ಸಾರಾಂಶ
ಶಿರಸಿ: ರಾಜ್ಯದ ಪ್ರತಿಷ್ಠಿತ ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕ್(ಕೆಡಿಸಿಸಿ ಬ್ಯಾಂಕ್) ೨೦೨೩- ೨೪ನೇ ಸಾಲಿನಲ್ಲಿ ₹೨೩.೦೪ ಕೋಟಿ ನಿವ್ವಳ ಲಾಭ ಗಳಿಸಿದ್ದು, ಎನ್‌ಪಿಎ ಪ್ರಮಾಣ ಶೇ. ೨.೦೧ರಷ್ಟಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕ್ ೧೦೪ ವರ್ಷ ಪೂರೈಸಿ ೧೦೫ನೇ ವರ್ಷಕ್ಕೆ ಕಾಲಿಡುತ್ತಿದೆ. ಇಂತಹ ಸಂದರ್ಭದಲ್ಲಿ ಲಾಭ ಗಳಿಕೆ ಹೆಚ್ಚಾಗಿದ್ದು, ಹೊಸದಾಗಿ ೨೧ ಶಾಖೆಗಳನ್ನು ಆರಂಭಿಸಲಾಗಿದೆ. ಬ್ಯಾಂಕಿನ ಷೇರು ಬಂಡವಾಳ ₹೧೧೦.೩೯ ಕೋಟಿಗಳಿಂದ ₹೧೩೧.೨೮ ಕೋಟಿಗೆ, ನಿಧಿಗಳು ₹೨೪೨.೩೧ ಕೋಟಿಗಳಿಂದ ₹೩೨೪.೦೮ ಕೋಟಿಗೆ ಹಾಗೂ ಠೇವುಗಳು ₹೩೦೫೭.೦೮ ಕೋಟಿಗಳಿಂದ ₹೩೩೩೦.೪೧ ಕೋಟಿಗೆ ಏರಿಕೆಯಾಗಿದೆ. ಒಟ್ಟೂ ಆದಾಯ ₹೩೯೨.೧೦ ಕೋಟಿ ಆಗಿದೆ. ₹೩೦೯೭.೯೫ ಕೋಟಿ ಸಾಲಬಾಕಿ ಇದೆ. ದುಡಿಯುವ ಬಂಡವಾಳ ₹೪೫೧೫.೮೧ ಕೋಟಿ ತಲುಪಿದೆ ಎಂದರು. ಕೆಡಿಸಿಸಿ ಬ್ಯಾಂಕ್ ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ರೈತರಿಗೆ ಎಲ್ಲ ವಿಧದ ಕೃಷಿ ಸಾಲ ಪೂರೈಸುತ್ತಲಿದ್ದು, ಕಳೆದ ೧೮ ವರ್ಷಗಳಿಂದ ನಬಾರ್ಡ್‌ನವರ ಮಾರ್ಗಸೂಚಿ ಮೇರಿಗೆ ಕೃಷಿ ಭೂಮಿ ಖರೀದಿ ಬಗ್ಗೆ ವ್ಯವಸಾಯ ಸಾಲದಡಿಯಲ್ಲಿ ಮಾಧ್ಯಮಿಕ ಸಾಲ ನೀಡಲಾಗುತ್ತಿದೆ. ಬ್ಯಾಂಕಿನ ೭೪ ಶಾಖೆಗಳು ಗಣಕೀಕರಣಗೊಂಡಿದೆ. ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿಯಲ್ಲಿ ಗ್ರಾಹಕರಿಗೆ ತ್ವರಿತವಾಗಿ ಸೇವೆಯನ್ನು ಒದಗಿಸಲಾಗುತ್ತಿದೆ ಎಂದರು.ಸಾಲ ಸೌಲಭ್ಯ: ಬ್ಯಾಂಕಿನಿಂದ ೨೦೨೩- ೨೪ನೇ ಸಾಲಿನಲ್ಲಿ ₹೨೮೫೫.೬೪ ಕೋಟಿ ಸಾಲ ವಿತರಿಸಲಾಗಿದೆ. ಅದರಲ್ಲಿ ೨೦೨೪ ಮಾ. ೩೧ಕ್ಕೆ ಸಹಕಾರಿ ಸಂಘಗಳಿಂದ ₹೧೫೩೫.೦೧ ಕೋಟಿ ಸಾಲ ಬರಬೇಕಿದ್ದು, ₹೧೫೬೨.೯೩ ಇತರರಿಂದ ಬರತಕ್ಕ ಬಾಕಿಯಿದೆ ಎಂದು ಮಾಹಿತಿ ನೀಡಿದ ಹೆಬ್ಬಾರ, ಕೇಂದ್ರ ಸರ್ಕಾರ, ನಬಾರ್ಡ್ ಸೂಚಿಸಿದ ಮಾರ್ಗದರ್ಶಿಕೆಯಂತೆ ಸ್ವ ಸಹಾಯ ಸಂಘಗಳ ಸ್ಥಾಪನೆ, ಈ ಯೋಜನೆ ಅಡಿಯಲ್ಲಿ ಸಾಲ ನೀಡಿಕೆ ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಆದ್ಯತೆ ನೀಡಿದೆ ಎಂದರು.
ಸಹಕಾರಿ ಸಂಘಗಳಲ್ಲಿನ ಅಕ್ರಮದ ಕುರಿತು ಪ್ರತಿಕ್ರಿಯಿಸಿದ ಹೆಬ್ಬಾರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಳ್ಳೆಯ ಸಹಕಾರಿ ಸಂಘಗಳಲ್ಲಿ ಅವ್ಯವಹಾರ ನಡೆದಿದೆ. ಅಲ್ಲಿಯ ಕಾರ್ಯದರ್ಶಿಗಳ ತಪ್ಪಿನಿಂದಾಗಿ ಹಾಗೂ ಅಧಿಕಾರಿಗಳು ಕಾರ್ಯದರ್ಶಿ ಮೇಲೆ ಇಟ್ಟಿರುವ ನಂಬಿಕೆಯಿಂದ ಅವ್ಯವಹಾರ ನಡೆದಿದೆ ಎಂದ ಮಾಹಿತಿ ಲಭ್ಯವಾಗಿದೆ. ಅಂಥವರ ಮೇಲೆ ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ ಎಂದರು. ಹೊಸದಾಗಿ ಖರೀದಿ ಆಗುವ ಕಾರುಗಳ ಪರಿಶೀಲನೆಗೆ ಏಜೆನ್ಸಿ ನೇಮಕ ಮಾಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕರಾದ ಎಸ್.ಎಲ್. ಘೋಟ್ನೇಕರ, ಜಿ.ಆರ್. ಹೆಗಡೆ ಸೋಂದಾ, ಆರ್.ಎಂ. ಹೆಗಡೆ ಬಾಳೇಸರ, ರಾಘವೇಂದ್ರ ಶಾಸ್ತ್ರಿ, ಎಲ್.ಟಿ. ಪಾಟೀಲ್, ಕೃಷ್ಣ ದೇಸಾಯಿ, ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ರಾಮಕೃಷ್ಣ ಹೆಗಡೆ ಕಡವೆ, ತಿಮ್ಮಯ್ಯ ಹೆಗಡೆ, ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ ಸೇರಿದಂತೆ ಮತ್ತಿತರರು ಇದ್ದರು.