ಹುಲಿಗೆಮ್ಮ ಜಾತ್ರೆಗೆ 25 ಲಕ್ಷ ಭಕ್ತರ ನಿರೀಕ್ಷೆ

| Published : May 13 2025, 11:57 PM IST

ಸಾರಾಂಶ

ಮಂಗಳವಾರದಿಂದ (ಮೇ 13ರಿಂದ ಜೂ.12) ಒಂದು ತಿಂಗಳು ನಡೆಯುವ ಹುಲಿಗಮ್ಮ ದೇವಿ ಜಾತ್ರೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ 20ರಿಂದ 25 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

ಮುನಿರಾಬಾದ್:

ಮಂಗಳವಾರದಿಂದ (ಮೇ 13ರಿಂದ ಜೂ.12) ಒಂದು ತಿಂಗಳು ನಡೆಯುವ ಹುಲಿಗಮ್ಮ ದೇವಿ ಜಾತ್ರೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ 20ರಿಂದ 25 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.

ಮಂಗಳವಾರ ಹುಲಿಗಮ್ಮ ದೇವಸ್ಥಾನದ ಆವರಣದಲ್ಲಿ ಅಮ್ಮನವರ ಮಹಾ ದಾಸೋಹ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ದೇವಸ್ಥಾನದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಮಹಾ ದಾಸೋಹ ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷ ಇದು ಹೀಗೆ ಮುಂದುವರಿಯಲಿದೆ ಎಂದರು.

ಮಂಗಳವಾರದ ದಾಸೋಹದಲ್ಲಿ ಬೂಂದಿ, ಜಿಲೇಬಿ, ಹುಗ್ಗಿ ಹಾಗೂ ಮೈಸೂರ ಪಾಕ್, ರೊಟ್ಟಿ, ಪಲ್ಯೆ, ಪಲಾವ್, ಮಿರ್ಚಿ, ಅನ್ನ ಸಾಂಬರ ನೀಡಲಾಗಿದೆ ಎಂದ ಅವರು, ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ಹಾಗೂ ಪ್ರಸಾದ ಒದಗಿಸಲಾಗುವುದು. ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳ್ಳರ ಮೇಲೆ ನಿಗಾ ಇಡಲು ಹಾಗೂ ಭಕ್ತರ ಭದ್ರತೆಗೆ 120 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.

ಈ ವೇಳೆ ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಂಸದ ಕರಡಿ ಸಂಗಣ್ಣ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಕಾಶ ರಾವ್, ಉದ್ಯಮಿಗಳಾದ ವೀರನಗೌಡ ಪಾಟೀಲ್, ಶರಣಗೌಡ ಪಾಟೀಲ್, ನಿವೃತ್ತ ಶಿಕ್ಷಕ ಹನುಮಂತಪ್ಪ ನಾಯಕ, ಗ್ರಾಮಸ್ಥರಾದ ವೀರಣ್ಣ, ಅನಿಲ್, ಪಂಪಾಪತಿ ರಾಟಿ, ವಿಜಯಕುಮಾರ, ಪಾಲಾಕ್ಷಪ್ಪ ಗುಂಗಾಡಿ, ಪ್ರಭುರಾಜ್ ಪಾಟೀಲ್ ಉಪಸ್ಥಿತರಿದ್ದರು.