ಮತದಾನಕ್ಕೆ ಸವದತ್ತಿ ಕ್ಷೇತ್ರದಲ್ಲಿ 233 ಮತಗಟ್ಟೆ

| Published : May 07 2024, 01:03 AM IST

ಮತದಾನಕ್ಕೆ ಸವದತ್ತಿ ಕ್ಷೇತ್ರದಲ್ಲಿ 233 ಮತಗಟ್ಟೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಸವದತ್ತಿ: ಲೋಕಸಭೆ ಚುನಾವಣೆ ಮತದಾನ ಹಿನ್ನಲೆಯಲ್ಲಿ ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ಮೇ 7 ಮಂಗಳವಾರ ನಡೆಯುವ ಮತದಾನ ಪ್ರಕ್ರಿಯೆಗೆ ಸೂಕ್ತ ಸಿಬ್ಬಂದಿಯನ್ನು ನಿಯೋಜಿಸಿ ಎಲ್ಲೆಡೆ ಸಂಪೂರ್ಣ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ ಎಂದು ಸಹಾಯಕ ಚುನಾವಾಣಾಧಿಕಾರಿ ಡಾ.ರಾಜೀವ ಕೂಲೇರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸವದತ್ತಿ:

ಲೋಕಸಭೆ ಚುನಾವಣೆ ಮತದಾನ ಹಿನ್ನಲೆಯಲ್ಲಿ ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ಮೇ 7 ಮಂಗಳವಾರ ನಡೆಯುವ ಮತದಾನ ಪ್ರಕ್ರಿಯೆಗೆ ಸೂಕ್ತ ಸಿಬ್ಬಂದಿಯನ್ನು ನಿಯೋಜಿಸಿ ಎಲ್ಲೆಡೆ ಸಂಪೂರ್ಣ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ ಎಂದು ಸಹಾಯಕ ಚುನಾವಾಣಾಧಿಕಾರಿ ಡಾ.ರಾಜೀವ ಕೂಲೇರ ತಿಳಿಸಿದ್ದಾರೆ.

