ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭಾನುವಾರ ಮಳೆಯಿಂದ ಜಿಲ್ಲೆಯಲ್ಲಿ ಹಾನಿಗೊಳಗಾಗಿರುವ, ಕಡಲುಕೊರೆತ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಮಳೆಯಿಂದ ಆಗಿರುವ ನಷ್ಟ-ಹಾನಿ ಬಗ್ಗೆ ಮಾಹಿತಿ ಪಡೆದುಕೊಂಡರು.ಇಲ್ಲಿನ ಪಡುತೋನ್ಸೆ ಪಂಚಾಯಿತಿ ವ್ಯಾಪ್ತಿಯಲ್ಲಿ ಕಡಲುಕೊರೆತ ಸಂಭವಿಸುತ್ತಿರುವ ಗುಜ್ಜರಬೆಟ್ಟು ಗ್ರಾಮಕ್ಕೆ ಭೇಟಿ ನೀಡಿ, ಹಾನಿಯನ್ನು ವೀಕ್ಷಿಸಿದರು. ಮಳೆಯಿಂದ ಆಗಿರುವ ನಷ್ಟದ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಮಳೆಯಿಂದಾಗುವ ಅನಾಹುತ ತಡೆಯಲು ಉಡುಪಿ ಜಿಲ್ಲಾಡಳಿತ ಮತ್ತು ಸರ್ಕಾರ 24 ಗಂಟೆಯೂ ಎಚ್ಚರದಿಂದ ಕೆಲಸ ಮಾಡುತ್ತಿವೆ. ಮುಖ್ಯವಾಗಿ ಪ್ರಾಣ ಹಾನಿ ಆಗಬಾರದು ಎಂದು ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ. ಮಳೆ ಪರಿಸ್ಥಿತಿ ಕುರಿತು ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದರು.
25 ದಿನಗಳ ಹಿಂದೆಯೇ ಜಿಲ್ಲಾ ಮಟ್ಟದ ಮುಂಜಾಗ್ರತಾ ಸಭೆ ನಡೆಸಿದ್ದೆ. ಮಳೆ ಗಾಳಿಗೆ ಬೀಳುವ ಹಂತದಲ್ಲಿರುವ ಮರಗಳನ್ನು ಕಡಿಯುವಂತೆ ಸೂಚಿಸಿದ್ದೆ. ಅರಣ್ಯ ಇಲಾಖೆಯವರು ಸುಮಾರು 500- 600 ಮರಗಳನ್ನು ತೆರವು ಮಾಡಿದ್ದಾರೆ. ಶಾಲೆಗಳ ಸಮೀಪದಲ್ಲಿರುವ ವಿದ್ಯುತ್ ತಂತಿಗಳನ್ನು ಕೂಡಾ ಸೂಚನೆಯಂತೆ ಮೆಸ್ಕಾಂನವರು ತೆರವು ಮಾಡಿದ್ದಾರೆ ಎಂದರು.ನಗರದಲ್ಲಿ ಚರಂಡಿಯ ಸಮಸ್ಯೆ ಇತ್ತು, ಅದನ್ನು ಸ್ವಚ್ಛಗೊಳಿಸಿದ್ದಾರೆ. ಕಾಲು ಸಂಕಗಳ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ. ಜಿಲ್ಲಾಡಳಿತದಿಂದ ಹೆಲ್ಪ್ ಲೈನ್ ತೆರೆಯಲಾಗಿದೆ. ಮಳೆ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡುವ ವಿಚಾರದಲ್ಲಿ ಯಾವುದೇ ತಾರತಮ್ಯ ಆಗಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದರು.
