ಉತ್ತರ ಕನ್ನಡಕ್ಕೆ 252 ಬಿಎಸ್‌ಎನ್‌ಎಲ್‌ ಟವರ್‌ ಮಂಜೂರು: ಸಂಸದ ಕಾಗೇರಿ

| Published : Dec 01 2024, 01:31 AM IST

ಉತ್ತರ ಕನ್ನಡಕ್ಕೆ 252 ಬಿಎಸ್‌ಎನ್‌ಎಲ್‌ ಟವರ್‌ ಮಂಜೂರು: ಸಂಸದ ಕಾಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಗೆ ೪ಜಿ ತರಂಗಾಂತರ ಯೋಜನೆಯಲ್ಲಿ ೨೫೨ ಹೊಸ ಟವರ್‌ಗಳು ಮಂಜೂರಾಗಿದ್ದು, ಅವುಗಳಲ್ಲಿ ಸುಮಾರು ೫೦ ಮೈಕ್ರೋ ತರಂಗಾಂತರದ ಟವರ್‌ಗಳು ಹಾಗೂ ೨೦೨ ಒಎಫ್‌ಸಿ ಹೊಂದಿದ ಟವರ್‌ಗಳಾಗಿದ್ದು, ಈ ವರ್ಷದ ಅಂತ್ಯದೊಳಗಡೆ ಸುಮಾರು ೫೦ ಟವರ್‌ಗಳು ಸಿದ್ಧವಾಗಿ ಜನರ ಉಪಯೋಗಕ್ಕೆ ಲಭಿಸಲಿದೆ.

ಶಿರಸಿ: ತಾಲೂಕಿನ ಬಿಸ್ಲಕೊಪ್ಪ ಗ್ರಾಪಂ ವ್ಯಾಪ್ತಿ ಯ ಜಂಬೆಕೊಪ್ಪದಲ್ಲಿ ನೂತನವಾಗಿ ನಿರ್ಮಿಸಲಾದ ಬಿಎಸ್‌ಎನ್‌ಎಲ್ ಟವರ್‌ನ ನೆಟ್‌ವರ್ಕ್‌ನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಲೋಕಾರ್ಪಣೆಗೊಳಿಸಿದರು.ನಂತರ ಮಾತನಾಡಿದ ಅವರು, ಜಿಲ್ಲೆಗೆ ೪ಜಿ ತರಂಗಾಂತರ ಯೋಜನೆಯಲ್ಲಿ ೨೫೨ ಹೊಸ ಟವರ್‌ಗಳು ಮಂಜೂರಾಗಿದ್ದು, ಅವುಗಳಲ್ಲಿ ಸುಮಾರು ೫೦ ಮೈಕ್ರೋ ತರಂಗಾಂತರದ ಟವರ್‌ಗಳು ಹಾಗೂ ೨೦೨ ಒಎಫ್‌ಸಿ ಹೊಂದಿದ ಟವರ್‌ಗಳಾಗಿದ್ದು, ಈ ವರ್ಷದ ಅಂತ್ಯದೊಳಗಡೆ ಸುಮಾರು ೫೦ ಟವರ್‌ಗಳು ಸಿದ್ಧವಾಗಿ ಜನರ ಉಪಯೋಗಕ್ಕೆ ಲಭಿಸಲಿದೆ.

ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ವಿಸ್ತಾರಗೊಳಿಸಲು ೭೫ ಹೊಸ ಟವರ್‌ಗೆ ಬೇಡಿಕೆ ಸಲ್ಲಿಸಲಾಗಿದ್ದು, ಕೇಂದ್ರ ಸಚಿವರಿಂದಲೂ ಒಪ್ಪಿಗೆ ದೊರೆತಿದೆ. ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ೨೩೩ ಟವರ್‌ಗಳಲ್ಲಿ ೮೬ ಟವರ್‌ಗಳನ್ನು ೪ಜಿಗೆ ಉನ್ನತೀಕರಿಸಲಾಗಿದ್ದು, ಇನ್ನುಳಿದ ಟವರ್‌ಗೆ ಡಿಸೆಂಬರ್ ಅಂತ್ಯದೊಳಗಡೆ ೪ಜಿಗೆ ಮೇಲ್ದರ್ಜೆಗೇರಿಸಲಾಗುವುದು. ಅರಣ್ಯ ಜಾಗದಲ್ಲಿ ಟವರ್ ನಿರ್ಮಾಣಕ್ಕೂ ಒಪ್ಪಿಗೆ ದೊರೆತಿದೆ ಎಂದರು. ಇಂದಿನ ದಿನದಲ್ಲಿ ಪ್ರತಿಯೊಂದಕ್ಕೂ ಮೊಬೈಲ್ ನೆಟ್‌ವರ್ಕ್ ತೀರಾ ಅವಶ್ಯವಾಗಿರುವ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್ ಬಲಗೊಳ್ಳಬೇಕೆಂದು ಅಗತ್ಯವಿರುವ ಎಲ್ಲ ಪ್ರದೇಶಗಳಲ್ಲಿಯೂ ಬಿಎಸ್‌ಎನ್‌ಎಲ್ ವತಿಯಿಂದ ಟವರ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.ಈ ವೇಳೆ ಬಿಎಸ್‌ಎನ್‌ಎಲ್ ಡಿಜಿಎಂ ರಾಜಕುಮಾರ, ಎಜಿಎಂಗಳಾದ ಸಂತೋಷ ಚೌವ್ಹಾಣ್, ಅವಿನಾಶ ಪೂಜಾರಿ, ಬಿಸ್ಲಕೊಪ್ಪ ಗ್ರಾಪಂ ಸದಸ್ಯ ನರೇಂದ್ರ ಶಾಸ್ತ್ರೀ, ಪ್ರಮುಖರಾದ ಶಾಂತಾರಾಮ ಶಾಸ್ತ್ರೀ, ಶಂಕರ ದೇವಾಡಿಗ, ಗಜಾನನ ದೇವಾಡಿಗ, ರಘು ಶೆಟ್ಟಿ, ಆರ್.ವಿ. ಹೆಗಡೆ ಚಿಪಗಿ, ಸದಾನಂದ ಭಟ್ಟ ನಿಡಗೋಡ, ಎಲ್.ಟಿ. ಪಾಟೀಲ, ಇಸಳೂರು ಗ್ರಾಪಂ ಸದಸ್ಯ ಪ್ರಸನ್ನ ಹೆಗಡೆ ಮತ್ತಿತರರು ಇದ್ದರು.

ಲಂಚ ಪಡೆದ ಗ್ರಾಮಲೆಕ್ಕಾಧಿಕಾರಿಗೆ ಶಿಕ್ಷೆ

ಕಾರವಾರ: ಲಂಚ ಪಡೆದಿದ್ದ ಗ್ರಾಮ ಲೆಕ್ಕಾಧಿಕಾರಿ ಗಿರೀಶ ರಣದೇವಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಂಡ, ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.2019ರಲ್ಲಿ ಜಮೀನಿನ ಖಾತೆ ಬದಲಾವಣೆ ಮಾಡಿ ಕೊಡಲು ಹಳಿಯಾಳದ ರೈತರೊಬ್ಬರಿಂದ ಗಿರೀಶ ₹3000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆ ರೈತರಿಂದ ₹3000 ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಆಪಾದಿತ ನೌಕರರ ವಿರುದ್ಧ ವಿಶೇಷ ಮತ್ತು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ದೋಷಾರೋಪಣ ಪತ್ರ ಸಲ್ಲಿಕೆಯಾಗಿ, ವಿಚಾರಣೆ ನಡೆದಿದ್ದು, ಆರೋಪ ಸಾಬೀತಾದ ಹಿನ್ನೆಲೆ ಆರೋಪಿಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ- 1988ರ ಕಲಂ 7ರಡಿ 4 ವರ್ಷ ಕಠಿಣ ಶಿಕ್ಷೆ ಹಾಗೂ ₹5 ಸಾವಿರ ದಂಡ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿ 3 ತಿಂಗಳು ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಆದೇಶ ಹೊರಡಿಸಿದ್ದಾರೆ. ವಿಶೇಷ ಸರ್ಕಾರಿ ಆಭಿಯೋಜಕ ಲಕ್ಷ್ಮೀಕಾಂತ ಪ್ರಭು ವಾದ ಮಂಡಿಸಿದ್ದರು.