ಜಿಲ್ಲೆಯ ಖಾನಾಪುರ, ಬೆಳಗಾವಿ, ಕಿತ್ತೂರ, ಬೈಲಹೊಂಗಲ, ಗೋಕಾಕ, ರಾಮದುರ್ಗ, ಮೂಡಲಗಿ ತಾಲೂಕಿನ ವಿವಿಧ ಇಲಾಖೆಯ ಸುಮಾರು 1100ಕ್ಕೂ ಅಧಿಕ ನೌಕರರು 233 ಮತಗಟ್ಟೆಗಳಲ್ಲಿ ಚುನಾವಣೆ ಕಾರ್ಯನಿರ್ವಹಿಸಲು ಸವದತ್ತಿಗೆ ಆಗಮಿಸಿದ್ದಾರೆ. ಮತಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಮತದಾನ ಪ್ರಕ್ರಿಯೆ ನಡೆಸಲು 1 ಡಿಎಸ್‌ಪಿ, 3 ಸಿಪಿಐ, 4 ಪಿಎಸ್‌ಐ, 23 ಎಎಸ್ಐ, 157 ಮಹಿಳಾ ಮತ್ತು ಪುರುಷ ಪೊಲೀಸ್ ಸಿಬ್ಬಂದಿ, 108 ಗೃಹರಕ್ಷಕ ದಳದ ಸಿಬ್ಬಂದಿ ಸೇರಿದಂತೆ ಒಟ್ಟು 338 ಸಿಬ್ಬಂದಿ ಸೂಕ್ತ ಬಂದೋಬಸ್ತ್‌ ವ್ಯವಸ್ಥೆಗೆ ಸನ್ನದ್ದರಾಗಿದ್ದಾರೆ. ಸೋಮವಾರ ಮಧ್ಯಾಹ್ನ 2 ಗಂಟೆಯ ನಂತರ ಎಸ್.ಕೆ.ಹೈಸ್ಕೂಲ್ ಮೈದಾನದಿಂದ ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ಚುನಾವಣಾ ಕಾರ್ಯ ನಿರ್ವಹಿಸಲು ಎಲ್ಲ ಸಿಬ್ಬಂದಿ ಸರ್ಕಾರಿ ಬಸ್ ಮತ್ತು ಜೀಪ್‌ಗಳ ಮೂಲಕ ತಮಗೆ ನಿಯೋಜಿಸಿರುವ ಮತಗಟ್ಟೆಗಳಿಗೆ ಕಳುಹಿಸಲಾಗಿದೆ. 29 ಸಾರಿಗೆ ಬಸ್‌ಗಳನ್ನು ಹಾಗೂ ವಿವಿಧ ಇಲಾಖೆಯ ವಾಹನಗಳನ್ನು ಮತ್ತು ಖಾಸಗಿ ಕ್ರುಸರ್ ವಾಹನಗಳು ಸೇರಿದಂತೆ ಒಟ್ಟು 73 ವಾಹನಗಳನ್ನು ಚುನಾವಣಾ ಪ್ರಕ್ರಿಯೆಗೆ ಬಳಸಿಕೊಳ್ಳಲಾಗುತ್ತಿದೆ.ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ 1,02116 ಪುರುಷ ಮತದಾರರು ಹಾಗೂ 1,02518 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,04639 ಮತದಾರರಿದ್ದಾರೆ. 233 ಮತಗಟ್ಟೆಗಳಲ್ಲಿ 12 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ. ಬಿಸಿಲಿನ ತಾಪಮಾನ ಹೆಚ್ಚಾಗಿದ್ದರಿಂದ ಎಸ್.ಕೆ.ಹೈಸ್ಕೂಲ್‌ ಮತ್ತು ಬಿ.ಬಿ.ಮಮದಾಪುರ ಬಾಲಕಿಯರ ಶಾಲೆಯ ಎಲ್ಲ ಶಾಲಾ ಕೊಠಡಿಗಳನ್ನು ಚುನಾವಣಾ ಸಿಬ್ಬಂದಿ ತಮ್ಮ ಚುನಾವಣಾ ಮತಯಂತ್ರ ಮತ್ತು ಸಾಮಗ್ರಿಗಳನ್ನು ಹೊಂದಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಮತ್ತು ಗೃಹ ರಕ್ಷದಳದ ಸಾಕಷ್ಟು ಸಿಬ್ಬಂದಿಯನ್ನು ಕಾರ್ಯನಿರ್ವಹಿಸಲು ನಿಯೋಜಿಸಲಾಗಿದೆ ಎಂದು ಸಿಪಿಐ ಸುರೇಶ.ಬಿ. ಹಾಗೂ ಪಿಎಸ್‌ಐ ಆನಂದ ಕ್ಯಾರಕಟ್ಟಿ ಮಾಹಿತಿ ನೀಡಿದರು.ಸಿಬ್ಬಂದಿ ಆಸ್ಪತ್ರೆಗೆ ದಾಖಲು:

ಚುನಾವಣೆ ಕರ್ತವ್ಯಕ್ಕೆ ಆಗಮಿಸಿದ್ದ ಗೋಕಾಕ ತಾಲೂಕಿನ ಕೌಜಲಗಿಯ ಮಾರುತಿ ಸಿದ್ದಾಪುರ ಎಂಬ ವ್ಯಕ್ತಿಗೆ ತೀವ್ರ ರಕ್ತದೊತ್ತಡ ಮತ್ತು ಮೂತ್ರಕೋಶದ ಕಲ್ಲುಗಳ ತೊಂದರೆ ಕಾಣಿಸಿಕೊಂಡಿದ್ದು, ಆತನಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀಪಾದ ಸಬನಿಶ ತಿಳಿಸಿದ್ದಾರೆ.ಮಂಗಳವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಮತದಾನದ ಸಮಯದಲ್ಲಿ ಸಾರ್ವಜನಿಕರು ಶಾಂತಿಯುತವಾಗಿ ನಡೆದುಕೊಳ್ಳಬೇಕೆಂದು ಸಹಾಯಕ ಚುನಾವಣಾಧಿಕಾರಿ ಡಾ.ರಾಜೀವ ಕೂಲೇರ ಹಾಗೂ ತಹಸೀಲ್ದಾರ್‌ ಮಧುಸೂದನ ಕುಲಕರ್ಣಿ ಮನವಿ ಮಾಡಿದ್ದಾರೆ.