2478 ಅಭ್ಯರ್ಥಿಗಳು ಯುವ ನಿಧಿ ಯೋಜನೆಗೆ ನೋಂದಣಿ: ಪಾಟೀಲ

| Published : Jan 04 2025, 12:30 AM IST

ಸಾರಾಂಶ

ಲಕ್ಕುಂಡಿ ಮಹತ್ವ ಪಡೆದಿದ್ದು ಬೆಳಗಾವಿ ಅಧಿವೇಶನದಲ್ಲಿ ನಡೆದ ಸಚಿವ ಸಂಪುಟ ₹5 ಕೋಟಿ ಲಕ್ಕುಂಡಿ ಅಭಿವೃದ್ಧಿಗಾಗಿ ಮಂಜೂರು ಮಾಡಲಾಗಿದೆ

ಗದಗ: ಜಿಲ್ಲೆಯಲ್ಲಿ 2023-24ರಲ್ಲಿ 2478 ಅಭ್ಯರ್ಥಿಗಳು ಯುವನಿಧಿ ಯೋಜನೆಗೆ ನೋಂದಣಿ ಮಾಡಿಸಿದ್ದು, ಅವರಿಗೆ ₹4.12 ಕೋಟಿ ಡಿಬಿಟಿ ಮೂಲಕ ಸಂದಾಯಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಾಗಾವಿಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಯುವನಿಧಿ ಯೋಜನೆಯ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.

ಜಿಲ್ಲೆಯ ಐತಿಹಾಸಿಕ ಪಾರಂಪರಿಕ ಲಕ್ಕುಂಡಿಯು ಸಾಂಸ್ಕೃತಿಕ,ಐತಿಹಾಸಿಕ, ಶಿಲ್ಪಕಲಾ ನೈಪುಣ್ಯತೆಗೆ ತನ್ನದೇ ಆದ ಛಾಪು ಮೂಡಿಸಿದೆ. ಮುಂಬರುವ 2025 ಜ.26 ರಂದು ಜರುಗುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕ ರಾಜ್ಯದಿಂದ ಐತಿಹಾಸಿಕ ಲಕ್ಕುಂಡಿಯ ಬ್ರಹ್ಮ ಜಿನಾಲಯದ ಸ್ತಬ್ಧಚಿತ್ರ ಆಯ್ಕೆಯಾಗಿದ್ದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ ಎಂದರು.

ಲಕ್ಕುಂಡಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಈಗಾಗಲೇ ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ಲಕ್ಕುಂಡಿಯ ಕುರಿತು ತಿಳಿವಳಿಕೆ ನೀಡುವ ಮಹತ್ತರ ಕೆಲಸ ಮಾಡಲಾಗಿದೆ. ಈ ನಿಟ್ಟಿನಲ್ಲಿ ಲಕ್ಕುಂಡಿ ಮಹತ್ವ ಪಡೆದಿದ್ದು ಬೆಳಗಾವಿ ಅಧಿವೇಶನದಲ್ಲಿ ನಡೆದ ಸಚಿವ ಸಂಪುಟ ₹5 ಕೋಟಿ ಲಕ್ಕುಂಡಿ ಅಭಿವೃದ್ಧಿಗಾಗಿ ಮಂಜೂರು ಮಾಡಲಾಗಿದೆ ಎಂದರು.

ಗದಗ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ವಹಿಸಲಾಗುತ್ತಿದೆ. ಒಂದು ವೇಳೆ ನಗರದಲ್ಲಿ ನೀರಿನ ಸಮಸ್ಯೆ ಕುರಿತು ಸಾರ್ವಜನಿಕರಿಂದ ದೂರು ಬಂದಲ್ಲಿ ಅಂತಹ ಪ್ರದೇಶಗಳಲ್ಲಿ ತಕ್ಷಣವೇ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುವುದು. ಜಿಲ್ಲಾಧಿಕಾರಿಗಳಿಗೆ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಪೈಪ್‌ಲೈನ್‌ಗಳ ರಿಪೇರಿ ಕಾರ್ಯ ತುರ್ತು ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದರು.

ರೈತರಿಗೆ ಬರುವ ಬೆಳೆ ವಿಮೆ ಹಣ ಪೂರ್ಣ ಪ್ರಮಾಣದಲ್ಲಿ ತಲುಪಬೇಕು. ಒಂದು ವೇಳೆ ಈ ಮಧ್ಯದಲ್ಲಿ ಬ್ಯಾಂಕ್ ಮ್ಯಾನೇಜರ್, ವರ್ತಕರು, ದಲ್ಲಾಳಿಗಳು ಏನಾದರೂ ಸಂಭಾವನೆ ಕೇಳಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ವೇಳೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್‌ ಬಬರ್ಜಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧು ಪಾಟೀಲ, ಬಸವರಾಜ ಕಡೆಮನಿ ಸೇರಿದಂತೆ ಇತರರು ಇದ್ದರು.