ಶರಣಬಸವೇಶ್ವರರ 24ನೇ ಜಾತ್ರಾ ಮಹೋತ್ಸವ

| Published : Apr 01 2024, 12:53 AM IST

ಸಾರಾಂಶ

ಕೆಂಭಾವಿ ಪಟ್ಟಣದ ಆರಾಧ್ಯ ದೈವ ಮಹಾದಾಸೋಹಿ ಶರಣಬಸವೇಶ್ವರರ 24ನೇ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ಸಂಜೆ ಮಹಾರಥೋತ್ಸವ ಭಕ್ತರ ಜಯ ಘೋಷಗಳ ಮಧ್ಯೆ ಶ್ರದ್ಧಾ, ಭಕ್ತಿಯಿಂದ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ಕೆಂಭಾವಿ ಪಟ್ಟಣದ ಆರಾಧ್ಯ ದೈವ ಮಹಾದಾಸೋಹಿ ಶರಣಬಸವೇಶ್ವರರ 24ನೇ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ಸಂಜೆ ಮಹಾರಥೋತ್ಸವ ಭಕ್ತರ ಜಯ ಘೋಷಗಳ ಮಧ್ಯೆ ಶ್ರದ್ಧಾ, ಭಕ್ತಿಯಿಂದ ವಿಜೃಂಭಣೆಯಿಂದ ಜರುಗಿತು.

ಸಂಪ್ರದಾಯದಂತೆ ಶನಿವಾರ ಬೆಳಿಗ್ಗೆ ಹಿರೇಮಠದ ಚನ್ನಬಸವ ಶಿವಾಚಾರ್ಯರ ಸಾನಿಧ್ಯದಲ್ಲಿ ರಾಜಶೇಖರಯ್ಯ ಹಿರೇಮಠ ಹಾಗೂ ದೇವಸ್ಥಾನದ ಅರ್ಚಕ ವೀರೇಶ ಗಣಾಚಾರಿ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಪ್ರಾರಂಭವಾಗಿ ಸಾಯಂಕಾಲದವರೆಗೆ ವಿವಿಧ ಚಟುವಟಿಕೆಗಳು ನಡೆದವು.

ಸಾಯಂಕಾಲ 6 ಘಂಟೆಗೆ ಶೃಂಗಾರಗೊಂಡಿದ್ದ ರಥದಲ್ಲಿ ಶರಣಬಸವೇಶ್ವರರ ಮೂರ್ತಿಯನ್ನಿಟ್ಟು ಮೇಲೆ ಶಿಖರ ಏರುತ್ತಿದ್ದಂತೆ ಭಕ್ತರ ಜಯಕಾರ ಮುಗಿಲು ಮುಟ್ಟಿತು. ಮಕ್ಕಳು, ವೃದ್ಧರು, ಮಹಿಳೆಯರು ಹೊಸ ಬಟ್ಟೆಗಳನ್ನುಟ್ಟು ಶರಣಬಸವೇಶ್ವರ ಪ್ರಾಂಗಣದಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದಲೆ ಜಮಾವಣೆಗೊಂಡು ನಂತರ ನಡೆದ ರಥೋತ್ಸವವನ್ನು ಕಣ್ತುಂಬಿಕೊಂಡರು.ರಥೋತ್ಸವದ ನಂತರ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ತೇರಿಗೆ ಹಿಡಿಗಾಯಿಗಳನ್ನು ಒಡೆದು ಹರಕೆ ತೀರಿಸಿದರು. ಪಟ್ಟಣ ಸೇರಿದಂತೆ ಸುಮುತ್ತಲಿನ ಅನೇಕ ಗ್ರಾಮಗಳ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದ ದೃಶ್ಯ ಸರ್ವೇಸಾಮನ್ಯವಾಗಿತ್ತು.

ಈ ಸಂದರ್ಭದಲ್ಲಿ ಕಳೆದ ಹದಿನೈದು ದಿನಗಳಿಂದ ಗದಗಿನ ಶ್ರೀ ಸಿದ್ದೇಶ್ವರ ಶಾಸ್ತ್ರಿಗಳು ಹೇಳಿದ ಶ್ರೀ ಶರಣಬಸವೇಶ್ವರ ಮಹಾಪುರಾಣವೂ ಸಂಪನ್ನಗೊಂಡಿತು. ರಥೋತ್ಸವದ ನಂತರ ಪಟ್ಟಣದ ನೂರಾರು ಭಕ್ತರು ಶ್ರೀಶೈಲಕ್ಕೆ ಪಾದಯಾತ್ರೆ ಕೈಗೊಂಡರು.