ಭಟ್ಕಳ ಹಳೇ ಮೀನು ಮಾರುಕಟ್ಟೆಗೆ ₹25 ಲಕ್ಷ ಅನುದಾನ ನೀಡಿ: ಮಾಜಿ ಶಾಸಕ ಸುನೀಲ ನಾಯ್ಕ ಆಗ್ರಹ

| Published : Oct 05 2025, 01:01 AM IST

ಭಟ್ಕಳ ಹಳೇ ಮೀನು ಮಾರುಕಟ್ಟೆಗೆ ₹25 ಲಕ್ಷ ಅನುದಾನ ನೀಡಿ: ಮಾಜಿ ಶಾಸಕ ಸುನೀಲ ನಾಯ್ಕ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಹಳೇ ಬಸ್ ನಿಲ್ದಾಣದ ಹಳೇ ಮೀನು ಮಾರುಕಟ್ಟೆಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು.

ಸಚಿವರಿಂದ ಸಾಧ್ಯವಾಗದಿದ್ದಲ್ಲಿ ಹಣ ಸಂಗ್ರಹಿಸಿ ಅಭಿವೃದ್ಧಿ ಪಡಿಸಲು ಅವಕಾಶ ಕೊಡಿ

ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ಹಳೇ ಬಸ್ ನಿಲ್ದಾಣದ ಹಳೇ ಮೀನು ಮಾರುಕಟ್ಟೆಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು. ಹಳೇ ಮೀನು ಮಾರುಕಟ್ಟೆಗೆ ಸರ್ಕಾರದಿಂದ ₹25 ಲಕ್ಷ ಅನುದಾನ ಒದಗಿಸಿ, ಅಭಿವೃದ್ಧಿಪಡಿಸಿ ಮೀನು ಮಾರಾಟಕ್ಕೆ ಅನುಕೂಲ ಮಾಡಿಕೊಡಿ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಅವರು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರನ್ನು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ಹಳೇ ಮೀನು ಮಾರುಕಟ್ಟೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಮೀನು ಮಾರುಕಟ್ಟೆ ದುರಸ್ತಿ ಮಾಡುವ ಬಗ್ಗೆ ಕೊಟ್ಟ ಭರವಸೆಯಂತೆ ನಡೆದುಕೊಳ್ಳಬೇಕು. ಅವರಿಂದ ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ ಎಂದಾದಲ್ಲಿ ಹಳೇ ಮೀನು ಮಾರುಕಟ್ಟೆಯನ್ನು ನಾವೇ ಹಣ ಸಂಗ್ರಹಿಸಿ ಅಭಿವೃದ್ಧಿ ಪಡಿಸಲು ಅವಕಾಶ ಮಾಡಿಕೊಡಿ ಎಂದು ಹೇಳಿದರು.

ಹೊಸ ಮೀನು ಮಾರುಕಟ್ಟೆ ಅವೈಜ್ಞಾನಿಕವಾಗಿದೆ. ಹೊಸ ಮೀನು ಮಾರುಕಟ್ಟೆಯಲ್ಲಿ 50 ಜನ ಕುಳಿತು ಮೀನು ಮಾರಾಟ ಮಾಡಲು ಸಾಧ್ಯವಿಲ್ಲ. ಹೀಗಾಗಿ ಹೊಸ ಮೀನು ಮಾರುಕಟ್ಟೆಯನ್ನು ತಕ್ಷಣ ಬಂದ್ ಮಾಡಿ ಹಳೇ ಮೀನು ಮಾರುಕಟ್ಟೆಯನ್ನೇ ಅಭಿವೃದ್ಧಿಪಡಿಸುವ ಕೆಲಸವನ್ನು ಸಚಿವರು ಮಾಡಬೇಕು. ಮೀನು ಮಾರುಕಟ್ಟೆಯ ಬಗ್ಗೆ ಉಂಟಾದ ಧರ್ಮ ದಂಗಲ್‌ ನಿಲ್ಲಿಸಿ ಎಂದ ಅವರು, ನಿಮಗೆ ಹಿಂದೂಗಳು ಮತ ಹಾಕಿದ್ದಾರೆ. ಅವರಿಗೆ ದ್ರೋಹ ಎಸಗುವ ಕೆಲಸ ಮಾಡಬೇಡಿ. ಭಟ್ಕಳದ ರಸ್ತೆಯಲ್ಲಿ ಓಡಾಡದ ಪರಿಸ್ಥಿತಿ ಇದೆ. ರಸ್ತೆ ಸೇರಿದಂತೆ ಅಭಿವೃದ್ಧಿ ಕೆಲಸ ಮಾಡಿ. ರೈತರ ಬಿಪಿಎಲ್ ಕಾರ್ಡ ಕಸಿದುಕೊಳ್ಳಬೇಡಿ. ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿದ್ದು, ಬಗೆಹರಿಸುವ ಕೆಲಸ ಮಾಡಿ. ಮತ ಹಾಕಿದ ಜನತೆ ದ್ರೋಹ ಮಾಡಬೇಡಿ ಎಂದರು.

ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಹಳೇ ಮೀನು ಮಾರುಕಟ್ಟೆ ಸ್ಥಳಾಂತರ ಆಗಲು ಬಿಡುವುದಿಲ್ಲ. ಪುರಸಭೆಯ ವ್ಯಾಪ್ತಿಯಲ್ಲಿ ಹಿಂದೂಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ಪುರಸಭೆಯವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದ್ದಾರೆ. ಪಟ್ಟಣದ ಬಂದರು ರಸ್ತೆ ಮುಂತಾದ ಕಡೆ ಬಹುಮಹಡಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದ್ದರೂ ಪುರಸಭೆಯವರ ಕಣ್ಣಿಗೆ ಕಾಣುತ್ತಿಲ್ಲ ಎಂದು ಆರೋಪಿಸಿದರು.

ಮಾಜಿ ಸೈನಿಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಆಸರಕೇರಿ ಮಾತನಾಡಿ, ಭಟ್ಕಳ ಪುರಸಭೆಯ ಅಧಿಕಾರಿಗಳು ಒಂದು ಕೋಮಿನ ಸದಸ್ಯರ ಭಯದಿಂದ ಕೆಲಸ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆಗೆ ತೊಂದರೆ ಉಂಟಾದರೆ ಅದಕ್ಕೆ ನೇರ ಕಾರಣ ಪುರಸಭೆಯವರೇ ಆಗಲಿದ್ದಾರೆ. ಯಾರದ್ದೋ ಒತ್ತಡಕ್ಕೆ ಮಣಿದು ಹಳೇ ಮೀನು ಮಾರುಕಟ್ಟೆಗೆ ಅನುದಾನ ಒದಗಿಸುತ್ತಿಲ್ಲ. ಮುಗ್ದಂ ಕಾಲನಿಯ ಜಾನುವಾರು ಮೂಳೆ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಡಿಗ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಧರ ನಾಯ್ಕ ಇದ್ದರು.