ಸಾರಾಂಶ
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 28 ಸಕ್ಕರೆ ಕಾರ್ಖಾನೆಗಳಿವೆ. ಈ ಪೈಕಿ 3 ಸಕ್ಕರೆ ಕಾರ್ಖಾನೆಗಳು ರೈತರ ಬಿಲ್ ಬಾಕಿ ಉಳಿಸಿಕೊಂಡಿವೆ. ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳು ಜೂ.25 ರೊಳಗಾಗಿ ಕಾನೂನು ರೀತ್ಯ ಶೇ.15 ರಷ್ಟು ಬಡ್ಡಿ ಸಹಿತ ಬಾಕಿ ಮೊತ್ತ ಪಾವತಿಸಬೇಕು
ಬೆಳಗಾವಿ: ಜಿಲ್ಲೆಯಲ್ಲಿ ಒಟ್ಟು 28 ಸಕ್ಕರೆ ಕಾರ್ಖಾನೆಗಳಿವೆ. ಈ ಪೈಕಿ 3 ಸಕ್ಕರೆ ಕಾರ್ಖಾನೆಗಳು ರೈತರ ಬಿಲ್ ಬಾಕಿ ಉಳಿಸಿಕೊಂಡಿವೆ. ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳು ಜೂ.25 ರೊಳಗಾಗಿ ಕಾನೂನು ರೀತ್ಯ ಶೇ.15 ರಷ್ಟು ಬಡ್ಡಿ ಸಹಿತ ಬಾಕಿ ಮೊತ್ತ ಪಾವತಿಸಬೇಕು ಜಿಲ್ಲಾಧಿಕಾರಿ ನಿತೇಶ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಕಬ್ಬು ಬೆಳೆಗಾರರ ಹಾಗೂ ಸಕ್ಕರೆ ಕಾರ್ಖಾನೆಗಳ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಂದು ವೇಳೆ ನಿಗದಿತ ಗಡುವಿನೊಳಗಾಗಿ ಬಾಕಿ ಪಾವತಿಸದೇ ಇರುವ ಸಕ್ಕರೆ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಜೂ.25 ರೊಳಗಾಗಿ ಬಾಕಿ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಲಾಗುವುದು ಎಂದು ಸಕ್ಕರೆ ಕಾರ್ಖಾನೆಗಳು ಮುಚ್ಚಳಿಕೆ ಪತ್ರ ನೀಡುವಂತೆಯೂ ಅವರು ತಿಳಿಸಿದರು.
ಜೂ.25 ರೊಳಗಾಗಿ ರೈತರ ಬಾಕಿ ಮೊತ್ತ ಪಾವತಿಸದಿದ್ದಲ್ಲಿ ಅದರ ಮುಂದಿನ ಒಂದು ವಾರದಲ್ಲಿ ಮುಟ್ಟುಗೊಲು ಹಾಕಿಕೊಳ್ಳಲಾದ ಸಕ್ಕರೆ ಕಾರ್ಖಾನೆಗಳಲ್ಲಿನ ಸಕ್ಕರೆ ದಾಸ್ತಾನು ಹಾಗೂ ಸಾಮಗ್ರಿಗಳನ್ನು ಹರಾಜು ಹಾಕಿ ರೈತರ ಬಾಕಿ ಮೊತ್ತ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಕ್ಕರೆ ಕಾರ್ಖಾನೆಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದರು. ಜಿಲ್ಲೆಯಲ್ಲಿ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಿಂದ ಬರಬೇಕಾದ ಮೊತ್ತದ ಜತೆಗೆ ಶೇ.15 ರಷ್ಟು ಬಡ್ಡಿ ಸಮೇತ ಲೆಕ್ಕ ಹಾಕಿ ವರದಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿತೇಶ ಪಾಟೀಲ ಸೂಚಿಸಿದರು.
