ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ನಗರದ ಗೃಹ ಸಂಪರ್ಕಗಳಿಗೆ ವಿಧಿಸಿರುವ ದರವನ್ನು ಪರಿಷ್ಕರಿಸಿರುವ ರಾಜ್ಯ ಸರ್ಕಾರ ₹೨೨೫ಗೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ಡಿಸೆಂಬರ್ ಮಾಹೆಯಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಹೇಳಿದರು.
ಕಳೆದ ಐದು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕುಡಿಯುವ ನೀರಿನ ದರ ಪರಿಷ್ಕರಣೆಯ ಬೇಡಿಕೆ ಈಡೇರಿಸಲಾಗಿದೆ. ಪ್ರಸ್ತುತ ಇರುವ ₹೨೮೨ ನಿಂದ ₹೨೨೫ ಗಳಿಗೆ ದರ ನಿಗದಿಪಡಿಸಿರುವುದಾಗಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸರ್ಕಾರದ ಆದೇಶಾನುಸಾರ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ಶುಲ್ಕವನ್ನು ಪರಿಗಣಿಸಿ ಕುಡಿಯುವ ನೀರಿನ ದರಗಳನ್ನು ಪರಿಷ್ಕರಿಸಿ ಜಾರಿಗೊಳಿಸಲಾಗುತ್ತಿದೆ. ಅದರಂತೆ ನಿರ್ವಹಣಾ ವೆಚ್ಚಾನುಸಾರ ೨೦೧೪-೧೫ರಿಂದ ೨೦೧೬-೧೭ ಹಾಗೂ ೨೦೧೭-೧೮ ರಿಂದ ೨೦೧೯-೨೦ರವರೆಗೆ ಪರಿಷ್ಕರಿಸಿ ೨೫.೬.೨೦೧೮ ರಲ್ಲಿ ಅನುಮೋದನೆ ಪಡೆದು ೨೧.೧.೨೦೧೯ರಂದು ವಿಶೇಷ ಸಭೆಯಲ್ಲಿ ನಗರಸಭೆ ಆಡಳಿತಾಧಿಕಾರಿ ಅನುಮೋದನೆ ಪಡೆಯಲಾಗಿತ್ತು. ೧.೪.೨೦೧೮ರಿಂದ ಕುಡಿಯುವ ನೀರಿಗೆ ₹೨೮೨ ನಿಗದಿಪಡಿಸಿ ಜಾರಿಗೊಳಿಸಲಾಗಿತ್ತು ಎಂದರು.
ಆ ನಂತರದಲ್ಲಿ ನೀರಿನ ದರ ಕಡಿಮೆ ಮಾಡುವಂತೆ ಸಾರ್ವಜನಿಕರು ಕೋರಿದ್ದರು. ನಗರದ ಜನರ ಕೋರಿಕೆಗೆ ಹಿಂದಿನ ಸರ್ಕಾರ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿತ್ತು. ಆನಂತರ ಮುಖ್ಯಮಂತ್ರಿಗಳು ಮಂಡ್ಯಕ್ಕೆ ಆಗಮಿಸಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕುಡಿಯುವ ನೀರಿನ ದರವನ್ನು ಇಳಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾಯರ್ಯದರ್ಶಿಗೆ ಸೂಚಿಸಸಿದ್ದರು. ನಂತರ ಬೆಳಗಾವಿಯಲ್ಲಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೀರಿನ ದರವನ್ನು ಮಾಸಿಕ ₹೨೨೫ಗಳಿಗೆ ಪರಿಷ್ಕರಿಸಲು ತೀರ್ಮಾನಿಸಲಾಯಿತು. ಇದರಿಂದ ಪ್ರತಿ ಮನೆಗೆ ₹೫೭ ಹಣ ಉಳಿತಾಯವಾಗಲಿದೆ ಎಂದು ವಿವರಿಸಿದರು.ಪ್ರಸ್ತುತ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಾಕಿ ₹೪೪,೫೧,೫೨,೧೬ ಇದ್ದು, ಅಸಲು ₹೨೭,೬೬,೮೦,೦೦೦ ಇದೆ. ಇದಕ್ಕೆ ₹೧೬,೮೯೧,೭೧,೯೩೧ ಬಡ್ಡಿ ವಿಧಿಸಲಾಗಿದೆ. ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ಕಳುಹಿಸಲಾಗಿದ್ದು, ಶೇ.೩೦ರಷ್ಟು ವಿನಾಯ್ತಿಯೊಂದಿಗೆ ಒನ್ ಟೈಮ್ ಸೆಟ್ಲ್‌ಮೆಂಟ್ ಮೂಲಕ ದರ ಪಾವತಿಗೆ ಅನುಕೂಲ ಮಾಡಿಕೊಡುವಂತೆ ಸರ್ಕಾರವನ್ನು ಕೋರಲಾಗಿದೆ. ಸರ್ಕಾರದಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರುವುದಾಗಿ ಹೇಳಿದರು.
