾಗಿ ಖಾತೆ ಮಾಡಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಮುಂದಿನ ಒಂದು ವಾರದೊಳಗೆ ನಗರಸಭೆ ಅಧಿಕಾರಿಗಳು ಮತ್ತು ಪಂಚಾಯಿತಿ ಪಿಡಿಒಗಳು ಜಂಟಿ ಸರ್ವೇ ನಡೆಸಿ ನಗರಸಭೆಗೆ ಸೇರಿದ ಆಸ್ತಿಗಳ ಹಸ್ತಾಂತರ ಪ್ರಕ್ರಿಯೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಬುಧವಾರ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮತ್ತು ಆಯುಕ್ತೆ ಪಂಪಾಶ್ರೀ ನೇತೃತ್ವದಲ್ಲಿ ಬೂದನೂರು, ಬೇವಿನಹಳ್ಳಿ, ಇಂಡುವಾಳು, ಬೇಲೂರು, ಹಳುವಾಡಿ, ಮಂಡ್ಯ ಗ್ರಾಮಾಂತರ, ಸಾತನೂರು, ಉಮ್ಮಡಹಳ್ಳಿ, ಸಂತೆ ಕಸಲಗೆರೆ ಸೇರಿ ಒಂಬತ್ತು ಗ್ರಾಮ ಪಂಚಾಯಿತಿಗಳ ಪಿಡಿಒಗಳ ಸಭೆ ನಡೆಸಿ ತೀರ್ಮಾನಿಸಲಾಯಿತು.

ಮಂಡ್ಯ ಸುತ್ತಲಿನ ಒಂಬತ್ತು ಪಂಚಾಯಿತಿಗಳು ನಗರಸಭೆ ವ್ಯಾಪ್ತಿಗೆ ಒಳಪಟ್ಟಿರುವ ಸುಮಾರು ೨೨೦೦ಕ್ಕೂ ಹೆಚ್ಚು ಆಸ್ತಿಗಳನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆಸ್ತಿಗಳನ್ನು ಖಾತೆ ಮಾಡಿಕೊಡುವ ಸಮಯದಲ್ಲೂ ನಗರಸಭೆ ಅಧಿಕಾರಿಗಳನ್ನು ಸಂಪರ್ಕಿಸಿ ನಗರಸಭೆಯ ಸರಹದ್ದು, ನಕಾಶೆಯನ್ವಯ ಆಸ್ತಿಗಳನ್ನು ಸರಿಯಾದ ಕ್ರಮದಲ್ಲಿ ಗುರುತಿಸುವ ಪ್ರಕ್ರಿಯೆ ನಡೆಸಲಿಲ್ಲ. ಏಕಾಏಕಿ ಆಸ್ತಿಗಳನ್ನು ಖಾತೆ ಮಾಡಿಕೊಟ್ಟಿರುವುದು ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ ಎಂದು ತಿಳಿದುಬಂದಿದೆ.

ನಗರಸಭೆಯಲ್ಲಿ ಆಸ್ತಿ ಖಾತೆಯಾಗಬೇಕಾದರೆ ನಿವೇಶನದ ಅಲಿಗೇಷನ್, ಮುಡಾ ಅನುಮತಿ ಪತ್ರ ಸೇರಿದಂತೆ ಹಲವು ದಾಖಲಾತಿಗಳನ್ನು ಕೇಳುತ್ತಾರೆ. ಜೊತೆಗೆ ಒಂದು ಬಡಾವಣೆಯಲ್ಲಿ ನಿವೇಶನ ಅಥವಾ ಮನೆ ಖಾತೆಯಾಗಬೇಕಾದರೆ ಸಂಪೂರ್ಣ ವಿಳಾಸವನ್ನು ಕ್ರಮಬದ್ಧವಾಗಿ ನೀಡುವ ಅವಶ್ಯಕತೆ ಇದೆ. ಆದರೆ, ಪಂಚಾಯಿತಿಯಲ್ಲಿ ಖಾತೆ ಮಾಡುವುದಕ್ಕೆ ಕ್ರಯಪತ್ರವಿದ್ದರೆ ಸುಲಭವಾಗಿ ಖಾತೆ ಮಾಡಿಕೊಡುತ್ತಾರೆ. ಅಲ್ಲಿ ಮುಡಾ ಅನುಮತಿಯೂ ಬೇಕಿಲ್ಲ, ವಿಳಾಸದ ಅವಶ್ಯಕತೆಯೂ ಇಲ್ಲ. ಅವರು ಖಾತೆ, ಪಟ್ಟಾಪುಸ್ತಕದಲ್ಲಿ ಹೋಬಳಿ, ಪಂಚಾಯಿತಿ ಹೆಸರನ್ನು ನಮೂದು ಮಾಡುವರೇ ವಿನಃ ವಿಳಾಸವನ್ನು ಕೇಳುವುದೇ ಇಲ್ಲ. ಇದರೊಂದಿಗೆ ಪಂಚಾಯಿತಿ ಖಾತೆಯಲ್ಲಿರುವ ಮನೆ- ನಿವೇಶನಗಳಿಗೆ ತೆರಿಗೆಯೂ ಕಡಿಮೆ. ಹೀಗಾಗಿ ನಗರಸಭೆ ವ್ಯಾಪ್ತಿಯೊಳಗಿನ ಸಾವಿರಾರು ಆಸ್ತಿಗಳ ಖಾತೆಗಳು ಪಂಚಾಯಿತಿ ವ್ಯಾಪ್ತಿಯೊಳಗೆ ಸೇರಿಕೊಂಡಿರುವುದರಿಂದ ನಗರಸಭೆ ಆದಾಯದ ಮೇಲೆ ಹೊಡೆತ ಬಿದ್ದಿದೆ.