ಸಭೆಯಲ್ಲಿ ಮಾಜಿ ಸಚಿವ ಶಶಿಕಾಂತ ನಾಯಿಕ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ ಸೇರಿದಂತೆ ರೈತ ಮುಖಂಡರು ಹಾಗೂ ಕಾರ್ಖಾನೆಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕಬ್ಬಿನ ಬಾಕಿ ಬಿಲ್ ಪಾವತಿಗೆ ಗ್ಯಾಸ್, ಅಡುಗೆ ಸಾಮಗ್ರಿ ಇಟ್ಟು ಧರಣಿಬೆಳಗಾವಿ: ಕಬ್ಬಿನ ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿಲಿಂಡರ್, ಗ್ಯಾಸ್, ಪಾತ್ರೆ, ಅಡುಗೆ ಸಾಮಗ್ರಿ ಸಮೇತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಕಬ್ಬು ಕಳುಹಿಸಿದ ರೈತರಿಗೆ ಬಿಲ್ ನೀಡಲು ಸತಾಯಿಸುತ್ತಿರುವ ರಾಜ್ಯದ ಕಾರ್ಖಾನೆಗಳ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಅಡುಗೆ ಸಾಮಗ್ರಿಗಳೊಂದಿಗೆ ಧರಣಿ ಕುಳಿತ ರೈತ ಸಂಘದ ಮುಖಂಡರು, ಕಾರ್ಯಕರ್ತರು ಬೇಡಿಕೆ ಈಡೇರುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.ಮಾಜಿ ಸಚಿವ ಶಶಿಕಾಂತ ನಾಯಿಕ ಮಾತನಾಡಿ, ರಾಜ್ಯದ 64 ಕಾರ್ಖಾನೆಗಳ ₹ 604 ಕೋಟಿ ಬಾಕಿಯಿದೆ. ಅದರಲ್ಲಿ ಬೆಳಗಾವಿ ಜಿಲ್ಲೆಯ ₹ 300 ಕೋಟಿ ಬಾಕಿ ಇದೆ. ಹಾಗಾಗಿ, ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಕೂಡ ಬಾಕಿ ಬಿಲ್ ಬಿಡುಗಡೆಗೆ ಒತ್ತಾಯಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ, ಸಕ್ಕರೆ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲಾಧಿಕಾರಿ ಇತ್ತ ಗಮನಹರಿಸಬೇಕು.
ಈ ಮೂಲಕ ರೈತರ ಹಿತ ಕಾಪಾಡಿ, ಅವರ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ರೈತ ಮುಖಂಡ ಪ್ರಕಾಶ ನಾಯಿಕ ಮಾತನಾಡಿ, ಕಬ್ಬು ಕಳಿಸಿದ 15 ದಿನಗಳೊಳಗೆ ಬಿಲ್ ನೀಡುವಂತೆ ನಿಯಮವಿದ್ದರೂ ರಾಜ್ಯದ ಸಹಕಾರಿ ಮತ್ತು ಖಾಸಗಿ ಒಡೆತನದ ಕಾರ್ಖಾನೆಗಳಿಂದ ₹604 ಕೋಟಿ ಬಿಲ್ ಬಾಕಿಯಿದೆ. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕಿದ್ದ ಕಾರ್ಖಾನೆಗಳು ಅನ್ಯಾಯ ಮಾಡುತ್ತಿವೆ. ಬಾಕಿ ಬಿಲ್ ಗೆ ಸರ್ಕಾರ ಕಾನೂನಾತ್ಮಕವಾಗಿ ಕಾರ್ಖಾನೆಗಳಿಗೆ ನೋಟಿಸ್ ನೀಡಿವೆ. ಆದರೂ, ಹಣ ಮಾತ್ರ ಜಮೆ ಆಗಿಲ್ಲ. ಸರ್ಕಾರ ಜನರ ಕಿವಿಗೆ ಹೂ ಇಟ್ಟು, ಕೈ ಚಿಪ್ಪು ಕೊಡುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಚೂನಪ್ಪ ಪೂಜಾರಿ, ಮುಖಂಡರಾದ ಚಾಮರಸ ಮಾಲಿಪಾಟೀಲ ಪಿ.ಎಸ್.ಬೋಗುರ ಸೇರಿ ಮತ್ತಿತರರು ಇದ್ದರು.