ಕೆಡಿಸಿಸಿ ಬ್ಯಾಂಕ್‌ ಚುನಾವಣೆ: 24 ನಾಮಪತ್ರ ಸಲ್ಲಿಕೆ

| Published : Oct 18 2025, 02:02 AM IST

ಸಾರಾಂಶ

ಜಿಲ್ಲಾ ಮಧ್ಯವರ್ತಿ (ಕೆಡಿಸಿಸಿ) ಬ್ಯಾಂಕ್ ಚುನಾವಣೆಯ ನಾಮಪತ್ರ‌ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರ 17 ಅಭ್ಯರ್ಥಿಗಳಿಂದ 24 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಟ್ಟೂ 46 ಆಕಾಂಕ್ಷಿಗಳು 87 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಶಿರಸಿ: ಜಿಲ್ಲಾ ಮಧ್ಯವರ್ತಿ (ಕೆಡಿಸಿಸಿ) ಬ್ಯಾಂಕ್ ಚುನಾವಣೆಯ ನಾಮಪತ್ರ‌ ಸಲ್ಲಿಕೆಗೆ ಕೊನೆಯ ದಿನವಾದ ಶುಕ್ರವಾರ 17 ಅಭ್ಯರ್ಥಿಗಳಿಂದ 24 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಟ್ಟೂ 46 ಆಕಾಂಕ್ಷಿಗಳು 87 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ನಾಮಪತ್ರಗಳ ಪರಿಶೀಲನೆ ಕಾರ್ಯ ಅ. 18ರಂದು ನಡೆಯಲಿದ್ದು, ಅ. 19ರಂದು ನಾಮಪತ್ರ ವಾಪಸ್ ಪಡೆಯುವುದಕ್ಕೆ ಅವಕಾಶವಿದೆ. ಆ ನಂತರ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳು ಕಣದಲ್ಲಿ ಇರಲಿದ್ದಾರೆ ಎಂಬುದು ಅಂತಿಮವಾಗಲಿದ್ದು, ಅ. 25ರಂದು ಚುನಾವಣೆ ನಡೆಯಲಿದೆ.

ಕಾರವಾರ ಕ್ಷೇತ್ರದ ಶಾಸಕ ಸತೀಶ ಸೈಲ್ ಸೇರಿದಂತೆ ಹಲವು ಘಟಾನುಘಟಿಗಳು ನಾಮಪತ್ರ ಸಲ್ಲಿಸಿದರು. ಅಚ್ಚರಿ ಬೆಳವಣಿಗೆಯಲ್ಲಿ ಈಗಾಗಲೇ ಮಾರ್ಕೆಟಿಂಗ್‌ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಜತೆಯಲ್ಲಿ ಟಿಎಂಎಸ್ ನಿರ್ದೇಶಕ ರವಿ ಹೆಗಡೆ ಹುಳಗೋಳ ನಾಮಪತ್ರ ಸಲ್ಲಿಸಿದರು. ಇನ್ನು ಶಿರಸಿ ಕೃಷಿ ಪತ್ತಿನ ಸಹಕಾರಿ‌ ಕ್ಷೇತ್ರಕ್ಕೆ ಈಗಾಗಲೇ ನಾಮಪತ್ರ ಸಲ್ಲಿಸಿದ್ದ ಜಿ.ಆರ್. ಹೆಗಡೆ ಜತೆ ಬಂದ ಚಾರುಚಂದ್ರ ಶಾಸ್ತ್ರಿ ನಾಮಪತ್ರ ಸಲ್ಲಿಸಿದರು. ಇನ್ನು ಗೋಪಾಲಕೃಷ್ಣ ವೈದ್ಯ ಅವರ ಜತೆ ಜಿ.ವಿ. ಜೋಶಿ ನಾಮಪತ್ರ ಸಲ್ಲಿಸಿದರು. ಇದೇ‌ ಕ್ಷೇತ್ರಕ್ಕೆ ಎಸ್.ಎನ್. ಹೆಗಡೆ ದೊಡ್ನಳ್ಳಿ ನಾಮಪತ್ರ ಸಲ್ಲಿಸಿದರು. ಅಂಕೋಲಾದಿಂದ ಗೋಪಾಲಕೃಷ್ಣ ನಾಯಕ, ಜೋಯಿಡಾದಿಂದ‌ ಕೃಷ್ಣ ದೇಸಾಯಿ, ಸಿದ್ದಾಪುರದಿಂದ ಬಾಲಚಂದ್ರ ಹೆಗಡೆ, ಕುಮಟಾದಿಂದ ಗಜಾನನ ಪೈ, ಗ್ರಾಹಕರ ಸಹಕಾರಿಯಿಂದ ವಿನಾಯಕ ರಾ. ಹೆಗಡೆ, ನಿರಂಜನ ಭಟ್ಟ, ಹೊನ್ನಾವರ ತಾಲೂಕಿನ ಕೃಷಿ ಪತ್ತಿನ ಕ್ಷೇತ್ರದ ವಿ.ಕೆ. ವಿಶಾಲ, ಶಿವಾನಂದ ಹೆಗಡೆ ಕಡತೋಕ, ನಾರಾಯಣ ಹೆಗಡೆ ನಾಮಪತ್ರ ಸಲ್ಲಿಸಿದರು.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಹಾಗೂ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ, ಧಾರವಾಡ ಹಾಲು ಒಕ್ಕೂಟ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಸೇರಿದಂತೆ ಅನೇಕರು ನಾಮಪತ್ರ ಸಲ್ಲಿಸಿದ್ದು, ಒಟ್ಟೂ 46 ಅಭ್ಯರ್ಥಿಗಳಿಂದ 87 ನಾಮಪತ್ರಗಳು ಸಲ್ಲಿಕೆಯಾದವು.