ಅಲ್ಲದೆ, ನಗರಸಭೆ ವತಿಯಿಂದ ಎ- ಖಾತೆ, ಬಿ- ಖಾತೆ ಆಂದೋಲನ ನಡೆಸುತ್ತಿರುವುದರಿಂದ ಗ್ರಾಪಂ ವ್ಯಾಪ್ತಿಯಲ್ಲಿರುವ ಆಸ್ತಿಗಳನ್ನು ಬಿ- ಖಾತೆ ಮಾಡಿಕೊಟ್ಟು ನಗರಸಭೆ ವ್ಯಾಪ್ತಿಗೆ ಒಳಪಡಿಸಿಕೊಂಡರೆ ತೆರಿಗೆ ರೂಪದಲ್ಲಿ ನಗರಸಭೆ ಖಜಾನೆಗೆ ಹಣ ಹರಿದುಬರಲಿದೆ. ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ನಗರಸಭೆ ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಹಲವು ಮೂಲಸೌಲಭ್ಯಗಳನ್ನು ಒದಗಿಸಿದೆ. ಅದಕ್ಕಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಗರಸಭೆ ಆಸ್ತಿಗಳನ್ನು ಹಸ್ತಾಂತರಿಸಿಕೊಳ್ಳುವುದಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ನಗರಸಭೆ ಖಾತೆ ಮಾಡುವುದಕ್ಕೆ ಆಸ್ತಿಗೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಒದಗಿಸಲಾಗದಿದ್ದವರು ಆ ವ್ಯಾಪ್ತಿಯ ಪಂಚಾಯಿತಿಗಳಿಂದ ಖಾತೆ ಮಾಡಿಸಿಕೊಂಡಿರುವ ಅನೇಕ ಪ್ರಕರಣಗಳಿವೆ. ನಗರಸಭೆ, ಮುಡಾ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಡುವಿನ ಸಂಪರ್ಕ ಕೊರತೆಯೂ ಇದಕ್ಕೆ ಕಾರಣವಾಗಿದೆ. ಪರಸ್ಪರ ಸಂಪರ್ಕ, ಸಮನ್ವಯತೆಯಿಂದ ಆಸ್ತಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಖಾತೆ ಮಾಡಿಕೊಡುವಲ್ಲಿ ಆಗಿರುವ ಲೋಪಗಳಿಂದ ನಗರಸಭೆ ವ್ಯಾಪ್ತಿಯ ಸಾಕಷ್ಟು ಆಸ್ತಿಗಳು ಪಂಚಾಯಿತಿಯೊಳಗೆ ಉಳಿದುಕೊಳ್ಳುವಂತಾಗಿದೆ.

