ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ 2022- 2023ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹33 ಕೋಟಿ ಅಧಿಕ ಆರ್ಥಿಕ ವ್ಯವಹಾರ ನಡೆಸಿ, ಠೇವಣಿಗಳ ಮೇಲೆ ಬಡ್ಡಿಗಾಗಿ ₹38 ಲಕ್ಷ ಹಾಗೂ ಕರಡು ಸಾಲದ ನಿಧಿಗಾಗಿ ₹5 ಲಕ್ಷ ಕಾಯ್ದಿರಿಸಿ, ₹24.23 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಆರ್.ಎಂ ಘಾಸಿ ಹೇಳಿದರು.ಪಟ್ಟಣದ ಸುದ್ದಿಮನೆಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2016 ರಿಂದ ಸಂಘದಲ್ಲಿ ನಗದುರಹಿತ ವ್ಯವಹಾರವನ್ನು ಆರಂಭಿಸಲಾಗಿದೆ. ಇದರೊಂದಿಗೆ ಆಡಳಿತಾತ್ಮಕ ಮತ್ತು ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಅಭಿವೃದ್ಧಿಯತ್ತ ಸಾಗಿದೆ. ಷೇರುದಾರ ಸದಸ್ಯರಿಂದ ಷೇರು ಸಂಗ್ರಹ ನಿರಂತರ ಠೇವು, ಆವರ್ತಕ ಠೇವು ಮುದ್ದತ್ತು ಠೇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಲಾಗುತ್ತಿದೆ. ಸಾಲಗಾರ ಸದಸ್ಯರಿಂದ ಶೇ. 99% ರಷ್ಟು ಸಾಲ ಮರುಪಾವತಿ ಆಗುತ್ತಿದೆ. ಇದರಿಂದಾಗಿ ಸಂಘವು ಪ್ರತಿ ವರ್ಷ ಅಭಿವೃದ್ಧಿ ಹೊಂದುತ್ತಿದೆ ಎಂದು ತಿಳಿಸಿದರು.
2016 ರಲ್ಲಿ ಷೇರುದಾರ ಸದಸ್ಯರಿಗೆ ₹1 ಲಕ್ಷದವರೆಗೆ ಸಾಲ ನೀಡುತ್ತಿದೆ. ಈಗ ಷೇರುದಾರ ಸದಸ್ಯರಿಗೆ ವೇತನ ಆಧಾರಿತ ಸಾಲವನ್ನು ₹10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಸಂಘದಿಂದ ಶಿಕ್ಷಕರ ದಿನಾಚರಣೆಗೆ ಧನಸಹಾಯ, ತಾಲೂಕುಮಟ್ಟದ 14 ವರ್ಷದೊಳಗಿನ ಮಕ್ಕಳ ಕ್ರೀಡಾಕೂಟಕ್ಕೆ ಬಹುಮಾನ ಪ್ರಾಯೋಜಕತ್ವವನ್ನು ಸಂಘವು ವಹಿಸಿಕೊಂಡಿದೆ ಎಂದರು.ಸಂಘದ ಶಾಖೆಯನ್ನು ಶಿರಾಳಕೊಪ್ಪ ಪಟ್ಟಣದಲ್ಲಿ ತೆರೆಯಲಾಗಿದ್ದು, ಉಡುಗಣಿ ಮತ್ತು ತಾಳಗುಂದ ಹೋಬಳಿ ಸದಸ್ಯರಿಗೆ ಶೀಘ್ರ ಸಾಲ ಹಾಗೂ ಇತರೆ ಸೌಲಭ್ಯಗಳನ್ನು ತ್ವರಿತವಾಗಿ ದೊರಕಿಸಿಕೊಡಲು ಸಾಧ್ಯವಾಗುತ್ತಿದೆ. ಮುಂದಿನ ದಿನದಲ್ಲಿ ಎಲ್ಲ ರೀತಿಯ ವ್ಯವಹಾರವನ್ನು ಆನ್‌ಲೈನ್ ವ್ಯವಸ್ಥೆಗೆ ತರುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