ಬೈಂದೂರು ಮಾಜಿ ಶಾಸಕ ಗೋಪಾಲ್ ಪೂಜಾರಿ, ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಎಸ್ಪಿ ಡಾ.ಕೆ. ಅರುಣ್, ಜಿಪಂ ಸಿಇಒ ಪ್ರತೀಕ್ ಬಯಲ್, ಕುಂದಾಪುರ ಸಹಾಯಕ ಆಯುಕ್ತೆ ಎಸ್.ಆರ್. ರಶ್ಮಿ, ಡಿಎಫ್‌ಒ ಗಣಪತಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು......................ನನ್ನ ಅವಶ್ಯಕತೆ ಇದ್ದಾಗ ಬರುತ್ತೇನೆ: ಸಚಿವೆ
ಉಸ್ತುವಾರಿ ಸಚಿವರು ಉಡುಪಿಯಲ್ಲಿ ಪ್ರವಾಹ ಬಂದರೂ ಬರುತ್ತಿಲ್ಲ ಎಂಬ ಸಾರ್ವಜನಿಕರ ಅಸಮಾಧಾನಕ್ಕೆ ಉತ್ತರಿಸಿದ ಸಚಿವೆ, ಉಡುಪಿಯಲ್ಲಿ ಇದ್ದು ನೆರೆಹಾನಿ ನೋಡುವಂತೆ ಜನರ ಬೇಡಿಕೆ ಒಳ್ಳೆಯದೆ, ಇಲ್ಲೇ ಮನೆ ಮಾಡಿರಲು ತಯಾರಿದ್ದೇನೆ, ಆದರೆ ನನಗೆ ರಾಜ್ಯದ ಜವಾಬ್ದಾರಿ ಇದೆ, ಸದನ ನಡೆಯುತ್ತಿದೆ, ಇವತ್ತು ಭಾನುವಾರ ರಜೆ ಇದ್ದಾಗಲೂ ಬಂದಿದ್ದೇನೆ. ನನ್ನ ಅವಶ್ಯಕತೆ ಇದ್ದಾಗ ಇಲ್ಲಿಗೆ ಬರುತ್ತೇನೆ ಎಂದರು.-------------
ದೂರದಿಂಲೇ ಗುಡ್ಡ ಕುಸಿತ ವೀಕ್ಷಿಸಿ ಹಿಂತೆರಳಿದ ಸಚಿವೆ!ಕನ್ನಡಪ್ರಭ ವಾರ್ತೆ ಬೈಂದೂರುಇಲ್ಲಿನ ರಾ.ಹೆ.ಯಲ್ಲಿ ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿರುವ ಸೋಮೇಶ್ವರದ ಗುಡ್ಡ ಕುಸಿತ ಪ್ರದೇಶವನ್ನು ದೂರದಿಂದಲೇ ವೀಕ್ಷಿಸಿ ಹಿಂತೆರಳಿದ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಡ್ಡ ಕುಸಿತ ಪ್ರದೇಶದ ವೀಕ್ಷಣೆಗೆ ಸಚಿವೆ ಬರುತ್ತಾರೆ ಎಂದು ಗುಡ್ಡದ ಬುಡದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ಕಾಯುತ್ತಿದ್ದರು. ಇಲ್ಲಿನ ಕಡಲ್ಕೊರೆತ ಸಂಭವಿಸುತ್ತಿರುವ ಬೀಚ್‌ಗೆ ಭೇಟಿ ನೀಡಿದ ಸಚಿವೆ, ಅಲ್ಲಿಂದಲೇ ಅನತಿ ದೂರದಲ್ಲಿರುವ ಗುಡ್ಡ ವೀಕ್ಷಿಸಿ ಹಿಂತೆರಳಿದರು. ಅವರೊಂದಿಗೆ ಸಮಸ್ಯೆ ಹೇಳಿಕೊಳ್ಳಲು ಕಾಯುತ್ತಿದ್ದ ಗ್ರಾಮಸ್ಥರು ಗುಡ್ಡದ ಬುಡದಲ್ಲಿಯೇ ಬಾಕಿಯಾದರು.ಇಷ್ಟು ದಿನಗಳಿಂದ ಮಳೆಯಿಂದ ಹಾನಿಯಾಗುತ್ತಿದ್ದರೂ ಬಾರದ ಸಚಿವೆ ಇವತ್ತು ಬೀಚ್, ದೇವಸ್ಥಾನಗಳಿಗೆ ಭೇಟಿ ನೀಡಲು ಬಂದದ್ದಾ? ಅಥವಾ ಮಳೆ ಹಾನಿ ಪ್ರದೇಶ ನೋಡುವುದಕ್ಕೆ ಬಂದದ್ದಾ? ಎಂದು ಮಾಧ್ಯಮದವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.ಕಳೆದ ನಾಲ್ಕು ದಿನಗಳಿಂದ ಸೋಮೇಶ್ವರ ಗುಡ್ಡದಿಂದ ಹಂತಹಂತವಾಗಿ ಮಣ್ಣು ಕುಸಿಯುತ್ತಿದೆ. ಯಾವುದೇ ಕ್ಷಣದಲ್ಲಿ ಭಾರೀ ಮಣ್ಣು ಕುಸಿದು ಉಡುಪಿ - ಉ.ಕ. ನಡುವೆ ಸಂಪರ್ಕ ಕಲ್ಪಿಸುವ ರಾಹೆ ಸಂಚಾರಕ್ಕೆ ಸ್ಥಗಿತಗೊಳ್ಳಲಿದೆ. ಇದಕ್ಕೆ ಈ ಗುಡ್ಡೆಯ ಮೇಲೆ ನಿರ್ಮಾಣಗೊಂಡಿರುವ ಖಾಸಗಿ ರೆಸಾರ್ಟ್ ಕಾರಣ ಎಂದು ಸ್ಥಳೀಯರು ಸಚಿವೆಯ ಗಮನಕ್ಕೆ ತರಲು ಕಾಯುತ್ತಿದ್ದರು. ಸಚಿವೆ ತಮ್ಮನ್ನು ಭೇಟಿ ಮಾಡಿಲ್ಲ ಎಂದು ಜನರಿಗೆ ಅಸಮಾಧಾನವಾಯಿತು.