ನಗರಸಭೆ ಅಧಿಕಾರಿಗಳ ಬಳಿ ನಗರಸಭೆಯ ಸರಹದ್ದಿನ ನಕ್ಷೆ ಇದೆ. ಗಡಿಯ ಅರಿವೂ ಇದೆ. ಪಂಚಾಯಿತಿ ಅಧಿಕಾರಿಗಳ ಬಳಿ ಸರಹದ್ದಿನ ನಕ್ಷೆ ಇಲ್ಲ. ಗಡಿಯ ಅರಿವೂ ಇಲ್ಲವೆಂದು ಹೇಳಲಾಗುತ್ತಿದೆ. ಒಮ್ಮೆ ಸರಹದ್ದು ಮತ್ತು ಗಡಿ ಗೊತ್ತಿದ್ದರೂ ಅದರ ಪ್ರಕಾರ ಮಾಡುವುದಕ್ಕೆ ಆಸಕ್ತಿ ತೋರಿರದ ಸಾಧ್ಯತೆಗಳೂ ಇವೆ. ಉದ್ದೇಶಪೂರ್ವಕವಾಗಿಯೇ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆರೋಪಗಳೂ ಕೇಳಿಬರುತ್ತಿವೆ.

ನಗರಸಭೆ ವ್ಯಾಪ್ತಿಯ ಆಸ್ತಿಗಳನ್ನೂ ಬಿ- ಖಾತೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಪಂಚಾಯಿತಿಯೊಳಗೆ ಸೇರಿರುವ ನಗರಸಭೆ ಆಸ್ತಿಗಳನ್ನು ನಿರ್ದಿಷ್ಟವಾಗಿ ಸರಹದ್ದು ಮತ್ತು ಗಡಿ ಗುರುತಿಸಿ ಅವುಗಳನ್ನು ಹಸ್ತಾಂತರ ಮಾಡಿಕೊಳ್ಳಲು ನಗರಸಭೆ ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜಂಟಿ ಸರ್ವೇಗೆ ಇಳಿಯಲಿದ್ದಾರೆ.

------

ಸರ್ಕಾರದ ಸುತ್ತೋಲೆಯಂತೆ ನಗರಸಭೆ ವ್ಯಾಪ್ತಿಯೊಳಗೆ ಬಿ- ಖಾತೆ ಮಾಡಬೇಕಿರುವುದರಿಂದ ಗಡಿ ಭಾಗದ ಪಂಚಾಯಿತಿಗಳು ನಗರಸಭೆಗೆ ಸೇರಿದ ಆಸ್ತಿಗಳನ್ನು ಖಾತೆ ಮಾಡಿವೆ. ಎಷ್ಟು ಆಸ್ತಿಗಳನ್ನು ಖಾತೆ ಮಾಡಿರುವುದಾಗಿ ಮಾಹಿತಿ ಕೇಳಿದ್ದೇವೆ. ಒಂದು ವಾರದೊಳಗೆ ಸಂಪೂರ್ಣ ಮಾಹಿತಿ ಕೊಡುವುದಾಗಿ ಹೇಳಿದ್ದಾರೆ. ಬಿ- ಖಾತೆ ವಿವರಣೆಯನ್ನು ಜಿಲ್ಲಾಧಿಕಾರಿಗಳೂ ಕೇಳಿದ್ದು, ಅವರಿಗೂ ನೀಡಬೇಕಿದೆ. ಈ ಖಾತೆಗಳು ಬಹಳ ಹಿಂದೆಯೇ ಆಗಿರುವುದರಿಂದ ಆಸ್ತಿಗಳನ್ನು ಸಮರ್ಪಕವಾಗಿ ವಿನಿಮಯ ಮಾಡಿಕೊಳ್ಳಲಾಗುವುದು. ಹಿಂದೆಲ್ಲಾ ಗಡಿ ಗುರುತಿಸಿರಲಿಲ್ಲ. ಸರ್ವೇ ನಂ., ಪಂಚಾಯಿತಿ ಎಲ್ಲೆಗಳ ಮೇಲೆ ಖಾತೆ ಮಾಡುತ್ತಿದ್ದರು. ಕ್ರಮಕ್ಕಿಂತ ಹೆಚ್ಚಾಗಿ ನಗರಸಭೆ ಮತ್ತು ಗ್ರಾಪಂ ಆಸ್ತಿಗಳ ನಡುವಿನ ಗೊಂದಲಕ್ಕೆ ಅಂತ್ಯಹಾಡಬೇಕಿದೆ.

- ಎಂ.ವಿ.ಪ್ರಕಾಶ್, ಅಧ್ಯಕ್ಷರು, ನಗರಸಭೆ