2022- 2023ನೇ ಸಾಲಿನ ಷೇರುದಾರ ಸದಸ್ಯರಿಗೆ ಶೇ.8ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದೆ. ಎಲ್ಲ ಸದಸ್ಯರು ವೇತನ ಪಡೆಯುವ ಬ್ಯಾಂಕ್ ಖಾತೆಗೆ ನೇರವಾಗಿ ಲಾಭಾಂಶ ಜಮಾ ಮಾಡಲಾಗುವುದು. ನಿವೃತ್ತ, ವರ್ಗಾವಣೆಗೊಂಡ ಹಾಗೂ ಮರಣ ಹೊಂದಿದ ಶಿಕ್ಷಕ ಷೇರುದಾರರಿಗೆ ಲಾಭಾಂಶವನ್ನು ಚೆಕ್ ಮೂಲಕ ಅಥವಾ ಸದಸ್ಯರು ನೀಡಿದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಇಂತಹ ಸದಸ್ಯರು ಖುದ್ದು ಕಚೇರಿಗೆ ಆಧಾರ್ ಕಾರ್ಡ್ ನಕಲು ಪ್ರತಿ ಹಾಗೂ ಬ್ಯಾಂಕ್ ಪುಸ್ತಕದ ನಕಲು ಪ್ರತಿಯನ್ನು ನ.30 ರೊಳಗಾಗಿ ಸಲ್ಲಿಸುವಂತೆ ತಿಳಿಸಿದರು.ತಾಲೂಕಿನ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ 950 ಶಿಕ್ಷಕರಲ್ಲಿ 800 ಶಿಕ್ಷಕರು ಸಂಘದ ಸದಸ್ಯರಾಗಿದ್ದು, ಪ್ರತಿಯೊಬ್ಬ ಷೇರುದಾರ ಸದಸ್ಯರಿಗೆ ನ್ಯಾಯಯುತ ಆರ್ಥಿಕ ಸೌಲಭ್ಯ ಹಾಗೂ ಸೇವಾ ಕಾರ್ಯ ಮಾಡಲು ಸಂಘ ಬದ್ಧವಾಗಿದೆ. ಸಂಘದ ಅಭಿವೃದ್ಧಿಗೆ ಷೇರುದಾರರು ಪೂರಕವಾಗಿ ಸಹಕರಿಸುವಂತೆ ವಿನಂತಿಸಿಕೊಂಡರು.
ಕಾರ್ಯದರ್ಶಿ ಗದಿಗೆಪ್ಪ ಸಾಹುಕಾರ್ ಮಾತನಾಡಿ, ಸಂಘದ ಲಾಭಾಂಶದಲ್ಲಿ ₹8 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳನ್ನು ಎಲ್ಲ ಸದಸ್ಯರಿಗೆ ವಿತರಿಸಲಾಗಿದೆ. ಸಾಲದ ಬಡ್ಡಿಯನ್ನು ಶೇ.13ಕ್ಕೆ ಕಡಿತಗೊಳಿಸಲಾಗಿದೆ. ಷೇರಿನ ಸಾಲಕ್ಕೆ ₹5 ಸಾವಿರ ಮಾತ್ರ ಭದ್ರತಾ ಠೇವಣಿಯಾಗಿ ಪಡೆಯಲಾಗುತ್ತಿದೆ. ಸರ್ವ ಸದಸ್ಯರಿಗೆ ಸಂಘ ಆರ್ಥಿಕ ಭದ್ರತೆ ಕಲ್ಪಿಸುತ್ತಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಉಮೇಶಪ್ಪ ಯು., ಗೌರವಾಧ್ಯಕ್ಷ ಹುತ್ತೇಶ್ ಕೆ.ಎಚ್., ಕಾರ್ಯದರ್ಶಿ ಗದಿಗಪ್ಪ ಸಾಹುಕಾರ್, ಕಾರ್ಯಾಧ್ಯಕ್ಷ ವೈ.ಎಂ. ದೇವರಾಜ್, ಖಜಾಂಚಿ ಸುಭಾಷ್ ಎಚ್.ಎನ್., ಆಂತರಿಕ ಲೆಕ್ಕ ಪರಿಶೋಧಕರಾದ ಲಕ್ಷ್ಮವ್ವ ಸುಣಗಾರ್ ಉಪಸ್ಥಿತರಿದ್ದರು.
- - - -4ಕೆಎಸ್.ಕೆಪಿ1: ಶಿಕಾರಿಪುರ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಆರ್.ಎಂ. ಘಾಸಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.