ಸಾರಾಂಶ
ಗಂಗಾವತಿ: ಆನೆಗೊಂದಿ ಉತ್ಸವದಲ್ಲಿ ಸಾರ್ವಜನಕರಿಗೆ ಊಟಕ್ಕೆ ಮಾಡಿ ಉಳಿದಿದ್ದ ಅನ್ನ ಸೇವನೆ ಮಾಡಿದ ಪರಿಣಾಮವಾಗಿ 24 ಕುರಿಗಳು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.ಮಾ. 11 ಮತ್ತು 12ರಂದು 20 ಸಾವಿರಕ್ಕೂ ಹೆಚ್ಚು ಜನರ ಊಟಕ್ಕಾಗಿ ಅಡುಗೆ ಸಿದ್ಧಪಡಿಸಲಾಗಿತ್ತು. ಉಳಿದ ಅನ್ನವನ್ನು ಊಟದ ಸ್ಥಳದಲ್ಲಿ ಬಿಟ್ಟು ಹೋಗಿದ್ದರು. ಸಂಚಾರಿ ಕುರಿಗಳು ಅದನ್ನು ಸೇವನೆ ಮಾಡಿದ ಪರಿಣಾಮ 24 ಕುರಿಗಳು ಮೃತಪಟ್ಟಿವೆ. 276 ಕುರಿ ಮತ್ತು ಆಡುಗಳು ಅಸ್ವಸ್ಥಗೊಂಡಿವೆ.ಚಿಕ್ಕಬೆಣಕಲ್, ಆನೆಗೊಂದಿ ಮತ್ತು ಮಲ್ಲಾಪುರ ಗ್ರಾಮದ ಕುರಿಗಾಹಿಗಳು 300ಕ್ಕೂ ಹೆಚ್ಚು ಕುರಿಗಳು ಮತ್ತು ಆಡುಗಳನ್ನು ಮೇಯಿಸಲು ತಂದಿದ್ದರು. ಆ ಕುರಿಗಳು ಹಳಸಿದ ಅನ್ನ ಸೇವಿಸಿವೆ. ಹಳಸಿದ ಅನ್ನ ವಿಷಪೂರಿತವಾದ ಪರಿಣಾಮ ಕುರಿಗಳು ಅಸು ನೀಗಿವೆ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಜಾಕೀರ್ ಹುಸೇನ್ ತಿಳಿಸಿದ್ದಾರೆ.
ಚಿಕಿತ್ಸೆ: ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಉಳಿದ ಕುರಿಗಳು ಮತ್ತು ಆಡುಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಸಂಗಾಪುರ ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ. ಅರುಣ ಗುರು ತಿಳಿಸಿದ್ದಾರೆ.ಅಧಿಕಾರಿಗಳ ನಿರ್ಲಕ್ಷ್ಯ: ಉತ್ಸವ ಮುಗಿದ ನಂತರ ಸಾರ್ವಜನಿಕರಿಗೆ ಮಾಡಿದ್ದ ಆಹಾರ ಪದಾರ್ಥಗಳು ಹೆಚ್ಚು ಉಳಿದಿದ್ದರೆ ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಬೇಕಿತ್ತು. ಆದರೆ ಅಧಿಕಾರಿಗಳು ಮತ್ತು ಸಂಘಟಕರ ನಿರ್ಲಕ್ಷ್ಯದಿಂದ ಕುರಿಗಳು ಮೃತಪಟ್ಟಿವೆ. ಇದಕ್ಕೆ ಯಾರು ಹೊಣೆಗಾರರು ಎಂದು ಮೃತಪಟ್ಟ ಕುರಿಗಳ ಮಾಲೀಕರು ಪ್ರಶ್ನಿಸಿದ್ದಾರೆ.ಪರಿಹಾರಕ್ಕೆ ಒತ್ತಾಯ: ಕುರಿಗಳನ್ನು ಕಳೆದುಕೊಂಡ ಮಾಲೀಕರಿಗೆ ಸರ್ಕಾರ ಕೂಡಲೆ ಪರಿಹಾರ ನೀಡಬೇಕು ಮತ್ತು ಅಸ್ವಸ್ಥಗೊಂಡಿರುವ ಆಡು ಮತ್ತು ಕುರಿಗಳ ಚಿಕಿತ್ಸೆಗೆ ಮುತುವರ್ಜಿ ವಹಿಸಬೇಕು ಎಂದು ಯಾದವ ಸಂಘದ ಅಧ್ಯಕ್ಷರು ಒತ್ತಾಯಿಸಿದ್ದಾರೆ.