ಅಭಿವೃದ್ಧಿಯಲ್ಲೂ ರಾಜಕಾರಣ:ನಗರದ ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನದಿಂದ ಶ್ರೀಗೌರಿಶಂಕರ ಕಲ್ಯಾಣ ಮಂಟಪದವರೆಗೆ ಸ್ವರ್ಣಸಂದ್ರದ ವಿರೋಧ ಪಕ್ಷದ ಗುತ್ತಿಗೆದಾರರೊಬ್ಬರಿಗೆ ಗುಂಡಿಮುಚ್ಚುವ ಕಾಮಗಾರಿ ನೀಡಲಾಗಿದೆ. ಶ್ರೀಮಹದೇಶ್ವರ ದೇವಸ್ಥಾನದಿಂದ ಶಿವಪುರ ರಸ್ತೆಯವರೆಗಿನ ರಸ್ತೆ ಅಭಿವೃದ್ಧಿ ಕೆಲಸವನ್ನೂ ವಿಪಕ್ಷದ ಗುತ್ತಿಗೆದಾರರಿಗೆ ನೀಡಿದ್ದರೂ ಕೆಲಸ ಮಾಡುವುದಕ್ಕೆ ಮುಂದಾಗುತ್ತಿಲ್ಲ. ಅಭಿವೃದ್ಧಿಯನ್ನು ಸಹಿಸದೆ ನನಗೆ ಜನರಿಂದ ಕೆಟ್ಟ ಹೆಸರು ಬರುವಂತೆ ಮಾಡಲು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೆಲಸ ಆರಂಭಿಸದ ಈ ಇಬ್ಬರೂ ಗುತ್ತಿಗೆದಾರರಿಗೆ ಈಗಾಗಲೇ ಎರಡು ಬಾರಿ ನೋಟಿಸ್ ನೀಡಲಾಗಿದೆ. ಈಗಲೂ ಅವರು ಕೆಲಸ ಆರಂಭಿಸದಿದ್ದರೆ ಮೂರನೇ ನೋಟಿಸ್ ಕೊಟ್ಟು ನಂತರ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.₹೩೩ ಕೋಟಿ ವೆಚ್ಚ:
ಈಗಾಗಲೇ ಅಮರಾವತಿ ಹೋಟೆಲ್‌ನಿಂದ ಜ್ಯೋತಿ ಇಂಟರ್‌ನ್ಯಾಷನಲ್ ಹೋಟೆಲ್‌ವರೆಗೆ ₹೩೩ ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ರೀತಿಯಲ್ಲಿ ರಸ್ತೆ, ವೃತ್ತಗಳು, ಫುಟ್‌ಪಾತ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ₹೫ ಕೋಟಿ ವೆಚ್ಚದಲ್ಲಿ ಕೆರೆಯಂಗಳದಲ್ಲಿ ಮಳೆ ನೀರು ನಿಲ್ಲದಂತೆ ರಿಟರ್ನಿಂಗ್ ವಾಲ್ ಅಳವಡಿಸಲಾಗುತ್ತದೆ. ನಗರದ ಬಲಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಪೂರಕವಾಗಿ ಸರ್ವೇ ಕಾರ್ಯ ನಡೆಸಲಾಗುವುದು. ಆ ನಂತರ ವರ್ತುಲ ರಸ್ತೆ ನಿರ್ಮಿಸುವುದಾಗಿ ತಿಳಿಸಿದರು.ಹೊಸ ಬೂದನೂರು ಗ್ರಾಮದಲ್ಲಿ ಹೊಯ್ಸಳರ ಕಾಲದ ಅಪರೂಪದ ಶ್ರೀಅನಂತ ಪದ್ಮನಾಭ ದೇವಾಲಯವಿದ್ದು, ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ₹೨೫ ಲಕ್ಷ ವೆಚ್ಚದಲ್ಲಿ ೨ ದಿನಗಳ ಕಾಲ ಬೂದನೂರು ಉತ್ಸವ ನಡೆಸುವುದಕ್ಕೆ ಚಾಲನೆ ನೀಡಲಾಗುವುದು. ಅದನ್ನು ನಿರಂತರವಾಗಿ ನಡೆಸಿಕೊಂಡು ಹೋಗುತ್ತೇವೆ. ಮುಂದಿನ ವರ್ಷದಿಂದಲೇ ವಿದ್ಯುಕ್ತ ಆರಂಭ ನೀಡುವುದಾಗಿ ತಿಳಿಸಿದರು.ಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಶಿವಪ್ರಕಾಶ್, ಶ್ರೀಧರ್, ನಹೀಂ, ಪೂರ್ಣಿಮಾ, ಜಾಕೀರ್ ಇದ್ದರು.‘ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ’ಈ ವರ್ಷ ಬರಪರಿಸ್ಥಿತಿ ಇರುವುದರಿಂದ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಡಿ.೩೧ರಂದು ನಾನು ಊರಿನಲ್ಲೇ ಇರುವುದಿಲ್ಲ. ಆದರೆ, ಅಭಿಮಾನಿಗಳು ಕಾನೂನಾತ್ಮಕವಾಗಿ ಅನುಮತಿ ಪಡೆದು ಫ್ಲೆಕ್ಸ್‌ಗಳನ್ನು ಅಳವಡಿಸಿದ್ದಾರೆ. ಅವುಗಳಲ್ಲಿ ಯಾರು ಅನುಮತಿ ಪಡೆದಿಲ್ಲವೋ ಅಂತಹ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.- ಶಾಸಕ ಪಿ.ರವಿಕುಮಾರ್, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರು
--------ಲೋಕಸಭೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಕೊರತೆ ಇಲ್ಲ: ಪಿ.ರವಿಕುಮಾರ್ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. ಈ ಬಾರಿ ಕ್ಷೇತ್ರದೊಳಗೆ ಕಾಂಗ್ರೆಸ್ ಗೆಲುವು ಶತಸ್ಸಿದ್ಧ ಎಂದು ಶಾಸಕ ಪಿ.ರವಿಕುಮಾರ್ ಖಚಿತವಾಗಿ ಹೇಳಿದರು.
ಮಾಜಿ ಸಂಸದೆ ರಮ್ಯಾ, ಶಾಂಭವಿ ಕೃಷ್ಣ, ಧನಲಕ್ಷ್ಮೀ ಚಲುವರಾಯಸ್ವಾಮಿ, ಡಾ.ಎಚ್.ಎನ್.ಕೃಷ್ಣ, ಕೀಲಾರ ರಾಧಾಕೃಷ್ಣರಂತಹವರು ಇದ್ದಾರೆ. ಜಿಲ್ಲೆಯಲ್ಲಿ ಪ್ರಬಲ ಸಂಘಟನೆ ಹೊಂದಿರುವ ಚಲುವರಾಯಸ್ವಾಮಿ ಅವರಿದ್ದಾರೆ. ಹಾಗಾಗಿ ಚಲುವರಾಯಸ್ವಾಮಿ ಕುಟುಂಬದವರು ನಿಂತರೆ ಗೆಲುವಿಗೆ ಅನುಕೂಲವಾಗಲಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಸುಮಲತಾ ಅವರು ಕಾಂಗ್ರೆಸ್ ಪಕ್ಷ ಸೇರಿದರೆ ಬೆಂಬಲಿಸುವಿರಾ ಎಂಬ ಪ್ರಶ್ನೆಗೆ, ಸದ್ಯ ಅವರು ಬಿಜೆಪಿಯಲ್ಲಿದ್ದಾರೆ. ಬಿಜೆಪಿ ಸೇರದಿದ್ದರೂ ಆ ಪಕ್ಷದ ಬೆಂಬಲಿಗರಾಗಿದ್ದಾರೆ. ಅವರು ಕಳೆದ ಚುನಾವಣೆಯಲ್ಲಿ ನನ್ನ ವಿರುದ್ಧವೇ ಮನೆ ಮನೆಗೆ ತೆರಳಿ ಮತ ಹಾಕದಂತೆ ಪ್ರಚಾರ ಮಾಡಿದ್ದರು. ಹಾಗಾಗಿ ನಾವು ಅವರಿಗೆ ಮನ್ನಣೆ ನೀಡುವುದಿಲ್ಲ ಎಂದರು.